ADVERTISEMENT

ಚಾಮರಾಜನಗರದಲ್ಲಿ ಕೋವಿಡ್‌ ನಿರ್ವಹಣೆಯಲ್ಲಿ ಭ್ರಷ್ಟಾಚಾರ– ಜಿ.ಪಂ. ಸದಸ್ಯರ ಆರೋಪ

ಟೆಂಟರ್‌ ಕರೆಯದೇ ಖರೀದಿ, ನಿರ್ಧಾರ ಕೈಗೊಳ್ಳುವಾಗ ಜನಪ್ರತಿನಿಧಿಗಳ ನಿರ್ಲಕ್ಷ್ಯ– ಬಿಜೆಪಿ, ಕಾಂಗ್ರೆಸ್‌ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 15:28 IST
Last Updated 15 ಸೆಪ್ಟೆಂಬರ್ 2020, 15:28 IST
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಭೋಯರ್‌ ಹರ್ಷಲ್‌ ನಾರಾಯಣರಾವ್‌ ಇದ್ದಾರೆ
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಭೋಯರ್‌ ಹರ್ಷಲ್‌ ನಾರಾಯಣರಾವ್‌ ಇದ್ದಾರೆ   

ಚಾಮರಾಜನಗರ: ಕೋವಿಡ್‌–19 ಪರಿಸ್ಥಿತಿ ನಿರ್ವಹಿಸುವುದಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಾಡಿರುವ ವೆಚ್ಚದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಗಂಭೀರ ಆರೋಪ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ.ಅಶ್ವಿನಿ ಅವರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಚರ್ಚೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರು ಈ ಆಪಾದನೆ ಮಾಡಿದರು.

‘ಸೋಂಕು ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ನಡೆಸಿದ ಸಭೆಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಸರ್ಕಾರದ ಹಣ ಲೂಟಿ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೊದಲಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಸಿ.ಎನ್‌.ಬಾಲರಾಜು ಅವರು, ‘ಕೋವಿಡ್‌ ನಿರ್ವಹಣೆಗಾಗಿ ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿಯಲ್ಲಿ (ಎನ್‌ಎಚ್‌ಎಂ) ₹10 ಲಕ್ಷ ವೆಚ್ಚದಲ್ಲಿ ವಿವಿಧ ಖರೀದಿ ನಡೆದಿದೆ. ಕೆಟಿಪಿಪಿ (ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕ) ಕಾಯ್ದೆಯ₹1 ಲಕ್ಷಕ್ಕೂ ಹೆಚ್ಚು ಮೌಲ್ಯದ ಖರೀದಿಗೆ ಟೆಂಡರ್‌ ಕರೆಯಬೇಕು. ಆದರೆ, ಇಲ್ಲಿ ಅದನ್ನು ಉಲ್ಲಂಘಿಸಲಾಗಿದೆ. ಮಾರ್ಚ್‌ 16ರಿಂದ ಮಾರ್ಚ್‌ 30ರ ನಡುವಿನ ಅವಧಿಯಲ್ಲಿ ₹9 ಲಕ್ಷ ಖರ್ಚು ಮಾಡಲಾಗಿದೆ. ಇದರಲ್ಲಿ ಮಾಸ್ಕ್‌ ಖರೀದಿಗಾಗಿ ₹2.56 ಲಕ್ಷ ವೆಚ್ಚ ಮಾಡಲಾಗಿದೆ. ₹1.13 ಲಕ್ಷ ಖರ್ಚು ಮಾಡಿ ಪಿಪಿಇ ಕಿಟ್‌ ಖರೀದಿಸಲಾಗಿದೆ. ಮಾಸ್ಕ್‌ಗಳು ₹6–₹8ಗೆ ಸಿಗುತ್ತವೆ. ಇಲ್ಲಿ ಒಂದು ಮಾಸ್ಕ್‌ಗೆ ₹20 ನಿಗದಿ ಪಡಿಸಲಾಗಿದೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭೋಯರ್‌ ಹರ್ಷಲ್‌ ನಾರಾಯಣ ರಾವ್‌ ಅವರು, ‘ಕೋವಿಡ್‌ ನಿರ್ವಹಣೆ ಜವಾಬ್ದಾರಿ ಜಿಲ್ಲಾ ಪಂಚಾಯಿತಿಯದ್ದಲ್ಲ. ನಮ್ಮ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆ ಅಡಿಯಲ್ಲಿ ₹10 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4(ಜಿ) ಅಡಿಯಲ್ಲಿ ತುರ್ತು ಪರಿಸ್ಥಿತಿಯಲ್ಲಿ ಟೆಂಡರ್‌ ಕರೆಯುವುದಕ್ಕೆ ವಿನಾಯಿತಿ ಇದೆ. ಆರೋಗ್ಯ ಇಲಾಖೆ ಸರ್ಕಾರದ ಮಾರ್ಗಸೂಚಿಗಳ ಅನ್ವಯವೇ ಖರೀದಿ ನಡೆಸಲಾಗಿದೆ. ಸ್ವಸಹಾಯ ಸಂಘಗಳ ಮೂಲಕ ಮಾಸ್ಕ್‌ಗಳನ್ನು ಖರೀದಿಸಿದ್ದೇವೆ. ನಾವು ಮಾಡಿರುವ ಖರ್ಚಿನ ಬಗ್ಗೆ ಲೆಕ್ಕ ಪರಿಶೋಧನೆಯನ್ನೂ ಮಾಡಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ವರದಿಯನ್ನು ಸಭೆಗೆ ನೀಡುತ್ತೇವೆ’ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಸಿ.ರವಿ ಅವರು ಮಾತನಾಡಿ, ‘ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಕಾಯ್ದೆಯ ಅಡಿಯಲ್ಲಿ ಟೆಂಡರ್‌ ಕರೆಯುವುದಕ್ಕೆ ವಿನಾಯಿತಿ ಇದೆ. ಮಾಡಿರುವ ಖರ್ಚುಗಳಿಗೆ ಎಲ್ಲ ವಿವರ, ದಾಖಲೆಗಳಿವೆ’ ಎಂದರು.

ಸಿ.ಎನ್‌.ಬಾಲರಾಜು ಅವರು ಮಾಡಿರುವ ಆರೋಪಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಕೆ.ಎಸ್‌.ಮಹೇಶ್‌, ‘ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ಸಂದರ್ಭದಲ್ಲಿ ನಾನು ಜಿಲ್ಲಾ ಪಂಚಾಯಿತಿಯ ಹಂಗಾಮಿ ಅಧ್ಯಕ್ಷನಾಗಿದ್ದೆ. ಆದರೆ, ಪರಿಸ್ಥಿತಿ ನಿರ್ವಹಣೆ ಕುರಿತು ಅಧಿಕಾರಿಗಳು ಸಭೆ ನಡೆಸುವಾಗ ನನ್ನನ್ನು ಒಂದು ಬಾರಿಯೂ ಕರೆದಿಲ್ಲ. ಮಂತ್ರಿಗಳು ಬಂದ ಸಮಯದಲ್ಲಿ ಮಾತ್ರ ನೆಪ ಮಾತ್ರಕ್ಕೆ ಕರೆದಿದ್ದರು. ಜನಪ್ರತಿನಿಧಿಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಸಭೆ ನಡೆಸಿ, ಅಧಿಕಾರಿಗಳು ತಮಗೆ ಬೇಕಾದಂತೆ ನಿರ್ಧಾರ ಕೈಗೊಂಡಿದ್ದಾರೆ. ಕೋವಿಡ್‌ ಖರ್ಚಿನ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ.ಎಂ.ಸಿ.ರವಿ ಅವರು ಮಾತನಾಡಿ, ‘‌ಬಹುತೇಕ ಸಭೆಗಳು ತುರ್ತು ಸಂದರ್ಭದಲ್ಲಿ ನಡೆದಿವೆ. ಹಾಗಾಗಿ, ಎಲ್ಲರನ್ನೂ ಕರೆಯುವುದಕ್ಕೆ ಆಗಿಲ್ಲ. ಕರೆಯದೇ ಇರುವುದಕ್ಕೆ ಸದಸ್ಯರ ಕ್ಷಮೆ ಕೇಳುತ್ತೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಆದರೆ, ಕೋವಿಡ್‌ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮೆಚ್ಚುಗೆ: ಕಾಂಗ್ರೆಸ್‌ನ ಕೆರೆಹಳ್ಳಿ ನವೀನ್‌ ಅವರು ಮಾತನಾಡಿ, ‘ವೆಚ್ಚಗಳಲ್ಲಿ ಆಗಿರುವ ಅವ್ಯವಹಾರವನ್ನು ನೋಡಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ಇದರ ನಡುವೆಯೂ, ಜಿಲ್ಲೆಯ ವೈದ್ಯರು ಕೋವಿಡ್‌ ಚಿಕಿತ್ಸೆಯನ್ನು ಚೆನ್ನಾಗಿ ನೀಡುತ್ತಿದ್ದಾರೆ. ಆಸ್ಪತ್ರೆಗೆ ಹೋಗಿ ಖುದ್ದಾಗಿ ನೋಡಿಕೊಂಡು ಬಂದಿದ್ದೇನೆ. ಪಿಪಿಇ ಕಿಟ್‌ ಧರಿಸಬೇಕಾದ ಅನಿವಾರ್ಯತೆಯಲ್ಲೂ ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

ರಸಗೊಬ್ಬರ ಕೊರತೆ: ಆಕ್ರೋಶ

ಜಿಲ್ಲೆಯಲ್ಲಿ ರೈತರಿಗೆ ರಸಗೊಬ್ಬರ ಕೊರತೆ ಕಾಡುತ್ತಿದೆ ಎಂದು ಸದಸ್ಯರು ಸಭೆಯಲ್ಲಿ ಆರೋಪಿಸಿದರು.

‘ಸಾಕಷ್ಟು ದಾಸ್ತಾನು ಇದೆ. ಎಲ್ಲವೂ ಸರಿಯಾಗಿದೆ ಎಂಬ ಅಂಕಿ ಅಂಶಗಳನ್ನುಕೃಷಿ ಇಲಾಖೆಯ ಅಧಿಕಾರಿಗಳು ತೋರಿಸುತ್ತಾರೆ. ಆದರೆ, ಗ್ರಾಮೀಣ ಭಾಗಗಳಲ್ಲಿ ರಸಗೊಬ್ಬರ ಸಿಗುತ್ತಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯರಾದ ಬಸವರಾಜು, ಚೆನ್ನಪ್ಪ, ಕೆ.ಎಸ್.ಮಹೇಶ್, ಸಿ.ಎನ್.ಬಾಲರಾಜು, ಮರುಗದ‌ಮಣಿ, ಬರಗಿ ಚಿನ್ನಪ್ಪ ಸೇರಿದಂತೆ ಹಲವು ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದರು. ‘ನಮ್ಮ ಬಳಿ ದಾಸ್ತಾನಿನ ಬಗ್ಗೆ ಮಾಹಿತಿಯೇ ಇಲ್ಲ. ಅಧಿಕಾರಿಗಳೂ ನೀಡುತ್ತಿಲ್ಲ. ತಕ್ಷಣವೇ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಳೆ ಚೆನ್ನಾಗಿ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರದ ಅಗತ್ಯವಿದೆ. ಹನೂರು ಭಾಗದಲ್ಲಿ ಕೊರತೆ ಕಾಡುತ್ತಿದೆ. ಅದನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಅವರು, ‘ಅಂಕಿ ಅಂಶಗಳ ಪ್ರಕಾರ ದಾಸ್ತಾನು ಇದೆ. ಆದರೆ, ತಳ ಮಟ್ಟದಲ್ಲಿ ಸಮಸ್ಯೆ ಇರುವುದನ್ನು ಪ್ರಸ್ತಾಪಿಸಿದ್ದೀರಿ. ಕೃಷಿ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಬಾರದ ಪರಿಹಾರ ಧನ: ತರಾಟೆ

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಈಡಾಗಿದ್ದ ಬಾಳೆ ಹಾಗೂ ಕಲ್ಲಂಗಡಿ ಬೆಳೆಗಾರರಿಗೆ ಇನ್ನೂ ಪರಿಹಾರ ಧನ ಬಾರದೇ ಇರುವುದಕ್ಕೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಪರಿಹಾರ ವಿತರಣೆಯ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾದ್‌ ಅವರು, ‘ಹೂವಿನ ಬೆಳೆಯಲ್ಲಿ ನಷ್ಟ ಅನುಭವಿಸಿರುವ 67 ಜನರಿಗೆ ₹4.15 ಲಕ್ಷ ಪರಿಹಾರ ಧನ ನೀಡಲಾಗಿದೆ. ಇನ್ನು 9 ಮಂದಿ ಬಾಕಿ ಇದ್ದಾರೆ. ಇನ್ನೂ 360 ಮಂದಿಗೆ ₹26 ಲಕ್ಷ ನೀಡಬೇಕಾಗಿದೆ. ಆದರೆ, ಇವರ ವಿವರಗಳು ಬೆಳೆ ಸಮೀಕ್ಷೆಯಲ್ಲಿ ಇಲ್ಲ. ಸರ್ಕಾರ ಈ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ’ ಎಂದರು.

‘2,157 ಮಂದಿ ತರಕಾರಿ ಬೆಳೆಗಾರರಿಗೆ ₹1.84 ಕೋಟಿ ಪರಿಹಾರ ನೀಡಲಾಗಿದೆ. 475 ಮಂದಿಗೆ ಪರಿಹಾರ ನೀಡಬೇಕಿದೆ. ಕಲ್ಲಂಗಡಿ ಹಾಗೂ ಬಾಳೆ ಬೆಳೆದಿದ್ದ 2,167 ಮಂದಿ ಅರ್ಜಿ ಸಲ್ಲಿಸಿದ್ದಾರೆ. 607 ಮಂದಿಗೆ ₹58 ಲಕ್ಷ ಪಾವತಿಯಾಗಿದೆ. 708 ಮಂದಿಗೆ ಬಾಕಿ ಇದೆ. ಇವರ ಬೆಳೆ ವಿವರದ ಸಮೀಕ್ಷೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಎಸ್‌.ಮಹೇಶ್‌, ಬರಗಿ ಚಿನ್ನಪ್ಪ, ಕೆರೆಹಳ್ಳಿ ನವೀನ್‌ ಅವರು, ‘ಬೆಳೆ ಸಮೀಕ್ಷೆ ಮಾಡುವ ಜವಾಬ್ದಾರಿ ಯಾರದ್ದು, ಯಾಕೆ ಮಾಡಿಲ್ಲ? ಸಮೀಕ್ಷೆ ನಡೆಸುವ ಖಾಸಗಿ ವ್ಯಕ್ತಿಗಳು ಅರ್ಹ ಫಲಾನುಭವಿಗಳನ್ನು ಬಿಟ್ಟು, ದುಡ್ಡು ಪಡೆದು ಬೇರೆಯವರ ವಿವರಗಳನ್ನು ದಾಖಲು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.