ADVERTISEMENT

ಕೃಷಿ ಸಾಲಕ್ಕಾಗಿ ಒತ್ತಾಯಿಸಿ ಬ್ಯಾಂಕ್‌ ಮಂದೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:02 IST
Last Updated 1 ಜೂನ್ 2023, 16:02 IST
ಕೃಷಿ ಸಾಲ ಕೊಡುವಂತೆ, ನಕಲಿ ಖಾತೆದಾರರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಚಾಮರಾಜನಗರದ ಬ್ಯಾಂಕ್ ಆಫ್ ಬರೋಡಾ ಶಾಖಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು
ಕೃಷಿ ಸಾಲ ಕೊಡುವಂತೆ, ನಕಲಿ ಖಾತೆದಾರರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಚಾಮರಾಜನಗರದ ಬ್ಯಾಂಕ್ ಆಫ್ ಬರೋಡಾ ಶಾಖಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ಕೃಷಿ ಸಾಲ ಕೊಡುವಂತೆ ಮತ್ತು ನಕಲಿ ಖಾತೆದಾರರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ರೈತರು ಗುರುವಾರ ನಗರದ ಬ್ಯಾಂಕ್ ಆಫ್ ಬರೋಡಾ ಶಾಖಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಬ್ಯಾಂಕ್ ವ್ಯವಸ್ಥಾಪಕರು, ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಚಾಮರಾಜನಗರ– ಮೈಸೂರು ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ನೂರಾರು ರೈತರ ಖಾತೆಯನ್ನು ನಕಲಿ ಖಾತೆ ಎಂದು ಗುರುತಿಸಲಾಗಿದೆ. ಇದರಿಂದಾಗಿ ರೈತರಿಗೆ ಹೊಸ ಕೃಷಿ ಸಾಲ ಕೊಡುತ್ತಿಲ್ಲ. ಸಾಲ ತೀರುವಳಿ ಮಾಡಿಕೊಳ್ಳಲು ಮುಂದೆ ಬರುವ ರೈತರಿಂದ ಹೆಚ್ಚುವರಿ ಹಣ ವಸೂಲು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಬೇಬಾಕಿ ಪತ್ರ ಕೊಡುತ್ತಿಲ್ಲ. ಅವರಿಗೆ ಹೊಸ ಕೃಷಿ ಸಾಲ ಕೊಡದೆ ಬ್ಯಾಂಕ್ ಅಧಿಕಾರಿಗಳು ರೈತರ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ರೈತರು ಹೊಸ ಕೃಷಿ ಸಾಲ ಕೇಳಲು ಬ್ಯಾಂಕ್‌ಗೆ ಬಂದರೆ ಇಲ್ಲಿನ ಸಿಬ್ಬಂದಿ, ‘ನಿಮ್ಮದು ನಕಲಿ ಖಾತೆ’ ಎಂದು ಹೇಳುವ ಮೂಲಕ ರೈತರಿಗೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳಿಂದ ಖಾತೆಗೆ ಬರುವ ಸಹಾಯಧನ, ಪರಿಹಾರ ಹಣವನ್ನು ರೈತರಿಗೆ ಕೊಡುತ್ತಿಲ್ಲ. ಸಿಬಿಲ್ ಸ್ಕೋರ್ ಕೇಳುತ್ತಾರೆ. ಅನೇಕ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಗುಳುಂ ಮಾಡಿ ಪರಾರಿಯಾಗಿದ್ದಾರೆ. ಅವರಿಗೆ ಯಾರೂ ಸಿಬಿಲ್‌ ಸ್ಕೋರ್‌ ಕೇಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಸಾಲದ ಹಣ ಕಟ್ಟಿರುವ ರೈತರಿಗೆ ಹೊಸ ಸಾಲ ಕೊಡಬೇಕು. ನಕಲಿ ಖಾತೆದಾರರನ್ನು ಗುರುತಿಸಿ ಬ್ಯಾಂಕ್‌ನಲ್ಲಿ ಅವರ ಭಾವಚಿತ್ರ ಹಾಕಬೇಕು. ಬ್ಯಾಂಕ್‌ನಲ್ಲಿ ನಕಲಿ ಖಾತೆ ಹೊಂದಿರುವವರ ವಿರುದ್ದ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ಕ್ರಮಕೈಗೊಳ್ಳಬೇಕು’ ಎಂದು ಭಾಗ್ಯರಾಜ್‌ ಆಗ್ರಹಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ  ಬ್ಯಾಂಕ್ ವ್ಯವಸ್ಥಾಪಕ ಓಂರಾಜು, 15 ದಿನಗಳೊಳಗೆ ಕೃಷಿ ಸಾಲ ಕೊಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ  ಹಾಲಿನ ನಾಗರಾಜು, ಪ್ರಧಾನ‌ ಕಾರ್ಯದರ್ಶಿ  ಮಲೆಯೂರು ಹರ್ಷ, ಉಪಾಧ್ಯಕ್ಷ ಹೆಗ್ಗೋಠಾರ ಶಿವಸ್ವಾಮಿ, ಪ್ರವೀಣ್, ಶಿವಮೂರ್ತಿ, ಚಂದ್ರಪ್ಪ, ಕೆಂಪಣ್ಣ, ಸುಂದರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.