ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮ

ಚರ್ಚ್‌ಗಳಲ್ಲಿ ಪ್ರಾರ್ಥನೆ, ಆರಾಧನೆ, ಏಸುವಿನ ಗುಣಗಾನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 15:48 IST
Last Updated 25 ಡಿಸೆಂಬರ್ 2021, 15:48 IST
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕ್ರಿಸ್‌ಮಸ್‌ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಕ್ರಿಶ್ಚಿಯನ್ನರು ಭಾಗವಹಿಸಿದ್ದರು
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಕ್ರಿಸ್‌ಮಸ್‌ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಕ್ರಿಶ್ಚಿಯನ್ನರು ಭಾಗವಹಿಸಿದ್ದರು   

ಚಾಮರಾಜನಗರ/ಕೊಳ್ಳೇಗಾಲ: ಜಿಲ್ಲೆಯಾದ್ಯಂತ ಶನಿವಾರ ಕ್ರಿಶ್ಚಿಯನ್ನರು ಏಸು ಕ್ರಿಸ್ತನ ಜನ್ಮದಿನದ ಹಬ್ಬ ಕ್ರಿಸ್‌ಮಸ್‌ ಅನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.

ಕೋವಿಡ್‌ ನಿರ್ಬಂಧಗಳು ಈ ವರ್ಷ ಜಾರಿಯಲ್ಲಿದ್ದರೂ, ಕಳೆದ ವರ್ಷದಷ್ಟು ಬಿಗಿಯಾಗಿರಲಿಲ್ಲ. ಹಾಗಾಗಿ, ಚರ್ಚ್‌ಗಳಲ್ಲಿ ಕೋವಿಡ್‌ ಶಿಷ್ಟಾಚಾರವನ್ನು ಪಾಲಿಸಿಕೊಂಡು ಅದ್ಧೂರಿಯಾಗಿಯೇ ಹಬ್ಬ ಆಚರಿಸಿದರು.

ಶುಕ್ರವಾರ ರಾತ್ರಿ 12 ಗಂಟೆಯ ನಂತರ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಆರಾಧನೆ, ದಿವ್ಯ ಬಲಿಪೂಜೆ ನಡೆಯಿತು. ಕ್ರಿಶ್ಚಿಯನ್ನರು ಕುಟುಂಬದ ಸದಸ್ಯರೊಂದಿಗೆ ಬಂದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ADVERTISEMENT

ಧರ್ಮಗುರುಗಳು ಏಸುವಿನ ಜೀವನ ಸಂದೇಶವನ್ನು ಸಾರಿದರು. ಹಬ್ಬದ ಅಂಗವಾಗಿ ಶುಭ ಸಂದೇಶ ನೀಡಿದರು. ಆರಾಧನೆ ಮುಗಿದ ಬಳಿಕ ಎಲ್ಲರೂ ಪರಸ್ಪರ ಕೇಕ್‌, ಸಿಹಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಶನಿವಾರ ಬೆಳಿಗ್ಗೆಯೂ ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು. ಏಸುವಿನ ಗುಣಗಾನ ಮಾಡುವ ಭಜನೆಗಳನ್ನು ಹಾಡಿದರು.ಜನರು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಳ್ಳುತ್ತಿದ್ದು ಕಂಡು ಬಂತು.

ಶುಭಾಶಯ: ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಮಾಜದ ಗಣ್ಯರು ಚರ್ಚ್‌ಗಳಿಗೆ ಮತ್ತು ಕ್ರಿಶ್ಚಿಯನ್‌ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಹಬ್ಬದ ಶುಭಾಶಯ ಕೋರಿದರು.

ಕೊಳ್ಳೇಗಾಲ ವರದಿ: ತಾಲ್ಲೂಕಿನಾದ್ಯಂತ ಎಲ್ಲಾ ಚರ್ಚ್‍ಗಳಲ್ಲಿ ಕ್ರಿಸ್‌ಮಸ್ ಅನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ನಗರದ ಬೇತೆಲ್ ಲೂಥರನ್ ಚರ್ಚ್, ಸಂತ ಫ್ರಾನಿಸ್ಸ್ ಅಸ್ಸಿಸಿ ಚರ್ಚ್, ಬ್ರದರನ್ ಚರ್ಚ್, ಸವೆಂತ್ ಡೇ ಚರ್ಚ್, ಸಿ.ಎಸ್.ಐ ಚರ್ಚ್, ಅರುಣೋದಯ ಚರ್ಚ್ ಸೇರಿದಂತೆ ಎಲ್ಲ ಚರ್ಚ್‍ಗಳಲ್ಲಿ ವಿಶೇಷ ಸಮೂಹಿಕ ಪ್ರಾರ್ಥನೆ, ಆರಾಧನೆ ನಡೆಯಿತು.

ಬೇತೆಲ್ ಲೂಥರನ್ ಚರ್ಚ್ ಪ್ಯಾಸ್ಟರ್ ರೆ.ನಂದಕುಮಾರ್ ಅವರು ಸಭಿಕರಿಗೆ ವಿಶೇಷವಾದ ಭೋದನೆ ನಡೆಸಿ ದೇವರನ್ನು ಆರಾಧಿಸಿ ಸಂಗೀತದ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಎಲ್ಲರಿಗೂ ಸಹ ರಾತ್ರಿ ಭೋಜನವನ್ನು ನೀಡಿದರು. ಆರಾಧನೆ ನಂತರ ಕ್ರಿಸ್‌ಮಸ್ ಕೇಕ್ ವಿತರಿಸಲಾಯಿತು.

ಶಾಸಕ ಎನ್.ಮಹೇಶ್ ಎಲ್ಲಾ ಚರ್ಚ್‍ಗಳಿಗೆ ಭೇಟಿ ನೀಡಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು.

ಮನೆ ಮನೆಗಳಲ್ಲೂ ಸಂಭ್ರಮ
ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆ, ಸಮುದಾಯದವರ ಮನೆಗಳಲ್ಲೂ ಹಬ್ಬದ ಸಂಭ್ರಮ ಮನೆಮಾಡಿತ್ತು. ಮಕ್ಕಳು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಹಿರಿಯರು ಮಕ್ಕಳಿಗೆ ಕ್ರಿಸ್‌ಮಸ್‌ ಉಡುಗೊರೆಗಳನ್ನು ನೀಡಿದರು. ಮನೆಗೆ ಸ್ನೇಹಿತರು ಹಾಗೂ ನೆಂಟರಿಷ್ಟರನ್ನು ಆಹ್ವಾನಿಸಿ ಅವರಿಗೆ ಕೇಕ್‌ ನೀಡಿ, ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸಿ ಬಡಿಸಿದರು. ಅತಿಥಿಗಳಿಗೆ ಕ್ರಿಸ್‌ಮಸ್‌ ಕೇಕ್‌ ಹಾಗೂ ಇತರ ತಿಂಡಿಗಳನ್ನು ಕೊಟ್ಟು ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.