ಚಾಮರಾಜನಗರ: ರಾಜ್ಯದ ವಿವಿಧೆಡೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರ ನಡುವೆಯೇ ಜಿಲ್ಲೆಯಲ್ಲೂ ಸೋಂಕು ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ.ಇದೇ ಪರಿಸ್ಥಿತಿ ಮುಂದುವರೆದರೆ ಕೋವಿಡ್‌ನ ಮೂರನೇ ಅಲೆ ಖಚಿತ ಎನ್ನುತ್ತಾರೆ ವೈದ್ಯರು.
ಸೋಮವಾರ ಒಂದೇ ದಿನ ಎಂಟು ಪ್ರಕರಣ ದೃಢಪಟ್ಟಿವೆ. ಈ ಪೈಕಿ ಏಳು ಪ್ರಕರಣ ವೈದ್ಯಕೀಯ ಕಾಲೇಜಿನಲ್ಲಿ ದೃಢಪಟ್ಟಿರುವುದು ಆತಂಕ ಸೃಷ್ಟಿಸಿದೆ. 3 ದಿನಗಳಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 20 ಇದ್ದವು. ಸೋಮವಾರ ಹೊಸದಾಗಿ ಎಂಟು ಮಂದಿಗೆ ಸೋಂಕು ದೃಢಪಡುವುದರೊಂದಿಗೆ ಸಕ್ರಿಯ ಪ್ರಕ ರಣಗಳ ಸಂಖ್ಯೆ ಏಕಾಏಕಿ 28ಕ್ಕೆ ಏರಿದೆ.
ವೈದ್ಯಕೀಯ ಕಾಲೇಜಿನಲ್ಲಿ ವಾರದ ಅವಧಿಯಲ್ಲಿ ಒಂಬತ್ತು ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಇಬ್ಬರು ಗುಣಮುಖರಾಗಿದ್ದಾರೆ. ಸೋಮವಾರ ಆರು ಮಂದಿ ವಿದ್ಯಾರ್ಥಿಗಳು ಹಾಗೂ ಒಬ್ಬರು ವೈದ್ಯರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಬದಲಾದ ಚಿತ್ರಣ: ನವೆಂಬರ್ ತಿಂಗಳ ಆರಂಭದ ಮೂರ್ನಾಲ್ಕು ದಿನ ಕೋವಿಡ್ ಪ್ರಕರಣ ವರದಿಯಾಗಿರಲಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 5ಕ್ಕೆ ಇಳಿದಿತ್ತು. ಅದೇ ಪರಿಸ್ಥಿತಿ ಮುಂದುವರೆದರೆ ಜಿಲ್ಲೆ ಕೋವಿಡ್ ಮುಕ್ತವಾಗಲಿದೆ ಎಂಬ ನಿರೀಕ್ಷೆಯನ್ನು ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೊಂದಿದ್ದರು.ಆದರೆ, 25 ದಿನದ ಅವಧಿಯಲ್ಲಿ ಚಿತ್ರಣ ಬದಲಾಗಿದ್ದು, ಪ್ರತಿ ದಿನ ದೃಢಪಡುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚು ಪರೀಕ್ಷೆ ನಡೆಸಿದಷ್ಟೂ ಹೆಚ್ಚು ಪ್ರಕರಣ ವರದಿಯಾಗುತ್ತವೆ. ಸೋಮವಾರ 763 ಮಂದಿಯ ಕೋವಿಡ್ ಪರೀಕ್ಷಾ ವರದಿಗಳು ಬಂದಿವೆ. ಇದರಲ್ಲೇ ಎಂಟು ಮಂದಿಗೆ ಸೋಂಕು ಇರುವುದು ಖಚಿತವಾಗಿದೆ.
ಎರಡನೇ ಅಲೆ ಹತೋಟಿಗೆ ಬಂದು ಸೆಪ್ಟೆಂಬರ್, ಅಕ್ಟೋಬರ್ ವೇಳೆಗೆ ಮೂರನೇ ಅಲೆ ಕಂಡು ಬಾರದೇ ಇದ್ದುದರಿಂದ ಶಾಲಾ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿವೆ. ಈಗ ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲೇ ಕೋವಿಡ್ ಪ್ರಕರಣ ವರದಿಯಾಗುತ್ತಿರುವುದರಿಂದ ಪೋಷಕರಲ್ಲೂ ಆತಂಕ ಮನೆ ಮಾಡಿದೆ.
ಪಾಲನೆಯಾಗದ ನಿಯಮ: ಈ ಮಧ್ಯೆ, ಕೋವಿಡ್ ಪ್ರಕರಣ ಕಡಿಮೆಯಾದರೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ವೈಯಕ್ತಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಸೂಚನೆಯನ್ನು ನೀಡುತ್ತಿದ್ದರೂ, ಬಹುತೇಕರು ಪಾಲಿಸುತ್ತಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಇಲ್ಲದೆಯೇ ಜನರು ಓಡಾಡುತ್ತಾರೆ. ಜಾತ್ರೆ, ಮದುವೆ, ಗೃಹಪ್ರವೇಶ, ರಾಜಕೀಯ ಸಮಾವೇಶಗಳಲ್ಲಿ ಜನ ಜಾತ್ರೆಯೇ ಸೇರಿರುತ್ತದೆ. ದೇವಾಲಯಗಳಲ್ಲೂ ಜನ ಸಂದಣಿಯೇ ಇರುತ್ತದೆ. ನಿಯಮ ಪಾಲನೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು... ಹೀಗೆ ಎಲ್ಲರೂ ಹಿಂದೆ ಬಿದ್ದಿದ್ದಾರೆ.
ಮೈಮರೆಯುವಂತಿಲ್ಲ: ಕೋವಿಡ್ ಪ್ರಕರಣ ಕಡಿಮೆಯಾಗಿದ್ದರೂ, ಜನರು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ ಎಂದು ವೈದ್ಯಾಧಿಕಾರಿಗಳು ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಈಗ ಪ್ರಕರಣ ಏರುಗತಿಯಲ್ಲಿರುವುದರಿಂದ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೋವಿಡ್ ಕೇರ್ ಕೇಂದ್ರ ತೆರೆಯಲು ಸಿದ್ಧತೆ
ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗದಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಕೋವಿಡ್ ಕೇರ್ ಕೇಂದ್ರಗಳನ್ನು ಮತ್ತೆ ಆರಂಭಿಸಲು ಕ್ರಮ ಕೈಗೊಂಡಿದೆ.
ನಗರಕ್ಕೆ ಸಮೀಪದ ಮಾದಾಪುರದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೇನಾನಿಗಳಿಗಾಗಿ ರೂಪಿಸಲಾಗಿದ್ದ ಕೋವಿಡ್ ಕೇರ್ ಕೇಂದ್ರವನ್ನು ಮತ್ತೆ ತೆರೆಯಲು ಮುಂದಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ವಿಶ್ವೇಶ್ವರಯ್ಯ ಹಾಗೂ ಇತರ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
--
ಎಲ್ಲ ಕಡೆ ಪ್ರಕರಣ ಜಾಸ್ತಿಯಾಗುತ್ತಿದೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಪಾಲನೆಗೆ ಒತ್ತು ನೀಡಬೇಕು
- ಡಾ.ಶ್ರೀನಿವಾಸ, ಜಿಲ್ಲಾ ಸರ್ಜನ್
--
ಜಿಲ್ಲೆಯಲ್ಲಿ ಸೋಮವಾರ ಎಂಟು ಪ್ರಕರಣಗಳು ದೃಢಪಟ್ಟಿವೆ. ಮುಂದೆ ಬರಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಸಿದ್ಧತೆಗಳಲ್ಲಿ ತೊಡಗಿದ್ದೇವೆ
-ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.