ADVERTISEMENT

ಡಿಕೆಶಿ ಮನೆಯಲ್ಲಿ ಸಿಬಿಐ ತಪಾಸಣೆ;ಕಾಂಗ್ರೆಸ್‌ ಪ್ರತಿಭಟನೆ

ಹಾಥರಸ್‌ ಪ್ರಕರಣ; ಯೋಗಿ ಆದಿತ್ಯನಾಥ ಸರ್ಕಾರ ವಜಾಕ್ಕೂ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 14:25 IST
Last Updated 5 ಅಕ್ಟೋಬರ್ 2020, 14:25 IST
ಸಿಬಿಐ ದಾಳಿಯನ್ನು ಖಂಡಿಸಿದ ಕಾಂಗ್ರೆಸ್‌ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು
ಸಿಬಿಐ ದಾಳಿಯನ್ನು ಖಂಡಿಸಿದ ಕಾಂಗ್ರೆಸ್‌ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು   

ಚಾಮರಾಜನಗರ:ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಯುವತಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಬಿಐ ಅಧಿಕಾರಿಗಳು ತಪಾಸಣೆ ನಡೆಸಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಹೊಸ್ತಿಲಿನಲ್ಲಿ ಕೇಂದ್ರ ಸರ್ಕಾರ, ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ’ ಎಂದು ಆರೋಪಿಸಿದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗ ಸಮಾವೇಶಗೊಂಡ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ದ ಘೋಷಣೆ ಕೂಗಿತ್ತಾ, ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ಮಾಡಿದರು. ಸ್ವಲ್ಪಹೊತ್ತು ರಸ್ತೆ ತಡೆ ನಡೆಸಿ ಮೋದಿ, ಅಮಿತ್‌ ಶಾ ಅವರ ಭಾವಚಿತ್ರಗಳನ್ನು ಸುಟ್ಟರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು, ‘ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗ ಸೇರಿದ ಯುವತಿಯ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ. ಪ್ರಕರಣ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಯೋಗಿ ಅದಿತ್ಯನಾಥ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಪಿಸಿಸಿ ಅಧ್ಯಕ್ಷರ ಮೇಲೆ ಸಿಬಿಐ ದಾಳಿ ಮಾಡಿಸಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಇದ್ದು, ಸೋಲಿನ ಭಯ ಬಿಜೆಪಿ ಮುಖಂಡರನ್ನು ಕಾಡುತ್ತಿದೆ. ವಾಮಮಾರ್ಗದಿಂದ ಚುನಾವಣೆ ಗೆಲ್ಲಲು ಮುಂದಾಗಿದ್ದಾರೆ’ ಎಂದರು.

‘ಈಗಾಗಲೇ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆದಾಯ ತೆರಿಗೆ ಅಧಿಕಾರಿಗಳು ದಾಖಲಿಸಿರುವ ಪ್ರಕರಣಗಳು ನ್ಯಾಯಾಲಯದಲ್ಲಿದ್ದರೂ ಸಹ ಕೇಂದ್ರ ಸರ್ಕಾರ ಸ್ವಾರ್ಥಕ್ಕಾಗಿ ಸಿಬಿಐಯನ್ನು ಬಳಕೆ ಮಾಡಿಕೊಂಡಿದೆ. ಬಿಜೆಪಿಯು ಹಿಂದಿನಿಂದಲೂ ಚುನಾವಣೆಗಳು ಹತ್ತಿರ ಬಂದಾಗ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿಗಳನ್ನು ಮಾಡಿಸಿ, ಗೆಲುವು ಸಾಧಿಸಲು ಹವಣಿಸುತ್ತಿದೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಜಿಲ್ಲಾ ಪಂಚಾಯಿತಿ ಸದಸ್ಯ ಸದಾಶಿವಮುರ್ತಿ, ಕೆರೆಹಳ್ಳಿ ನವೀನ್, ರಮೇಶ್, ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಪ್ರಧಾನ ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಎಪಿಎಂಸಿ ಅಧ್ಯಕ್ಷ ಡಿ. ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಹದೇವಶೆಟ್ಟಿ, ಪುಟ್ಟಸ್ವಾಮಿ, ಬಾಲಚಂದ್ರಮೂರ್ತಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಮಾಧ್ಯಮ ಸಂಚಾಲಕ ಅರುಣ್ ಕುಮಾರ್‌, ಕಾನೂನು ವಿಭಾಗದ ಅಧ್ಯಕ್ಷ ನಾಗಾರ್ಜುನ ಪ್ರಥ್ವಿ, ಮುಖಂಡರಾದ ಚಿನ್ನಸ್ವಾಮಿ, ಸುಹೇಲ್ ಆಲಿ ಖಾನ್, ಸ್ವಾಮಿ, ಕಾಗಲವಾಡಿ ಶಿವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.