ADVERTISEMENT

PV Web Exclusive: ಚಾಮರಾಜನಗರಕ್ಕೆ ಕಳಶಪ್ರಾಯವಾದ ವೈದ್ಯಕೀಯ ಕಾಲೇಜು ಆಸ್ಪತ್ರೆ

ಸೂರ್ಯನಾರಾಯಣ ವಿ
Published 20 ಜನವರಿ 2021, 10:06 IST
Last Updated 20 ಜನವರಿ 2021, 10:06 IST
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ
ಚಾಮರಾಜನಗರ ವೈದ್ಯಕೀಯ ಕಾಲೇಜಿನ ನೋಟ   

ನೈಸರ್ಗಿಕವಾಗಿ, ಸಾಂಸ್ಕೃತಿಕವಾಗಿ ‘ಸಿರಿವಂತ’ವಾಗಿದ್ದರೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ಕಾರಣಗಳಿಗಾಗಿ ‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿರುವ ಗಡಿಜಿಲ್ಲೆ ಚಾಮರಾಜನಗರ ಆ ಹಣೆಪಟ್ಟಿಯನ್ನು ಕಿತ್ತೆಸುವ ಸಿದ್ಧತೆಯಲ್ಲಿದೆ.

ಹೆಚ್ಚು ಕೈಗಾರಿಕೆಗಳು ಇನ್ನೂ ಸ್ಥಾಪನೆಯಾಗದೇ ಇರುವುದರಿಂದ ಜಿಲ್ಲೆಯ ಆರ್ಥಿಕ ಪ್ರಗತಿ ನಿಧಾನವಾಗಿರುವುದು ನಿಜ. ಆದರೆ, ಶೈಕ್ಷಣಿಕ ಕ್ಷೇತ್ರದಲ್ಲಂತೂ ಜಿಲ್ಲೆ ವೇಗವಾಗಿ ಪ್ರಗತಿಪಥದಲ್ಲಿ ಹೆಜ್ಜೆ ಹಾಕುತ್ತಿದೆ. ವೈದ್ಯಕೀಯ ಕಾಲೇಜು, ಎಂಜಿಯರಿಂಗ್‌ ಕಾಲೇಜು, ಕೃಷಿ ಕಾಲೇಜು, ಕಾನೂನು ಕಾಲೇಜುಗಳು (ತರಗತಿಗಳು ಇನ್ನೂ ಆರಂಭವಾಗಿಲ್ಲ) ಜಿಲ್ಲೆಯಲ್ಲಿ ಸ್ಥಾಪನೆಗೊಂಡು ಸಾವಿರಾರು ಮಕ್ಕಳಿಗೆ ಜ್ಞಾನ ಧಾರೆ ಎರೆಯುತ್ತಿವೆ.

ಸರ್ಕಾರ ಸ್ಥಾಪಿಸಿರುವ ಈ ಶಿಕ್ಷಣ ಸಂಸ್ಥೆಗಳ ಪೈಕಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಐಎಂಎಸ್‌) ಅಥವಾ ವೈದ್ಯಕೀಯ ಕಾಲೇಜು, ಒಂದೆರಡು ವರ್ಷಗಳಲ್ಲಿ ಗಡಿ ಜಿಲ್ಲೆಗೇ ಕಳಶಪ್ರಾಯವಾಗಲಿದೆ. ವೈದ್ಯಕೀಯ ಕಾಲೇಜಿನ ಭಾಗವಾಗಿ 450 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಉದ್ಘಾಟನೆಗೊಳ್ಳಲಿದೆ. ಅದಾಗಿ ಕೆಲವು ತಿಂಗಳುಗಳಲ್ಲಿ ಆಸ್ಪತ್ರೆ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ADVERTISEMENT

ಈಗಿರುವ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ) 300 ಹಾಸಿಗೆ ಸಾಮರ್ಥ್ಯದ್ಧಾಗಿದ್ದು, 450 ಆಸ್ಪತ್ರೆಗಳ ಹೊಸ ಆಸ್ಪತ್ರೆ ಪೂರ್ಣಗೊಂಡಾಗ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಒಟ್ಟುಹಾಸಿಗೆ ಸಾಮರ್ಥ್ಯ 750ಕ್ಕೆ ಹೆಚ್ಚಲಿದ್ದು, ಜಿಲ್ಲೆಯ ಜನರಿಗೆ ಪರಿಪೂರ್ಣ ಆರೋಗ್ಯ ಸೇವೆ ಲಭಿಸಲಿದೆ. ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೂ ಜಿಲ್ಲೆಯಲ್ಲೇ ಚಿಕಿತ್ಸೆ ದೊರಕಲಿದೆ.

ಎಂಟು ವರ್ಷಗಳ ಹಾದಿ...

1997ರಲ್ಲಿ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾದ ನಂತರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ಕೂಗು ಕೇಳಿ ಬಂದಿತ್ತು. 2012ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಏಳು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿತ್ತು. 2012ರ ಅಕ್ಟೋಬರ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗದಗ, ಹಾವೇರಿ, ಚಿತ್ರದುರ್ಗ, ಕೊಡಗು, ಚಾಮರಾಜನಗರ, ತುಮಕೂರು ಮತ್ತು ಕೊಪ‍್ಪಳಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಕಾಲೇಜು ಆರಂಭಿಸಲು ತೀರ್ಮಾನಿಸಲಾಗಿತ್ತು. ಆರಂಭಿಕ ಅನುದಾನವಾಗಿ ಪ್ರತಿ ಕಾಲೇಜಿಗೆ ತಲಾ ₹5 ಕೋಟಿ ಬಿಡುಗಡೆ ಮಾಡಲಾಗಿತ್ತು.

ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಿಲ್ಲೆಯಲ್ಲಿ ಕಾಲೇಜು ಸ್ಥಾಪನೆಗೆ ಒತ್ತು ನೀಡಿ, ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕಾರ್ಯಾರಂಭ ಆಗುವಂತೆ ಮಾಡಿತು.

ಸಿಗದ ಅನುಮತಿ: ವೈದ್ಯಕೀಯ ಕಾಲೇಜು ಆರಂಭಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಈಗ ಅದು ರಾಷ್ಟ್ರೀಯ ವೈದ್ಯಕೀಯ ಆಯೋಗ) ಹಲವು ಮಾನದಂಡಗಳನ್ನು ರೂಪಿಸಿತ್ತು. ಅವುಗಳನ್ನು ಪೂರೈಸುವುದೇ ಜಿಲ್ಲಾಡಳಿತಕ್ಕೆ ಆ ಸಮಯದಲ್ಲಿ ದೊಡ್ಡ ಸವಾಲು ಆಗಿತ್ತು.

‘ಕಾಲೇಜಿಗಾಗಿ 350 ಹಾಸಿಗೆಗಳ ಆಸ್ಪತ್ರೆ ಅಗತ್ಯವಿತ್ತು. ಆಗ ಜಿಲ್ಲಾಸ್ಪತ್ರೆಗೆ ಇದ್ದುದು 250 ಹಾಸಿಗೆ ಸಾಮರ್ಥ್ಯ. ಕಾಲೇಜು, ಹಾಸ್ಟೆಲ್‌ ಕಟ್ಟಡಗಳೂ ಇರಬೇಕಾಗಿತ್ತು. ಕಟ್ಟಡ ಇರಲಿ, ಭೂಮಿಯೂ ಇರಲಿಲ್ಲ. ಕನಿಷ್ಠ 40 ರಿಂದ 50 ಎಕರೆ ಜಾಗ ಬೇಕಿತ್ತು. ಮೂಲಸೌಕರ್ಯ ಇಲ್ಲ ಎಂಬ ಕಾರಣಕ್ಕೆ ಮೊದಲ ವರ್ಷ ವೈದ್ಯಕೀಯ ಮಂಡಳಿ ಕಾಲೇಜಿಗೆ ಅನುಮತಿ ನೀಡಿರಲಿಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ ಆಗ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್‌.ಟಿ.ಚಂದ್ರಶೇಖರ್‌.

ಯಡಬೆಟ್ಟದಲ್ಲಿದ್ದ 42 ಎಕರೆ ಸರ್ಕಾರಿ ಜಮೀನು ಗುರುತಿಸಿ, ಅದನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಚಂದ್ರಶೇಖರ್‌ ಅವರು.

ಕಾಲೇಜಿಗಾಗಿ ಅಗತ್ಯ ದಾಖಲೆಗಳ ಸಂಗ್ರಹ ಹಾಗೂ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ದಂತ ವೈದ್ಯಾಧಿಕಾರಿಯಾಗಿದ್ದ ಡಾ.ಸತ್ಯಪ್ರಕಾಶ್‌ ಅವರು ಎಂದು ನೆನಪಿಸಿಕೊಳ್ಳುತ್ತಾರೆ ಚಂದ್ರಶೇಖರ್‌ ಅವರು. ಕಾಲೇಜು ಸ್ಥಾಪನೆಯ ಸಮನ್ವಯ ಅಧಿಕಾರಿಯಾಗಿ ಡಾ.ಸತ್ಯಪ್ರಕಾಶ್‌ ಕಾರ್ಯನಿರ್ವಹಿಸಿದ್ದರು.

450 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ

ಸಚಿವರಾಗಿದ್ದ ಎಚ್‌.ಎಸ್‌.ಮಹದೇವಪ್ರಸಾದ್ ಶ್ರಮ

ಸಿದ್ದರಾಮಮಯ್ಯ ನೇತೃತ್ವದ ಸರ್ಕಾರ ಕಾಲೇಜು ನಿರ್ಮಾಣಕ್ಕೆ ₹118 ಕೋಟಿ ಅನುದಾನ ನೀಡಿತ್ತು. 2014ರ ಫೆಬ್ರುವರಿ 23ರಂದುಅಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಅವರು ಕಾಲೇಜು ಕಟ್ಟಡದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಯಡಬೆಟ್ಟದಲ್ಲಿ ಗುರುತಿಸಿದ್ದ 42 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ, ವೈದ್ಯರ ವಸತಿಗೃಹ ಹಾಗೂ ವಿದ್ಯಾರ್ಥಿಗಳ ಹಾಸ್ಟೆಲ್‌ಗಳನ್ನು ನಿರ್ಮಿಸಲಾಯಿತು. 2016ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತರಗತಿಗಳು ಆರಂಭವಾದವು. ಕಾಲೇಜು ಆರಂಭವಾಗಿ ಇದು ಐದನೇ ವರ್ಷ. ಕಾಲೇಜಿನ ಮೊದಲ ಬ್ಯಾಚ್‌ನ ಎಂಬಿಬಿಎಸ್‌ ವಿದ್ಯಾರ್ಥಿಗಳು ಈ ವರ್ಷ ವೈದ್ಯಕೀಯ ಪದವಿ ಶಿಕ್ಷಣ ಪೂರೈಸಲಿದ್ದಾರೆ.

ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ರಾಜ್ಯ ಸರ್ಕಾರ, ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಹೇಳುತ್ತಾರೆ ಕಾಲೇಜಿನ ಡೀನ್‌ ಹಾಗೂ ನಿರ್ದೇಶಕ ಡಾ.ಸಂಜೀವ್‌.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಕಾಲೇಜು, ಕಟ್ಟಡ ನಿರ್ಮಾಣ ಹೀಗೆ ಪ್ರತಿ ಹಂತದಲ್ಲೂ ಅವರು ಶ್ರಮ ಹಾಕಿ, ಕಾಳಜಿ ವಹಿಸಿ, ಈ ಶಿಕ್ಷಣ ಸಂಸ್ಥೆಗೆ ಒಂದು ರೂಪ ನೀಡಿದ್ದಾರೆ. ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹಿಂದೆ ಸಂಸದರಾಗಿದ್ದ ಆರ್.ಧ್ರುವನಾರಾಯಣ ಅವರ ಸಹಕಾರವನ್ನೂ ಮರೆಯುವಂತಿಲ್ಲ. ಜಿಲ್ಲಾಡಳಿತ ಕೂಡ ಉತ್ತಮವಾದ ಸಹಕಾರ ನೀಡಿದೆ’ ಎಂದು ಹೇಳುತ್ತಾರೆ ಅವರು.

ವಿವಿಧ ಕೋರ್ಸ್‌ಗಳು

ಎಂಬಿಬಿಎಸ್‌ಗೆ ಪ್ರತಿ ವರ್ಷ 150 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ. ಸದ್ಯ 750 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದಲ್ಲದೇ ನಾಲ್ಕು ಪ್ಯಾರಾ ಮೆಡಿಕಲ್‌ ಕೋರ್ಸ್‌ಗಳೂ ಇಲ್ಲಿವೆ. ಒಂದು ಕೋರ್ಸ್‌ಗೆ ಪ್ರತಿ ವರ್ಷ 20 ವಿದ್ಯಾರ್ಥಿಗಳು ದಾಖಲಾಗುತ್ತಿದ್ದಾರೆ.

‘ಈ ವರ್ಷದಿಂದ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ. ಬಿಎಸ್‌ಸಿ ನರ್ಸಿಂಗ್‌ ಹಾಗೂ ಆರೋಗ್ಯ ವಿಜ್ಞಾನಗಳಿಗೆ ಸಂಬಂಧಿಸಿದ ಮೂರು ಬಿಎಸ್‌ಸಿ ಕೋರ್ಸ್‌ಗಳನ್ನು ಆರಂಭಿಸಲು (ಒಟಿ ತಂತ್ರಜ್ಞಾನ, ಇಮೇಜಿಂಗ್‌ ತಂತ್ರಜ್ಞಾನ, ಮೆಡಿಸಿನ್‌ ಲ್ಯಾಬ್‌) ಒಪ್ಪಿಗೆ ಸಿಕ್ಕಿದೆ. ಲಭ್ಯವಿರುವ ಮೂಲಸೌಕರ್ಯಗಳಲ್ಲಿ ಕೋರ್ಸ್‌ಗಳನ್ನು ಆರಂಭಿಸಲಿದ್ದೇವೆ. ಈ ಕೋರ್ಸ್‌ಗಳಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ವಿವರಿಸುತ್ತಾರೆ ಡಾ.ಸಂಜೀವ್‌.

ಅತ್ಯಾಧುನಿಕ ಆಸ್ಪತ್ರೆ

₹130 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಇಲ್ಲಿ ಪ್ರಸ್ತಾಪಿಸಲೇ ಬೇಕು. ಜಿಲ್ಲೆಯ ಆರೋಗ್ಯ ಸೇವೆಯಲ್ಲಿ ಈ ಆಸ್ಪತ್ರೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.

ವೈದ್ಯಕೀಯ ಕಾಲೇಜಿನ ಬಳಿಯಲ್ಲೇ ಈ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರ 10 ಎಕರೆ ಜಾಗ ಮಂಜೂರು ಮಾಡಿದ್ದು, 2.33 ಎಕರೆ ಜಾಗದಲ್ಲಿ, 30,728 ಚದರ ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡ ತಲೆ ಎತ್ತಿದೆ. ಶೇ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಮಾರ್ಚ್‌ ಕೊನೆಯ ವಾರದಲ್ಲಿ ಕಟ್ಟಡ ಉದ್ಘಾಟಿಸುವುದು ಬಹುತೇಕ ಖಚಿತವಾಗಿದೆ.

‘ಹೊಸ ಆಸ್ಪತ್ರೆ ಅತ್ಯಾಧುನಿಕವಾಗಿರಲಿದ್ದು, ಎಲ್ಲ ಸೌಲಭ್ಯಗಳು ಇರಲಿವೆ.ಆಸ್ಪತ್ರೆ ಪೂರ್ಣಗೊಂಡಾಗ ಜಿಲ್ಲೆಯ ಜನರಿಗೆ ಪೂರ್ಣವಾದ ಆರೋಗ್ಯ ಸೇವೆ ಲಭಿಸಲಿದೆ. ಈ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯು ಗಡಿ ಜಿಲ್ಲೆಯ ಹೆಗ್ಗುರುತು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳುತ್ತಾರೆ ಡಾ.ಸಂಜೀವ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.