ADVERTISEMENT

ತಾಲ್ಲೂಕು ಕೇಂದ್ರಗಳಲ್ಲೂ ಕೋವಿಡ್‌ ಚಿಕಿತ್ಸೆ

ಗುಂಡ್ಲುಪೇಟೆಯಲ್ಲಿ ಸುಸಜ್ಜಿತ ಕೋವಿಡ್‌ ಕೇರ್‌ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:19 IST
Last Updated 20 ಅಕ್ಟೋಬರ್ 2020, 15:19 IST
ಗುಂಡ್ಲುಪೇಟೆಯಲ್ಲಿ ಆರಂಭಿಸಲಾಗಿರುವ ಕೋವಿಡ್‌ ಕೇರ್‌ ಕೇಂದ್ರದ ಐಸಿಯು ಘಟಕ
ಗುಂಡ್ಲುಪೇಟೆಯಲ್ಲಿ ಆರಂಭಿಸಲಾಗಿರುವ ಕೋವಿಡ್‌ ಕೇರ್‌ ಕೇಂದ್ರದ ಐಸಿಯು ಘಟಕ   

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ಗೆ ತುತ್ತಾಗಿರುವವರ ಆರೈಕೆಗಾಗಿ ಆಯಾ ತಾಲ್ಲೂಕು ಕೇಂದ್ರದಲ್ಲಿಯೇ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಮುಂದಾಗಿದೆ.

ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇಂದ್ರ ಮಂಗಳವಾರದಿಂದ ಕಾರ್ಯಾಚರಣೆ ಆರಂಭಿಸಿದೆ.

ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ಭಾಗಗಳಲ್ಲೇ ಕೋವಿಡ್ ಕೇರ್ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಗುಂಡ್ಲುಪೇಟೆಯ ತಾಲ್ಲೂಕು ಕೇಂದ್ರದಲ್ಲೇ 50 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇಂದ್ರ ತೆರೆಯಲಾಗಿದೆ.

ADVERTISEMENT

ಗಂಭೀರ ಸೋಂಕು ಲಕ್ಷಣ ಹೊಂದಿಲ್ಲದ ರೋಗಿಗಳನ್ನು ತಾಲ್ಲೂಕು ಕೇಂದ್ರಗಳಲ್ಲಿರುವ ಕೇಂದ್ರಗಳಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ.ಕೇಂದ್ರದಲ್ಲಿ ಐದು ಹಾಸಿಗೆಗಳ ತೀವ್ರ ನಿಗಾ ಘಟಕ ಇದೆ.

ಗುಂಡ್ಲುಪೇಟೆ ತಾಲ್ಲೂಕಿನ ಸೋಂಕಿತರನ್ನು ಅಲ್ಲಿಯೇ ಆರೈಕೆ ಮಾಡುವ ಉದ್ದೇಶದೊಂದಿಗೆ ಕೇಂದ್ರವನ್ನು ತೆರೆಯಲಾಗಿದೆ. ಹೋಂ ಐಸೋಲೇಷನ್ ಬಯಸುವವರಿಗೂ ನಿಯಮಾನುಸಾರ ಪರಿಶೀಲಿಸಿ ಅನುಮತಿ ಹಾಗೂ ನಿಗಾ ವಹಿಸಲು ಕೈಗೊಳ್ಳುವ ಪ್ರಕ್ರಿಯೆಯನ್ನು ಅಲ್ಲಿಯೇ ನಡೆಸಲಾಗುತ್ತದೆ.

ಅಗತ್ಯ ಸೌಲಭ್ಯ:ಕೋವಿಡ್ ಕೇಂದ್ರದಲ್ಲಿ ದಾಖಲಾಗುವವರಿಗೆ ಊಟ ಉಪಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ನಿಗದಿ ಮಾಡಿರುವ ಮೆನು ಅನುಸಾರ ಆಹಾರ ವಿತರಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಬಿಸಿನೀರಿಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಗೀಸರ್‌ಗಳನ್ನು ಅಳವಡಿಸಲಾಗಿದೆ.ಟಿವಿ ಅಳವಡಿಸಲಾಗಿದೆ. ಓದುವ ಹವ್ಯಾಸ ಇರುವವರಿಗೆ ಸದಭಿರುಚಿಯ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ ಆರಂಭಿಸುವ ಉದ್ದೇಶ ಹೊಂದಲಾಗಿದೆ. ಕೋವಿಡ್ ಕೇಂದ್ರಕ್ಕಾಗಿಯೇ ಪ್ರತ್ಯೇಕ ಆಂಬುಲೆನ್ಸ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.