
ಗುಂಡ್ಲುಪೇಟೆ: ‘ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ, ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ’ ಎಂದು ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚಕಿ ಸರಸ್ವತಿ ತಿಳಿಸಿದರು.
ಪಟ್ಟಣದ ನಿರ್ಮಲ ಸೇವಾ ಕೇಂದ್ರದಲ್ಲಿ ಮಕ್ಕಳ ಸಹಾಯವಾಣಿ, ಬಾಲ್ಯ ವಿವಾಹ ಕುರಿತು ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಲ್ಯವಿವಾಹ ಆಗಾಗ್ಗೆ ನಡೆಯುತ್ತಲೇ ಇವೆ, ಮುಖ್ಯವಾಗಿ ತಂದೆ ತಾಯಿಯಲ್ಲಿ ಮನ ಪರಿವರ್ತನೆ ಮಾಡಬೇಕು’ ಎಂದರು.
‘ಪಾಲಕರಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಇಲ್ಲದೇ ಇರುವುದರಿಂದ ಬಾಲ್ಯ ವಿವಾಹ ಮಾಡಲು ಮುಂದಾಗುತ್ತಾರೆ. ಪಾಲಕರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ಹೀಗೆ ಮಾಡುತ್ತಾರೆ. ರಕ್ತ ಸಂಬಂಧ ಉಳಿಸಿಕೊಳ್ಳಲು ಹಾಗೂ ಬಡತನ, ಅನಕ್ಷರತೆ, ಮೂಢನಂಬಿಕೆ ಮುಖ್ಯ ಕಾರಣವಾಗಿದ್ದು, ಪಾಲಕರಿಗೆ ಜಾಗೃತಿ ಮೂಡಿಸಿದಾಗ ಮಾತ್ರ ಬಾಲ್ಯ ವಿವಾಹ ತಡೆಗಟ್ಟಬಹುದು’ ಎಂದು ಹೇಳಿದರು.
ನಿರ್ಮಲ ಸೇವಾ ಕೇಂದ್ರದ ಸಂಯೋಜಕಿ ಸಿಸ್ಟರ್ ಹೆಲೆನ್ ರೇಗೊ ಮಾತನಾಡಿ, ಬಾಲ್ಯ ವಿವಾಹದಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಸವಿವರವಾಗಿ ವಿವರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೊತೆಗೆ ಬಹುಮಾನ, ಪುಸ್ತಕ ಮತ್ತು ಪೆನ್ನುಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿರ್ಮಲ ಕಾನ್ವೆಂಟ್ ಮುಖ್ಯಶಿಕ್ಷಕಿ ಸಿಸ್ಟರ್ ಆರ್ಕೋಯಿ ಮ್ಯಾರಿ, ಟೈಲರಿಂಗ್ ಶಿಕ್ಷಕಿ ಪಂಕಜಾ, ಶಿಕ್ಷಕಿ ಸಿಸ್ಟರ್ ಸ್ವಡ್ಲಿ ಸೇರಿದಂತೆ 60ಕ್ಕೂ ಅಧಿಕ ಮಕ್ಕಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.