ADVERTISEMENT

ರಸ್ತೆ ಬದಿ 15 ದಿನಗಳ ಹಸುಗೂಸು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 15:42 IST
Last Updated 19 ಜುಲೈ 2025, 15:42 IST

ಚಾಮರಾಜನಗರ: ತಾಲ್ಲೂಕಿನ ಸಾಗಡೆ–ಮೂಡ್ನಾಕೂಡು ರಸ್ತೆ ಬದಿಯ ಬೇಲಿಯಲ್ಲಿ ಶನಿವಾರ 15 ದಿನಗಳ ಹೆಣ್ಣು ಹಸುಗೂಸು ಪತ್ತೆಯಾಗಿದೆ. ಮಗು ಅಳುವ ಶಬ್ಧ ಕೇಳಿದ ಗ್ರಾಮಸ್ಥರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಕಂದಮ್ಮನನ್ನು ರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವನ್ನು ರಸ್ತೆ ಬದಿಗೆ ಎಸೆದುಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿರುವ ದೂರಿನ ಮೇರೆಗೆ ಪೊಲೀಸರು ಪೋಷಕರನ್ನು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ. 

‘ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮಗು ಗುಣಮುಖವಾದ ಬಳಿಕ ಸಿಡಬ್ಲ್ಯುಸಿ ಎದುರು ಹಾಜರುಪಡಿಸಿ ಪಾಲನೆ ಪೋಷಣೆ ಮಾಡಲು ಕೊಳ್ಳೇಗಾಲದ ಜೀವನಜ್ಯೋತಿ ಮಕ್ಕಳ ದತ್ತು ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.