ADVERTISEMENT

ಉತ್ತರ ಪ್ರದೇಶ ಮಾದರಿಯಲ್ಲಿ ಜಾನುವಾರು ಹತ್ಯೆ ನಿಷೇಧ ಕಾನೂನು ಜಾರಿ: ಪ್ರಭು ಚವಾಣ್‌

ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಹೇಳಿಕೆ, ಜಾಗೃತಿ ಮೂಡಿಸಲು ಕ್ರಮದ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 2:49 IST
Last Updated 18 ಫೆಬ್ರುವರಿ 2021, 2:49 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಚಾಮರಾಜನಗರ:ಉತ್ತರ ಪ್ರದೇಶದ ಮಾದರಿಯಿಂತೆ ರಾಜ್ಯದಲ್ಲೂ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗುವುದು‌ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ಅವರು ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ತೆರಳಿ ಗ್ರಾಮ ಸಭೆಗಳನ್ನು ನಡೆಸಲು ಸೂಚನೆ ನೀಡಿದ್ದೇನೆ. ಮಠಗಳು, ಸಂಘ ಸಂಸ್ಥೆಗಳು ಗೋಶಾಲೆಗಳನ್ನು ತೆರೆಯಲು ಮುಂದೆ ಬಂದರೆ ಅವುಗಳಿಗೆ ಸರ್ಕಾರದಿಂದ ಅನುದಾನ ನೀಡಲಾಗುವುದು’ ಎಂದರು.

‘ಗೋ ಹತ್ಯೆ ಮಾಡಿದರೆ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ₹50 ಸಾವಿರದಿಂದ ₹5 ಲಕ್ಷದವರೆಗೆ ದಂಡ ಎರಡು ಅಥವಾ ಹೆಚ್ಚಿನ ಅಪರಾಧಕ್ಕೆ ₹1 ಲಕ್ಷದಿಂದ ₹10 ಲಕ್ಷ ದಂಡ ಮತ್ತು ಏಳು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲು ಅವಕಾಶವಿದೆ’ ಎಂದು ಸಚಿವರು ಹೇಳಿದರು.

ADVERTISEMENT

ಜಾನುವಾರುಗಳ ಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ: ಇಲಾಖೆಯು ಮಾಡಿರುವ ಸಾಧನೆಗಳನ್ನು ವಿವರಿಸಿದ ಅವರು, ‘ರಾಜ್ಯದಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ.

ರಾಜ್ಯದಲ್ಲಿ 85.22 ಲಕ್ಷ ದನ, 29.98 ಲಕ್ಷ ಎಮ್ಮೆ, 1.10 ಕೋಟಿ ಕುರಿ, 61.96 ಲಕ್ಷ ಮೇಕೆ, 3.26 ಲಕ್ಷ ಹಂದಿ ಮತ್ತು 6.17 ಕೋಟಿ ಕೋಳಿಗಳಿವೆ. ಈ ಎಲ್ಲಾ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ 4,214 ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಆಗಿದೆ ಎಂದರು.

ಪಶುಸಂಜೀವಿನಿ: ‘ರಾಜ್ಯದ 18 ಜಿಲ್ಲೆಗಳಿಗೆ ಪಶು ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಪಶುಗಳ ತುರ್ತು ಚಿಕಿತ್ಸೆಗಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಬಹುದಾದ ಪಶು ಆಂಬುಲೆನ್ಸ್ ನೀಡಲಾಗಿದೆ. ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ ಸೌಲಭ್ಯ ತಲುಪಲಿದ್ದು ರೈತರಿಗೆ ಇದರಿಂದ ಅನುಕೂಲವಾಗಿದೆ. ಈ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಅವರು ಹೇಳಿದರು.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚೀಲನಹಳ್ಳಿಯಲ್ಲಿ ನಬಾರ್ಡ್ ಮೂಲಕ ₹44.63 ಕೋಟಿ ವೆಚ್ಚದಲ್ಲಿ ವಧಾಗಾರ, ಕುರಿ ಮತ್ತು ಮೇಕೆ ಮಾಂಸ ಸಂಸ್ಕರಣಾ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು 20 ಎಕರೆ ಜಾಗದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ಪಶುವೈದ್ಯರ ಕೊರತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇಲಾಖೆಯಲ್ಲಿ ಪಶು ವೈದ್ಯರ ಹಾಗೂ ಇತರ ಸಿಬ್ಬಂದಿ ಕೊರತೆ ಇದ್ದು ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಸಭೆ ನಡೆಸಿದ್ದೇನೆ. ಹಣಕಾಸಿನ ಸಮಸ್ಯೆಯನ್ನು ಸರಿದೂಗಿಸಿಕೊಂಡು ನೌಕರರ ನೇಮಕಕ್ಕೆ ಕ್ರಮವಹಿಸಲಾಗುವುದು’ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ.ಶಾಂತಮೂರ್ತಿ ಕುಲಗಾಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯರ ನಿಯೋಜನೆ

‘ಜಿಲ್ಲೆಯ ಗಡಿ ಭಾಗಗಳ ಮೂಲಕ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಗೋವುಗಳ ಸಾಗಣೆ ಸಂಬಂಧ ಹಲವು ದೂರುಗಳು ಬಂದಿದ್ದು, ಗಡಿಭಾಗಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಇಲಾಖೆಯ ವೈದ್ಯರು, ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಗೋವುಗಳ ಸಾಗಣೆಯನ್ನು ತಡೆಗಟ್ಟಲು ಕ್ರಮವಹಿಸುವಂತೆ ಪೊಲೀಸ್ ಇಲಾಖೆ ಹಾಗೂ ಪಶು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರಭು ಚವಾಣ್‌ ಉತ್ತರಿಸಿದರು.

ಜಿಲ್ಲೆಯಲ್ಲಿ ಮೂರು ಗೋ ಶಾಲೆ: ಚಾಮರಾಜನಗರದಲ್ಲಿ ಇಲಾಖೆ ಯಾವುದೇ ಗೋಶಾಲೆ ನಡೆಸುತ್ತಿಲ್ಲ. ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ, ಪಡಗೂರು ಹಾಗೂ ಮಲೆಯೂರುಗಳಲ್ಲಿ ಖಾಸಗಿ ಗೋಶಾಲೆಗಳಿವೆ. ಅಲ್ಲಿಗೆ ಜಾನುವಾರುಗಳನ್ನು ಒಪ್ಪಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.