ADVERTISEMENT

ಚಾಮರಾಜನಗರ: ಹಾಲು ಖರೀದಿ ದರ ₹ 2 ಕಡಿತ

3 ಲಕ್ಷ ಲೀಟರ್‌ಗೇರಿದ ಹಾಲಿನ ಉತ್ಪಾದನೆ: ಬೆಣ್ಣೆ, ಹಾಲಿನ ಪುಡಿ ದರ ಕುಸಿತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:13 IST
Last Updated 8 ಜುಲೈ 2020, 16:13 IST
ಎಂ.ರಾಜಶೇಖರಮೂರ್ತಿ
ಎಂ.ರಾಜಶೇಖರಮೂರ್ತಿ   

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟವು (ಚಾಮುಲ್‌) ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹ 2 ಕಡಿತಗೊಳಿಸಿದೆ. ಬುಧವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ.

ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿರುವುದು ಹಾಗೂ ಕೋವಿಡ್‌–19 ಕಾರಣಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಣ್ಣೆ ಹಾಗೂ ಹಾಲಿನ ಪುಡಿಯ ಬೆಲೆ ಗಣನೀಯ ಕುಸಿತ ಕಂಡಿರುವುದರಿಂದ ಖರೀದಿ ದರ ಕಡಿತಗೊಳಿಸಲಾಗಿದೆ ಎಂದು ಚಾಮುಲ್‌ ಹೇಳಿದೆ.

ಹೊಸ ದರದಂತೆ ಹಾಲು ಉತ್ಪಾದಕರಿಗೆ ಚಾಮುಲ್‌ ಪ್ರತಿ ಲೀಟರ್‌ಗೆ ₹ 24.50 ನೀಡಲಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಲೀಟರ್‌ ಹಾಲಿಗೆ ₹ 26.50 ನೀಡಲಿದೆ.

ADVERTISEMENT

ಜನವರಿ ಹಾಗೂ ಏಪ್ರಿಲ್‌ ನಡುವೆ ಚಾಮುಲ್‌ ಖರೀದಿ ದರವನ್ನು ಪ್ರತಿ ಲೀಟರ್‌ಗೆ ₹ 4ರಷ್ಟು ಹೆಚ್ಚಿಸಿತ್ತು. ಮೇ 16ರಿಂದ ಅನ್ವಯವಾಗುವಂತೆ ಲೀಟರ್‌ಗೆ ₹ 1 ಕಡಿತಗೊಳಿಸಿತ್ತು. ಕೋವಿಡ್‌ ಆರಂಭವಾದ ನಂತರ ಚಾಮುಲ್‌ ಮಾಡುತ್ತಿರುವ ಎರಡನೇ ದರ ಕಡಿತ ಇದಾಗಿದೆ.

ಲೀಟರ್‌ಗೆ ₹ 8.5 ನಷ್ಟ

ಈ ವಿಷಯವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎಂ.ರಾಜಶೇಖರಮೂರ್ತಿ ಅವರು, ‘ಕೋವಿಡ್‌ ಹಾವಳಿ ಆರಂಭವಾದ ಬಳಿಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಣ್ಣೆ ಹಾಗೂ ಹಾಲಿನಪುಡಿಯ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. 1 ಕೆ.ಜಿ.ಗೆ ₹ 350ರಷ್ಟಿದ್ದ ಬೆಣ್ಣೆಗೆ ಈಗ ₹ 203 ಇದೆ. ₹ 298ರಷ್ಟಿದ್ದ ಒಂದು ಕೆ.ಜಿ. ಹಾಲುಪುಡಿಯ ಬೆಲೆ ಈಗ ₹ 135 ಇದೆ. ಸಂಸ್ಥೆಗೆ ಪ್ರತಿ ಲೀಟರ್‌ಗೆ ₹ 8.5 ನಷ್ಟವಾಗುತ್ತಿದೆ’ ಎಂದು ಹೇಳಿದರು.

ಹೆಚ್ಚಿದ ಉತ್ಪಾದನೆ

‘ಸದ್ಯ ಜಿಲ್ಲೆಯಲ್ಲಿ ಪ್ರತಿ ದಿನ ಮೂರು ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. 30 ಸಾವಿರ ಲೀಟರ್‌ ಹಾಲು ಹಾಗೂ 8000 ಲೀಟರ್‌ ಮೊಸರು ಮಾರಾಟವಾಗುತ್ತಿದೆ. 80 ಸಾವಿರ ಲೀಟರ್‌ನಷ್ಟು ಗುಡ್‌ಲೈಫ್‌ ಹಾಲು ತಯಾರಿಸಲಾಗುತ್ತಿದೆ. ಉಳಿದ ಹಾಲನ್ನು ನಾವು ಬೆಣ್ಣೆ ಇಲ್ಲವೇ ಪುಡಿ ಮಾಡಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.

‘ನಮ್ಮಲ್ಲಿ ಕೆಲವು ತಿಂಗಳ ಹಿಂದೆ ದಿನಕ್ಕೆ 1.90ಲಕ್ಷ ಲೀಟರ್‌ಗಳಷ್ಟು ಹಾಲು ಉತ್ಪಾದನೆಯಾಗುತ್ತಿತ್ತು. ಈಗ ಅದು ಮೂರು ಲಕ್ಷಕ್ಕೆ ಏರಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.