ಚಾಮರಾಜನಗರ: ‘ಮಳೆಯಾಶ್ರಿತ ಕೃಷಿ ಭೂಮಿಯೇ ಹೆಚ್ಚಾಗಿರುವ ಚಾಮರಾಜನಗರ ಜಿಲ್ಲೆಗೆ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕರೆ–ಕಟ್ಟೆಗಳನ್ನು ತುಂಬಿಸಿ, ಕಿರು ಜಲಾಶಯಗಳಿಗೆ ನೀರು ಹರಿಸುವ ಯೋಜನೆ ಶೀಘ್ರ ಅನುಷ್ಠಾನವಾಗಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ರೂಪಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಘೋಷಣೆ ಕೂಗಿದರು.
ಹನೂರು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕುಗಳು ನೀರಾವರಿಯಿಂದ ವಂಚಿತವಾಗಿದ್ದು ನೂರಾರು ಅಡಿ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿ ನೀರನ್ನು ಮೇಲೆತ್ತಿ ಕೆರೆಗಳನ್ನು ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.
ಹನೂರು ತಾಲ್ಲೂಕಿನ ಉಡುತೊರೆ ಜಲಾಶಯವು 15,400 ಎಕೆರೆಗೆ ನೀರುಣಿಸುವ ಸಾಮರ್ಥ್ಯ ಹೊಂದಿದ್ದರೂ ಮಳೆ ಕೊರತೆಯಿಂದ ಕೃಷಿಗೆ ನೀರು ಲಭ್ಯವಾಗುತ್ತಿಲ್ಲ. ಉಡುತೊರೆ ಜಲಾಶಯಕ್ಕೆ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ 1.30 ಟಿಎಂಸಿ ನೀರು ಹರಿಸಲು ಡಿಪಿಆರ್ ಸಿದ್ಧವಾಗಿದ್ದು ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸತ್ತೆಗಾಲದ ಶಿವ ಅಣೆಕಟ್ಟೆಯಿಂದ ಪಾಳ್ಯ ಕೆರೆ, ಸರಗೂರು ಕೆರೆ, ಲಿಂಗಮ್ಮನ ಕೆರೆ, ಕೊತ್ತನೂರು ಕೆರೆ, ಮಣಗಳ್ಳಿ ಕೆರೆ, ಬಂಡಳ್ಳಿ ಕೆರೆ, ಹಲಗಪುರ ಕೆರೆ, ಮಾರ್ಟಳ್ಳಿಯ ಕಿರೇಪಾತಿ ಕೆರೆಗಳಿಗೆ ನೀರು ಹರಿಸಬೇಕು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸಬೇಕು.
ಕಬಿನಿ 2ನೇ ಹಂತದ ಯೋಜನೆ ಜಾರಿಯಾದರೆ ಬಹುತೇಕ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೊಳಪಡಲಿದ್ದು ಶೀಘ್ರ ಕಾರ್ಯಗತಗೊಳಿಸಬೇಕು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳಿಂದ ವಂಚಿತವಾಗಿರುವ ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು, ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಬೇಕು.
ಅತಿ ಹೆಚ್ಚು ಅರಣ್ಯ ಭೂಮಿ ಹೊಂದಿರುವ ಜಿಲ್ಲೆಯಲ್ಲಿ ಕೃಷಿ ಮಾಡುವುದು ಸಮಸ್ಯೆಯಾಗಿದೆ, ಕಾಡಂಚಿನ ರೈತರ ಜಮೀನಿಗೆ ಪ್ರಾಣಿಗಳು ನುಗ್ಗಿ ಬೆಳೆ ಹಾಳು ಮಾಡುತ್ತಿವೆ, ಜಾನುವಾರುಗಳನ್ನು ಕೊಲ್ಲುತ್ತಿವೆ, ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ರೈತರ ಜಮೀನಿನ ಸುತ್ತಲೂ ಸೋಲಾರ್ ಬೇಲಿ ಅಳವಡಿಸಬೇಕು.
ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು, ಕೈಗಾರಿಕೆಗಳಿಗೆ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ಪ್ರತಿಯಾಗಿ ಸಂತ್ರಸ್ತರಿಗೆ ಉದ್ಯೋಗ ನೀಡಬೇಕು, ವಿದ್ಯುತ್ ಅಕ್ರಮ ಸಕ್ರಮ ಯೋಜನೆ ಮುಂದುವರಿಸಬೇಕು, ರೈತರಿಗೆ ಸಾಗುವಳಿ ಚೀಟಿಗಳನ್ನು ವಿತರಿಸಬೇಕು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬಿನ ಬಾಕಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕೆಂಪುಗೌಡ, ಗೌಡೇಗೌಡ, ಅಮ್ಜದ್ ಖಾನ್, ಸಂತೋಷ್, ಸಿದ್ದರಾಜು, ಚಿನ್ನಸ್ವಾಮಿ ಗೌಡರ್, ಲೋಕೇಶ್, ರಾಜಣ್ಣ, ಪಳನಿಸ್ವಾಮಿ ಇದ್ದರು.
ಜಿಲ್ಲೆಯ ಹಲವೆಡೆಗಳಿಂದ ಪ್ರತಿಭಟನೆಗೆ ಬಂದಿದ್ದ ರೈತರು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಘೋಷಣೆ
‘ಹುಲಿ ಸಂರಕ್ಷಿತ ಪ್ರದೇಶ ಬೇಡ’
ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು. ಮಲೆ ಮಹದೇಶ್ವರ ಅರಣ್ಯ ಹುಲಿ ಸಂರಕ್ಷಿತ ಪ್ರದೇಶವಾದರೆ ರೈತರಿಗೆ ಸಮಸ್ಯೆಗಳು ಶುರುವಾಗುತ್ತವೆ ದನಗಳ ಸಾಕಣೆಗೆ ಪೆಟ್ಟುಬೀಳಲಿದ್ದು ಸಾವಯವ ಗೊಬ್ಬರ ಕೊರತೆ ಉಂಟಾಗಲಿದೆ. ಕಾಡಿನೊಳಗಿರುವ ದೇವರ ಪೂಜೆಗೆ ಸಂಪ್ರದಾಯ ಪಾಲನೆಗೆ ಅಡ್ಡಿಯಾಗಲಿದೆ ಕಾಡಂಚಿನ ನಿವಾಸಿಗಳನ್ನು ನಿಯಮಗಳ ಹೆಸರಿನಲ್ಲಿ ಒಕ್ಕಲೆಬ್ಬಿಸಲಾಗುತ್ತದೆ ಎಂದು ಮುಖಂಡ ಹೆಬ್ಬಸೂರು ಬಸವಣ್ಣ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.