ADVERTISEMENT

ಚಾಮರಾಜೇಶ್ವರ ರಥೋತ್ಸವ: ಸರ್ವರ ಸಹಕಾರ ಅಗತ್ಯ

ಕೋಮುವಾರು ಮುಖಂಡರ ಸಭೆಯಲ್ಲಿ ತಹಶೀಲ್ದಾರ್ ಬಿ.ಗಿರಿಜಾ ಮನವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:13 IST
Last Updated 9 ಜುಲೈ 2025, 5:13 IST
ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಆಯೋಜನೆ ಸಂಬಂಧ ಮಂಗಳವಾರ ದೇವಸ್ಥಾನದ ಆವರಣದಲ್ಲಿ  ತಹಶೀಲ್ದಾರ್ ಬಿ.ಗಿರಿಜಾ ನೇತೃತ್ವದಲ್ಲಿ ಕೋಮುವಾರು ಮುಖಂಡರ ಸಭೆ ನಡೆಯಿತು
ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ಆಯೋಜನೆ ಸಂಬಂಧ ಮಂಗಳವಾರ ದೇವಸ್ಥಾನದ ಆವರಣದಲ್ಲಿ  ತಹಶೀಲ್ದಾರ್ ಬಿ.ಗಿರಿಜಾ ನೇತೃತ್ವದಲ್ಲಿ ಕೋಮುವಾರು ಮುಖಂಡರ ಸಭೆ ನಡೆಯಿತು   

ಚಾಮರಾಜನಗರ: ಜುಲೈ 10ರಂದು ನಡೆಯುವ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೆ ಸರ್ವ ಸಮುದಾಯಗಳ ಮುಖಂಡರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಬಿ.ಗಿರಿಜಾ ಮನವಿ ಮಾಡಿದರು.

ರಥೋತ್ಸವ ಆಯೋಜನೆ ಸಂಬಂಧ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಹಲವು ಕೋಮುಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಅಚ್ಚುಕಟ್ಟಾಗಿ ರಥೋತ್ಸವ ನಡೆಸಲು ಜಿಲ್ಲಾಧಿಕಾರಿಗಳು ಈಚೆಗೆ ಸಭೆ ನಡೆಸಿದ್ದು ನಗರಸಭೆ, ಲೋಕೋಪಯೋಗಿ, ಪೊಲೀಸ್‌, ಆರೋಗ್ಯ, ಅರಣ್ಯ, ಸೆಸ್ಕ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ 10 ಇಲಾಖೆಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ ಎಂದರು.

ಅದರಂತೆ, ರಥ ಸಾಗುವ ಮಾರ್ಗದಲ್ಲಿ ರಸ್ತೆ ದುರಸ್ತಿ, ಗುಂಡಿ ಮುಚ್ಚುವ, ಚರಂಡಿ ಸ್ವಚ್ಛಗೊಳಿಸುವ ಕಾರ್ಯವನ್ನು ನಗರಸಭೆ ಮಾಡಿದೆ. ರಥೋತ್ಸವದ ವೇಳೆ ಶುದ್ಧ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು ಬಾಕಿ ಇದೆ. ರಥ ಸಾಗುವ ಮಾರ್ಗಮಧ್ಯೆ ಅಡ್ಡಿಯಾಗು ಮರದ ಕೊಂಬೆಗಳನ್ನು ಕತ್ತರಿಸುವಂತೆ ಅರಣ್ಯ ಇಲಾಖೆ ಹಾಗೂ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಥೋತ್ಸವ ಸಂದರ್ಭ ವಿದ್ಯುತ್ ವ್ಯತ್ಯಯ ಉಂಟಾಗದಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ರಥೋಥ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ರಥ ಸಾಗುವಾಗ ಐದು ಅಡಿ ದೂರ ಭಕ್ತರು ನಿಲ್ಲುವ ವ್ಯವಸ್ಥೆ ಮಾಡಲಾಗುತ್ತಿದೆ. ಕೋಮುವಾರ ಮುಖಂಡರು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಕೋಮುವಾರು ಮುಖಂಡರಿಗೆ ಪೂಜೆ ಸಲ್ಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಿದ್ದಾರೆ ಎಂದರು.

ಚಾಮರಾಜನಗರ ಶಾಸಕರು ₹ 5 ಲಕ್ಷ ವೆಚ್ಚದಲ್ಲಿ ದೇವಸ್ಥಾನಕ್ಕೆ ಬಗೆಬಗೆಯ ಹೂ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿಸಲಿದ್ದಾರೆ. ತೇರಿಗೆ ಹಾನಿ ಮಾಡುವ ಘನ ಪದಾರ್ಥಗಳನ್ನು ಎಸೆಯದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ರಥೋತ್ಸವದ ವೇಳೆ ಬಣ್ಣ ಎರಚುವ, ಕರ್ಕಶ ಶಬ್ಧ ಹೊರಹೊಮ್ಮಿಸುವಂತಿಲ್ಲ. ಪ್ರತಿವರ್ಷದಂತೆ ಅದ್ಧೂರಿಯಾಗಿ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಒತ್ತುವರಿ ತೆರವಿಗೆ ಒತ್ತಾಯ: ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ದೇಗುಲಕ್ಕೆ ಸೇರಿರುವ ಹಲವು ಆಸ್ತಿಗಳು ಕಬಳಿಕೆಯಾಗಿದೆ. ರಥೋತ್ಸವ ಮುಗಿದ ಬಳಿಕ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಸಭೆಯಲ್ಲಿ ಸಲಹೆ ನೀಡಿದರು.

ಸಭೆಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ್, ನಗರಸಭೆ ಪೌರಾಯುಕ್ತ ರಾಮದಾಸ್, ಅಗ್ನಿಶಾಮಕ ಅಧಿಕಾರಿ ಶಿವಾಜಿ ರಾವ್ ಪವಾರ್, ದೇವಸ್ಥಾನದ ಆಗಮಿಕರಾದ ಎನ್.ದರ್ಶನ್, ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ಅನಿಲ್, ಅನಂತ ಪ್ರಸಾದ್, ನಗರಸಭಾ ಸದಸ್ಯ ಸುದರ್ಶನ ಗೌಡ, ಶಾಂತಲಾ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ್ ನಾಯಕ್, ಮಾಜಿ ಚೂಡಾ ಅಧ್ಯಕ್ಷ ಬಾಲಸುಬ್ರಮಣ್ಯಂ, ಸುಂದರ್, ಶ್ರೀನಿವಾಸ್ ಗೌಡ, ಸುರೇಶ್ ವಾಜಪೇಯಿ, ವೆಂಕಟರಮಣ ಸ್ವಾಮಿ, ಮಾರಣ್ಣ, ಬಂಡಿಗಾರ್ ಮಹೇಶ್, ಎಸ್.ಲಕ್ಷ್ಮೀ ನರಸಿಂಹ, ಎಂಜಿನಿಯರ್ ಪ್ರವೀಣ್, ವೈ.ವಿ. ಲೋಕನಾಥ್ ಇದ್ದರು.

‘ಮೊದಲ ಪೂಜೆ ಸಲ್ಲಿಕೆಗೆ ಅವಕಾಶ ನೀಡಿ’

ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ ಬಳಿಕ ಹೆಚ್ಚು ಸಾರ್ವಜನಿಕರು ಸೇರುವ ಉತ್ಸವ ಜಾತ್ರೆಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಬಿಗಿಯಾದ ನಿಯಮ ರೂಪಿಸಿದ್ದು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ. ರಥೋತ್ಸವ ಸಂದರ್ಭ ನಿಯಮಗಳ ಹೆಸರಿನಲ್ಲಿ ಸಂಪ್ರದಾಯಗಳಿಗೆ ಅಡ್ಡಿಪಡಿಸಬಾರದು. ರೂಢಿಯಂತೆ ಜಾತ್ರೋತ್ಸವಕ್ಕೆ ಚಾಲನೆ ನೀಡುವಾಗ ಕೋಮುವಾರು ಮುಖಂಡರಿಗೆ ಮೊದಲು ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.