ADVERTISEMENT

ಸಂವಿಧಾನ ಬದಲಾವಣೆ ಸಾಧ್ಯವಿಲ್ಲ: ಸಂಸದ ಯದುವೀರ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 15:18 IST
Last Updated 1 ಜುಲೈ 2025, 15:18 IST
ಕೊಳ್ಳೇಗಾಲ ನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕರಾಳ ಇತಿಹಾಸಕ್ಕೆ 50 ವರ್ಷ ವಿಚಾರ ಸಂಕಿರಣದಲ್ಲಿ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು
ಕೊಳ್ಳೇಗಾಲ ನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌ ಕರಾಳ ಇತಿಹಾಸಕ್ಕೆ 50 ವರ್ಷ ವಿಚಾರ ಸಂಕಿರಣದಲ್ಲಿ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು   

ಕೊಳ್ಳೇಗಾಲ: ‘ಸಂವಿಧಾನವನ್ನು ಯಾರಿಂದಲೂ ಸಹ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಮೈಸೂರು– ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್‌– ಕರಾಳ ಇತಿಹಾಸಕ್ಕೆ 50 ವರ್ಷ’ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಸಹ ಸಂವಿಧಾನವನ್ನು ರಕ್ಷಣೆ ಮಾಡಬೇಕು. ಸಂವಿಧಾನವೇ ನಮಗೆ ಶಕ್ತಿ, ರಕ್ಷಣೆ ಹಾಗೂ ದೇವರು’ ಎಂದರು.

‘ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಜನರಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ. ಸುಳ್ಳು ಸುದ್ದಿಗಳನ್ನು ಹೇಳುವುದರಲ್ಲಿ ಆ ಪಕ್ಷ ನಂಬರ್ ಒನ್ ಸ್ಥಾನವನ್ನು ಪಡೆದಿದೆ, ಅವರಿಗೆ ಸುಳ್ಳೇ ಅಸ್ತ್ರ ಅದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ’ ಎಂದು  ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಯೊಬ್ಬರೂ ಸಹ ಸಂವಿಧಾನದ ಮೂಲಕ ನಡೆಯಬೇಕು. ಮತ್ತೆ ದೇಶವು ತುರ್ತು ಪರಿಸ್ಥಿತಿಗೆ ಬರದಂತೆ ಒಟ್ಟಾಗಿರಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರ ನಮ್ಮ ದೇಶವನ್ನೇ ಹಾಳು ಮಾಡಿದೆ. ಅಂದಿನ ತುರ್ತು ಪರಿಸ್ಥಿತಿಯಲ್ಲಿ ಅವರಿಗೆ ಹೇಗೆ ಬೇಕೋ ಹಾಗೆ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡರು. ಅದೇ ಅವರ ಸಾಧನೆ, ಕಾಂಗ್ರೆಸ್ ಕರಾಳ ಇತಿಹಾಸದ ತುರ್ತು ಪರಿಸ್ಥಿತಿಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 11 ವರ್ಷಗಳಿಂದಲೂ ಉತ್ತಮ ಅಧಿಕಾರದ ಮೂಲಕ ದೇಶವನ್ನು ಪರಿವರ್ತನೆ ಮಾಡಿದ್ದಾರೆ. ಕೇಂದ್ರದಲ್ಲಿ ಕೇಸರಿ ಅರಳಿದೆ ಹಾಗೆ ರಾಜ್ಯದಲ್ಲೂ ಕೇಸರಿ ಅರಳಬೇಕು. 2028ಕ್ಕೆ ಚುನಾವಣೆ ಎದುರಿಸಲು ಸಿದ್ದರಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಹಗಲು ರಾತ್ರಿ ದುಡಿದು ಕೆಲಸ ಮಾಡಬೇಕು’ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ‘ಕಾಂಗ್ರೆಸ್ ಅವರು ಸಂವಿಧಾನ ರಕ್ಷಕರಲ್ಲ ಅವರು ಸಂವಿಧಾನದ ವಿರೋಧಿಗಳು. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು, ಅದನ್ನು ಸಂಸತ್ತಿನಲ್ಲಿ ರಾಜೀವ್ ಗಾಂಧಿ ಸಮರ್ಥನೆ ಮಾಡಿಕೊಂಡರು, ರಾಹುಲ್ ಗಾಂಧಿಯೂ ಇದೆ ಡಿಎನ್ಎ ಇಂದ ಬಂದವರು. ಅವರೂ ಸಹ ಮುಂದಿನ ದಿನಗಳಲ್ಲಿ ತುರ್ತು ಪರಿಸ್ಥಿತಿ ತರುವುದರಲ್ಲಿ ಅನುಮಾನವೇ ಇಲ್ಲ. ಆ ಕುಟುಂಬದವರಿಗೆ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕರಾಳ ದಿನವನ್ನು ವಿರೋಧಿಸಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಎಸ್.ಬಾಲರಾಜು, ಮುಖಂಡ ಪ್ರೀತಮ್ ನಾಗಪ್ಪ, ಸುಂದರ್, ರಾಮಚಂದ್ರ, ನಿಶಾಂತ್, ನಗರ ಮಂಡಲ ಬಿಜೆಪಿ ಅಧ್ಯಕ್ಷ ಸಿ.ಎಂ.ಪರಮೇಶ್ವರಯ್ಯ, ಗ್ರಾಮಾಂತರ ಅಧ್ಯಕ್ಷ ನಾಗೇಶ್, ಚಾಮರಾಜನಗರ ಮಂಡಲದ ಶಿವರಾಜ್, ಯಳಂದೂರು ಅನಿಲ್, ಎಸ್‌ಸಿ ಘಟಕದ ಅಧ್ಯಕ್ಷ ಸಿದ್ಧಪ್ಪಾಜಿ ಇದ್ದರು.

ADVERTISEMENT

‘ದಸರಾ; ಶುರು ಮಾಡಿದವರು ಮುಂದುವರಿಸಿ’

‘ಮೈಸೂರು ಮಹಾರಾಜರು ದಸರಾ ಹಬ್ಬವನ್ನು ಮೈಸೂರಿಗೆ ಮಾತ್ರ ಸೀಮಿತ ಮಾಡಿದ್ದರು. ಈ ಹಿಂದೆ ಇದ್ದ ಸರ್ಕಾರಗಳು ಮೈಸೂರು ಜೊತೆಯಲ್ಲಿ ಬೇರೆ ಬೇರೆ ಕಡೆ ದಸರಾ ಆಚರಣೆ ಮಾಡಲು ಆರಂಭಿಸಿದರು. ಜನರ ಭಾವನೆಗೆ ತಕ್ಕಂತೆ ಅವರು ಕೆಲಸ ಮಾಡಬೇಕಾಗಿದೆ. ಹೊಸ ದಸರಾಗಳನ್ನು ಶುರು ಮಾಡಿದ ಸರ್ಕಾರವು ಮುಂದುವರಿಸುವುದೂ ಅಗತ್ಯ’ ಎಂದು ಸಂಸದ ಯದುವೀರ್‌ ಹೇಳಿದರು. ‘ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಚಾಮರಾಜನಗರ ಹಾಗೂ ಮೈಸೂರು ಕೊಡಗು ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸ ಕಾಮಗಾರಿಗಳು ಆಗಿಲ್ಲ’ ಎಂದು ದೂರೊದರು.

ಹುಲಿ ಸಾವು ಸಮಗ್ರ ತನಿಖೆ ಮಾಡಿ

‘ರಾಜ್ಯದಲ್ಲಿ ಶೇ 50ಕ್ಕೂ ಹೆಚ್ಚು ವನ್ಯ ಪ್ರದೇಶ ಹೊಂದಿರುವ ಈ ಜಿಲ್ಲೆಯಲ್ಲಿರುವಷ್ಟು ವನ್ಯಜೀವಿ ವೈವಿಧ್ಯತೆ ಎಲ್ಲಿಯೂ ಇಲ್ಲ. ಜಿಲ್ಲೆಯ ಪ್ರತಿನಿಧಿಗಳು ಇಲ್ಲಿನ ಜೀವವೈವಿಧ್ಯತೆ ಹಾಗೂ ಜನರನ್ನ ಕಾಪಾಡಬೇಕಾದ ಕರ್ತವ್ಯ ಹೊಂದಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಒತ್ತು ನೀಡಿ ಸಮಗ್ರ ಹಾಗೂ ಸೂಕ್ತ ತನಿಖೆ ಆಗಬೇಕು’ ಎಂದು ಯದುವೀರ್‌ ಹೇಳಿದರು. ‘ಬಂಡೀಪುರ ಅರಣ್ಯ  ರಸ್ತೆಯಲ್ಲಿ ರಾತ್ರಿ ಪ್ರಯಾಣ ನಿಷೇಧ ವಿಚಾರದಲ್ಲೂ ಗೊಂದಲ ಮೂಡಿಸಲಾಗಿದೆ. ಕಾಂಗ್ರೆಸ್‌ನವರು ಕೇಂದ್ರದ ಯಾವುದೋ ಒಂದು ಫ್ಯಾಮಿಲಿ ಸಲುವಾಗಿ ನಿಷೇಧ ತೆರವುಗೊಳಿಸಲು ಹೇಳುತ್ತಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ. ನಾನು ಈ ವಿಚಾರವನ್ನ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಕಾಂಗ್ರೆಸ್‌ನವರಿಗೆ ವನ್ಯಜೀವಿ ಕುರಿತು ಆಸಕ್ತಿ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.