ಚಾಮರಾಜನಗರ: ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ಗುರುವಾರ ನಗರದಲ್ಲಿ ಐಸಿಹಾಸಿಕ ಚಾಮರಾಜೇಶ್ವರ ಸ್ವಾಮಿ ಮಹಾ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಆಷಾಢ ಪೌರ್ಣಿಮೆ, ಪೂರ್ವಾಷಾಢ ನಕ್ಷತ್ರ, ಕನ್ಯಾಲಗ್ನದ ಶುಭ ಮುಹೂರ್ತದಲ್ಲಿ ನಡೆದ ರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು, ಚಾಮರಾಜೇಶ್ವರನ ಸ್ಮರಣೆ ಮಾಡಿದರು. ಇಡೀ ನಗರ ರಥೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿತು.
ಬೆಳಿಗ್ಗೆಯಿಂದಲೇ ಜಿಲ್ಲೆಯ ಹಲವೆಡೆಗಳಿಂದ ಭಕ್ತರ ದಂಡು ಚಾಮರಾಜೇಶ್ವರನ ದೇಗುಲದತ್ತ ದಾವಿಸಿ ಜಮಾಯಿಸಿತು. ಸೂರ್ಯ ನೆತ್ತಿಗೇರುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚಾಗಿ ರಥೋತ್ಸವದ ಹೊತ್ತಿಗೆ ದೇವಾಲಯದ ಆವರಣ ಪೂರ್ತಿಯಾಗಿ ಭರ್ತಿಯಾಯಿತು.
ದೇವಸ್ಥಾನದ ಆಗಮಿಕರಾದ ದರ್ಶನ್ ಸಂಪ್ರದಾಯದಂತೆ ಚಿನ್ನಾಭರಣಗಳಿಂದ ಸರ್ವಾಲಂಕೃತಗೊಂಡಿದ್ದ ಚಾಮರಾಜೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ, ಬಿಲ್ವಾರ್ಚನೆ ಸೇರಿದಂತೆ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನದ ಒಳ ಆವರಣ ಹಾಗೂ ಮುಂಭಾಗದಲ್ಲಿ ಪ್ರದಕ್ಷಿಣೆ ಹಾಕಲಾಯಿತು.
ಇದೇವೇಳೆ ಕೆಂಪನಂಜಾಬಾ, ಗಣಪತಿ ಹಾಗೂ ಮುಮ್ಮಡಿ ಮೈಸೂರು ಅರಸರ ಉತ್ಸವ ಮೂರ್ತಿಗಳು ಜೊತೆಗಿದ್ದವು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಬೆಳ್ಳಿಯ ದಂಡ ಹಿಡಿದು ದೇವರಿಗೆ ಚಾಮರ ಸೇವೆ ಸಮರ್ಪಿಸಿದರು.
ಮೈಸೂರು ಅರಸರ ಪಂಚಲೋಹದ ವಿಗ್ರಹಗಳನ್ನು ತೇರಿಗೆ ಅಭಿಮುಖವಾಗಿ ಇರಿಸಿ ಮೊದಲ ಪೂಜೆಯ ಸಂಪ್ರದಾಯ ನೆರವೇರಿದ ಬಳಿಕ ಕೋಮುವಾರು ಮುಖಂಡರು ಪೂಜೆ ಸಲ್ಲಿಸುತ್ತಿದ್ದಂತೆ ಭಕ್ತರ ಜಯಘೋಷ ಮೊಳಗಿ ರಥ ಮುಂದೆ ಸಾಗಿತು.
ಹಣ್ಣು ಜವನ ತೂರಿದ ಭಕ್ತರು: ರಥ ಚಲಿಸುತ್ತಿದ್ದಂತೆ ಮೋಡದಿಂದ ಮಳೆ ಹನಿಗಳು ರಭಸವಾಗಿ ಭೂಮಿಗೆ ಬಿದ್ದಂತೆ ಸಹಸ್ರಾರು ಭಕ್ತರು ಭಕ್ತಿ ಭಾವಗಳಿಂದ ಏಕಕಾಲದಲ್ಲಿ ಬಾಳೆ ಹಣ್ಣು ಹಾಗೂ ಜವನವನ್ನು ತೇರಿಗೆ ತೂರಿ ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.
ಕೆಂಪನಂಜಾಂಬ (ಪಾರ್ವತಿ), ಗಣೇಶ, ಜಯಚಾಮರಾಜೇಂದ್ರ ಒಡೆಯರ್ ಉತ್ಸವಮೂರ್ತಿಗಳನ್ನು ಹೊತ್ತ ಎರಡು ಚಿಕ್ಕ ರಥಗಳು ಮುಂದೆ ಸಾಗಿದರೆ ಚಾಮರಾಜೇಶ್ವರನನ್ನು ಹೊತ್ತು ದೊಡ್ಡ ರಥ ಹಿಂದೆ ಸಾಗಿತು. ರಥ ಎಳೆದು ಬಾಳೆಹಣ್ಣು–ಜವನಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ರಥದ ಬೀದಿಯಲ್ಲಿ ಸಾಗಿದ ರಥ ಎಸ್‌ಬಿಎಂ ಮುಂಭಾಗ, ವೀರಭದ್ರೇಶ್ವರ ಸ್ವಾಮಿ ದೇವಾಲಯ, ಮಾರಮ್ಮ ದೇವಸ್ಥಾನ, ಹಳೆ ತರಕಾರಿ ಮಾರುಕಟ್ಟೆ ಬಳಸಿಕೊಂಡು ಸಂಜೆ 4ರ ಸುಮಾರಿಗೆ ಸ್ವಸ್ಥಾನ ತಲುಪಿತು. ರಥ ಸಾಗುವಾಗ ಅಲ್ಲಲ್ಲಿ ಗೊದಮಗಳನ್ನು ಕೊಟ್ಟು ನಿಯಂತ್ರಿಸಲಾಯಿತು. ಹಾದಿಯುದ್ದಕ್ಕೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಜನಸ್ತೋಮ: ರಥೋತ್ಸವ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮ ನೆರೆದಿತ್ತು. ವಾಣಿಜ್ಯ ಕಟ್ಟಡಗಳ ಮೇಲೆ ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು. ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ದೂಪದ ಘಮಲು: ಚಾಮರಾಜೇಶ್ವರನ ದೇಗುಲದ ಬಳಿ ದೂಪದ ಘಮಲು ತುಂಬಿಕೊಂಡಿತ್ತು. ಭಕ್ತರು ಕೆಂಡಕ್ಕೆ ದೂಪ ಹಾಕಿ ದೇವರನ್ನು ಪ್ರಾರ್ಥಿಸಿದರು. ಹಣ್ಣು–ಜವನ ಮಾರಾಟ ಮಾಡುವವರಿಗೆ ಉತ್ತಮ ವ್ಯಾಪಾರವಾಯಿತು.
ಬಾಲ್ಯವಿವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಬಾಲ್ಯವಿವಾಹದ ದುಷ್ಪರಿಣಾಮಗಳ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು.
ಸಂತಾನಪ್ರಾಪ್ತಿಗಾಗಿ ಹರಕೆ
ಪ್ರತಿವರ್ಷದಂತೆ ಈ ಬಾರಿಯೂ ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನವದಂಪತಿಗಳು ಭಾಗವಹಿಸಿದ್ದರು. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಆಷಾಢ ಮಾಸದಲ್ಲಿ ಪ್ರತ್ಯೇಕವಾಗಿದ್ದ ದಂಪತಿಗಳು ಒಟ್ಟಾಗಿ ಬಂದು ಪೂಜೆ ಸಲ್ಲಿಸಿದರು. ಮಕ್ಕಳ ಚಾಮರಾಜೇಶ್ವರ ಎಂದೇ ಪ್ರಸಿದ್ಧಿ ಪಡೆದಿರುವ ದೇವರಿಗೆ ಜೋಡಿಗಳು ಸಂತಾನಪ್ರಾಪ್ತಿಗೆ ಹರಕೆ ಕಟ್ಟಿಕೊಳ್ಳುವುದು ಸಂಪ್ರದಾಯ.
- ವ್ಯಾಪಾರ ಜೋರು
ರಥಬೀದಿ ಹಾಗೂ ದೇವಸ್ಥಾನದ ಸುತ್ತಲೂ ಚಕ್ಕುಲಿ ನಿಪ್ಪಟ್ಟು ರವೆ ಉಂಡೆ ಸಹಿತ ಕರಿದ ತಿಂಡಿಗಳನ್ನು ಮಾರಾಟ ಮಾಡಲಾಯಿತು. ಮಕ್ಕಳ ಆಟಿಕೆಗಳು ಬಣ್ಣ ಬಣ್ಣದ ಬಲೂನ್‌ಗಳು ಚಿಣ್ಣರ ಗಮನ ಸೆಳೆದವು. ಬಟ್ಟೆ ಪಾತ್ರೆ ಗೃಹಾಲಂಕಾರ ವಸ್ತುಗಳ ಮಳಿಗೆಗಳಲ್ಲಿ ಜನರು ಕಿಕ್ಕಿರಿದು ತಂಬಿದ್ದರು. ಅನ್ನ ಸಂತರ್ಪಣೆ: ರಥ ಸಾಗುವ ಮಾರ್ಗದ ಐದಾರು ಕಡೆಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಭಕ್ತರು ಪಲಾವ್ ಪಾಯಸ ಸವಿದಿರು. ಬಸವಳಿದು ಬಂದವರಿಗೆ ಮಜ್ಜಿಗೆ ಪಾನಕ ಹಾಗೂ ನೀರು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.