ADVERTISEMENT

ಚಾಮರಾಜನಗರ: ಕಾಡು ಪ್ರಾಣಿ ಹಾವಳಿ ತಡೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 7:39 IST
Last Updated 5 ನವೆಂಬರ್ 2025, 7:39 IST
ಗುಂಡ್ಲುಪೇಟೆ ಓಂಕಾರ ವಲಯ ಕಚೇರಿ ಮುಂದೆ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳು ಕಾಡು ಪ್ರಾಣಿಗಳನಿಯಂತ್ರಿಸುವಂತೆ ಒತ್ತಾಯಿಸಿ ಆರ್‍ಎಫ್‌ಒ ಹನುಮಂತಪ್ಪ ಪಾಟೀಲ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು
ಗುಂಡ್ಲುಪೇಟೆ ಓಂಕಾರ ವಲಯ ಕಚೇರಿ ಮುಂದೆ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಪದಾಧಿಕಾರಿಗಳು ಕಾಡು ಪ್ರಾಣಿಗಳನಿಯಂತ್ರಿಸುವಂತೆ ಒತ್ತಾಯಿಸಿ ಆರ್‍ಎಫ್‌ಒ ಹನುಮಂತಪ್ಪ ಪಾಟೀಲ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು   

ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ‘ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ’ ಹಾಗು ಹಸಿರು ಸೇನೆ ಕಾರ್ಯಕರ್ತರು ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

  ವಲಯದ ಅರಣ್ಯಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ  ಸಂಘಟನೆಯ ಪದಾಧಿಕಾರಿಗಳು ಅರಣ್ಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ  ಘೋಷಣೆ ಕೂಗಿ, ಆಕ್ರೋಶ ಹೊರ ಹಾಕಿದರು.

ರೈತ ಮುಖಂಡ ಉತ್ತಂಗೆರೆಹುಂಡಿ ಮಹೇಶ್ ಮಾತನಾಡಿ, ಓಂಕಾರ ವಲಯ ವ್ಯಾಪ್ತಿಯ ಸುತ್ತ ಕಾಡಾನೆ, ಹುಲಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದೆ. ಹೊಣಕನಪುರ ಗ್ರಾಮದ ಗುರುಸಿದ್ದಪ್ಪ ಎಂಬ ರೈತನ ಜಮೀನಿಗೆ ನುಗ್ಗಿದ ಕಾಡಾನೆಗಳು ಇತ್ತೀಚೆಗೆ  ಒಂದು ಎಕರೆ ಟೊಮೆಟೊ ಫಸಲನ್ನು ತುಳಿದು ತಿಂದು ನಾಶ ಪಡಿಸಿದ್ದವು.

ADVERTISEMENT

ರೈತನಿಗೆ ಅಪಾರ ನಷ್ಟ ಉಂಟಾಗಿದೆ, ಸಾಲ ಮಾಡಿದ ಬಂಡವಾಳ ಮೊತ್ತ ಕೈಸೇರದಂತಾಗಿದೆ. ಅರಣ್ಯ ಸಿಬ್ಬಂದಿ ರಾತ್ರಿ ವೇಳೆ ಹೊಸಪುರ ಬಳಿ ನಿಂತು ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಈಗ ನೇಮಕ ಮಾಡಿರುವ ಸಿಬ್ಬಂದಿಯನ್ನು ಬದಲಾವಣೆ ಮಾಡಿ ನಿಷ್ಠೆಯಿಂದ ಕೆಲಸ ಮಾಡುವವರನ್ನು ನೇಮಿಸಬೇಕು. ಜೊತೆಗೆ ಬೆಳೆ ಹಾನಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ, ಚಿರತೆ ಓಡಾಟ ಹೆಚ್ಚಿದ್ದು, ಕಳೆದೊಂದು ತಿಂಗಳಿಂದ ಜಮೀನುಗಳ ಮೇಲೆ ಸಂಚರಿಸಿ, ರೈತರ ಕಣ್ಣಿಗೆ ಬಿದ್ದಿವೆ. ಇದರಿಂದ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಬೋನ್ ಇರಿಸಿ ಚಿರತೆ-ಹುಲಿ ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ವೈಜ್ಞಾನಿಕ ಕ್ರಮಗಳನ್ನು ಅನುಸರಿಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ರೈತರು ಓಂಕಾರ ವಲಯದ ಆರ್‍ಎಫ್‌ಒ ಹನುಮಂತಪ್ಪ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ಕಾಡುಪ್ರಾಣಿಗಳಿಂದ ಅನಾಹುತ ಸಂಭವಿಸಿದರೆ ನೇರ ನೀವೇ ಹೊಣೆ  ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಚಿಕ್ಕಾಟಿ ಜಯಪ್ರಕಾಶ್, ಸಿದ್ದರಾಜನಾಯಕ, ಚಿನ್ನಸ್ವಾಮಿ, ಹೊಣಕಾರಯ್ಯ, ಮಹದೇವಸ್ವಾಮಿ, ವೆಂಕಟರಮಣನಾಯಕ, ರಾಜು, ಮಣಿಕಂಠ, ಶಿವಮಲ್ಲನಾಯಕ, ಗುರುಸ್ವಾಮಿ, ಮಹದೇವಪ್ರಸಾದ್, ಶಿವರಾಜು , ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.