ಸಂತೇಮರಹಳ್ಳಿ: ‘ಹಾಲು ಉತ್ಪಾದಕರ ಹಿತ ಕಾಯಲು ಒಕ್ಕೂಟ ಹೆಚ್ಚು ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಲು ಮುಂದಾಗಬೇಕು’ ಎಂದು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಹೇಳಿದರು.
ಸಮೀಪದ ಕುದೇರು ಗ್ರಾಮದಲ್ಲಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮೂಲ್) ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 2024–25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
‘ಕಳೆದ 8 ವರ್ಷಗಳಿಂದ ಚಾಮರಾಜನಗರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾಗಿದ್ದು, 2ನೇ ಆಡಳಿತ ಮಂಡಳಿ ಕೂಡ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಟ್ಟಿನಲ್ಲಿ ಈ ಬಾರಿ ಒಕ್ಕೂಟಕ್ಕೆ ₹ 3.34 ಕೋಟಿ ಲಾಭಾಂಶ ದೊರಕಿದೆ. ಚಾಮೂಲ್ ಕೇಂದ್ರದಲ್ಲಿ ಐಸ್‌ಕ್ರೀಂ ಘಟಕ ಸ್ಥಾಪಿಸಲು ಹಾಗೂ ಒಕ್ಕೂಟದ ಅಭಿವೃದ್ಧಿಯಲ್ಲಿ ಸರ್ವ ಸದಸ್ಯರು ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ. ಎಲ್ಲರ ಸಹಕಾರದೊಂದಿಗೆ ಒಕ್ಕೂಟವನ್ನು ಮನ್ನೆಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಚಾಮೂಲ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಮಾತನಾಡಿ, ‘ಚಾಮೂಲ್ ವತಿಯಿಂದ ವರ್ಷದಿಂದ ವರ್ಷಕ್ಕೆ ಹಾಲಿನ ಮಾರಾಟ ಪ್ರಮಾಣ ಹೆಚ್ಚಳ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 45 ಸಾವಿರ ಲೀಟರ್, 5 ಸಾವಿರ ಲೀಟರ್ ಮೊಸರು, ಕೇರಳದಲ್ಲಿ 22 ಸಾವಿರ ಹಾಗೂ ತಮಿಳುನಾಡಿನಲ್ಲಿ 7 ಸಾವಿರ ಲೀಟರ್ ಹಾಲು ಸೇರಿದಂತೆ ದಿನಕ್ಕೆ 75 ಸಾವಿರ ಲೀಟರ್ ಹಾಲು ಮಾರಾಟವಾಗುತ್ತಿದೆ. ಜಿಲ್ಲೆ ವ್ಯಾಪ್ತಿಗೆ ಒಳಪಡುವ ಹಿಮವದ್ ಗೋಪಾಲ್‌ಸ್ವಾಮಿ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಬಂಡೀಪುರ ಸೇರಿದಂತೆ ವಿವಿಧೆಡೆಗಳಲ್ಲಿ ನಂದಿನಿ ಪಾರ್ಲರ್ ತೆರೆದು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೂರುಗಳು: ಬಿಎಂಸಿ ಕೇಂದ್ರಗಳನ್ನು ಆರಂಭಿಸಲು ಕಡ್ಡಾಯವಾಗಿ ನಿಯಮ ಮಾಡಬೇಕು. ಹಾಲಿನ ಪ್ಯಾಟಿನ ಪ್ರಮಾಣ ಕಡಿಮೆ ಮಾಡಬೇಕು ಸಭೆ ನಡಾವಳಿ ಪುಸ್ತಕಗಳಲ್ಲಿ ಡೇರಿಗಳ ಅಧ್ಯಕ್ಷರ ಹೆಸರು ನೋಂದಣಿ ಮಾಡಿಸಬೇಕು. ಒಕ್ಕೂಟ ವತಿಯಿಂದ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮೇವು ಕಾಟಾವು ಯಂತ್ರ ವಿತರಿಸಬೇಕು ಸೇರಿದಂತೆ ನಾನಾ ದೂರುಗಳು ಕೇಳಿ ಬಂದವು.
ನಿರ್ದೇಶಕರಾದ ವೈ.ಸಿ.ನಾಗೇಂದ್ರ, ಎಚ್.ಎಸ್.ನಂಜುಂಡಪ್ರಸಾದ್, ಎಚ್.ಎಸ್.ಬಸವರಾಜು, ಉದ್ದನೂರು ಪ್ರಸಾದ್, ಸದಾಶಿವಮೂರ್ತಿ, ಎಂ.ಪಿ.ಸುನೀಲ್, ಸಾವುಲ್ ಆಹಮದ್, ಶೀಲಾ ಪುಟ್ಟರಂಗಶೆಟ್ಟಿ, ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಆಡಳಿತ ವ್ಯವಸ್ಥಾಪಕ ಪ್ರಸಾದ್, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.