ಚಾಮರಾಜನಗರ: ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಕೃಷಿಕರು ಹೆಚ್ಚಾಗಿರುವ ಚಾಮರಾಜನಗರ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.
ಸಿದ್ಧಾರ್ಥ ಪರಿಶಿಷ್ಟ ಜಾತಿ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಭಾನುವಾರ ಬುದ್ಧನಗರ ನಾಗರಿಕ ಹಿತರಕ್ಷಣಾ ಸಮಿತಿಯ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ‘ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಂಡಿದ್ದು ಬಿಟ್ಟರೆ ನಂತರದಲ್ಲಿ ನಿರೀಕ್ಷಿತ ಪ್ರಗತಿಯಾಗಲಿಲ್ಲ. ನಂಜುಂಡಪ್ಪ ವರದಿಯ ಪ್ರಕಾರ ಚಾಮರಾಜನಗರ ಅತಿ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿದೆ’ ಎಂದರು.
‘ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ಆರೋಗ್ಯ ಸಚಿವನಾಗಿದ್ದಾಗ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದೇನೆ, ಜಿಲ್ಲಾ ರಸ್ತೆಯಾಗಿದ್ದ ಬಿ.ರಾಚಯ್ಯ ಜೋಡಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಲು ಇಲಾಖೆಯಿಂದ ₹ 37 ಕೋಟಿ ಅನುದಾನ ಮಂಜೂರು ಮಾಡಿದ್ದೇನೆ. ಅಧಿಕಾರ ಸಿಕ್ಕಾಗಲೆಲ್ಲ ಜಿಲ್ಲೆಗೆ ಕೊಡುಗೆ ನೀಡಿದ್ದೇನೆ ಎಂದು ಸ್ಮರಿಸಿದರು.
‘ಕ್ಷೇತ್ರದ ಸಂಸದ ಸುನೀಲ್ ಬೋಸ್ ಒತ್ತಾಯದ ಮೇರೆಗೆ ಹಾಗೂ ಇಲ್ಲಿನ ಜನರು ಪಕ್ಷಕ್ಕೆ ತೋರಿರುವ ಪ್ರೀತಿ, ನಿಷ್ಠೆ ಹಾಗೂ ಶಕ್ತಿಗೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ಆಯೋಜಿಸಿ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇನೆ. ಸಂಪುಟದಲ್ಲಿ ₹ 3600 ಕೋಟಿ ಅನುದಾನ ಜಿಲ್ಲೆಗೆ ದೊರೆತಿದೆ’ ಎಂದು ಸಚಿವ ಮಹದೇವಪ್ಪ ಸ್ಮರಿಸಿದರು.
ಮಾಲಂಗಿಯಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಹಾಗೂ ನಗರಕ್ಕೆ ಸಮರ್ಪಕ ಯುಜಿಡಿ ವ್ಯವಸ್ಥೆಗೆ ₹ 305 ಕೋಟಿ ನೀಡಲಾಗಿದೆ. ಏತ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೂ ಒತ್ತು ನೀಡಲಾಗಿದೆ ಎಂದರು.
ದಲಿತರು, ಹಿಂದುಳಿದ ವರ್ಗಗಳ ಸ್ವಾಭಿಮಾನದ ಬದುಕು ನೀಡಲು ಅಂಬೇಡ್ಕರ್ ಕಾರಣರಾಗಿದ್ದು ಅವರ ಆಶಯ, ತತ್ವ ಸಿದ್ಧಾಂತಗಳು ಹಾಗೂ ವಿಚಾರಧಾರೆಗಳಿಗೆ ಬದ್ಧರಾಗಿ ಬದುಕಬೇಕಿದೆ ಎಂದು ಕರೆ ನೀಡಿದರು.
ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಸ್. ಮಹಾದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮಂಜುನಾಥ ಪ್ರಸನ್ನ, ಪೌರಾಯುಕ್ತರಾದ ರಾಮದಾಸ್ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.