ADVERTISEMENT

ನಿಯಮ ಗಾಳಿಗೆ ತೂರಿ ಸಿಆರ್‌ಪಿ ನೇಮಕ?

ಹನೂರು ಬಿಇಒ ವಿರುದ್ಧ ಆರೋಪ, ಅನುಮತಿ ಪಡೆದೇ ನೇಮಕ–ಸ್ಪಷ್ಟನೆ

ಸೂರ್ಯನಾರಾಯಣ ವಿ.
Published 22 ನವೆಂಬರ್ 2019, 19:45 IST
Last Updated 22 ನವೆಂಬರ್ 2019, 19:45 IST

ಚಾಮರಾಜನಗರ: ಹನೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್‌.ಸ್ವಾಮಿ ಅವರು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಶಿಕ್ಷಕರೊಬ್ಬರನ್ನು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಹುದ್ದೆಗೆ ನೇಮಕ ಮಾಡಿದ್ದಾರೆ ಎಂಬ ಆರೋಪ ಶಿಕ್ಷಕರ ವಲಯದಿಂದ ಕೇಳಿ ಬಂದಿದೆ.

ಇದನ್ನು ನಿರಾಕರಿಸಿರುವ ಸ್ವಾಮಿ ಅವರು, ‘ಉನ್ನತ ಅಧಿಕಾರಿಗಳ ಅನುಮತಿ ಪಡೆದೇ ನೇಮಕ ಮಾಡಲಾಗಿದೆ‌’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಶೈಕ್ಷಣಿಕ ವಲಯದ ಬಂಡಳ್ಳಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಯಾಗಿ ದೇವರಾಜು ಎಂಬುವವರನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಇವರು ಹಳೆ ಮಾರ್ಟಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದವರು. ಅಲ್ಲಿಂದ ಬೇರೆ ಕಡೆಗೆ ವರ್ಗಾವಣೆಗೊಂಡಿದ್ದರು. ಅವರನ್ನು ಬಿಇಒ ಸ್ವಾಮಿ ಅವರು ಸಿಆರ್‌ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಕೆಲವು ಶಿಕ್ಷಕರು ದೂರಿದ್ದಾರೆ.

ADVERTISEMENT

‘ತಮ್ಮ ಪರಮಾಪ್ತ ಎಂಬ ಕಾರಣಕ್ಕೆ ಬಿಇಒ ಅವರು ನೇಮಕ ಮಾಡಿದ್ದಾರೆ. ಇದರಿಂದ ಅರ್ಹ ಶಿಕ್ಷಕರು ಅವಕಾಶ ವಂಚಿತರಾಗಿದ್ದಾರೆ’ ಎಂಬುದು ಅವರ ಆರೋಪ.

ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಮತ್ತು ಬ್ಲಾಕ್‌ ಸಂನ್ಮೂಲ ವ್ಯಕ್ತಿ (ಬಿಆರ್‌ಪಿ) ಹುದ್ದೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೆಲವು ನಿಯಮಗಳನ್ನು ರೂಪಿಸಿದೆ. ವಿದ್ಯಾರ್ಹತೆ‌, ಸೇವಾನುಭವದ ಆಧಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಮೆರಿಟ್ ಆಧಾರದಲ್ಲಿ ನೇಮಕ ಮಾಡುವುದು ಕ್ರಮ.

‘ದೇವರಾಜು ಅವರು ಪರೀಕ್ಷೆ ಬರೆದಿಲ್ಲ. ಹಾಗಿದ್ದರೂ ಸಿಆರ್‌ಪಿಯಾಗಿದ್ದಾರೆ. ಇದು ಇಲಾಖೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಟಿ.ಆರ್‌.ಸ್ವಾಮಿ ಅವರು, ‘ಸಿಆರ್‌ಪಿ ಹುದ್ದೆ ಖಾಲಿ ಇತ್ತು. ಇಲಾಖೆಯ ಕೆಲಸಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳ ಅನುಮತಿ ಪಡೆದು ಬೇರೆ ಕಡೆ ವರ್ಗಾವಣೆಗೊಂಡಿದ್ದ ಶಿಕ್ಷಕರನ್ನು ನೇಮಕ ಮಾಡಲಾಗಿದೆ’ ಎಂದು ಹೇಳಿದರು.

ಡಿಸೆಂಬರ್‌ನಲ್ಲಿ ಪರೀಕ್ಷೆ: ‘ನಮ್ಮಲ್ಲಿ ಎರಡು ಸಿಆರ್‌ಪಿ ಹುದ್ದೆಗಳು ಖಾಲಿ ಇವೆ. ಹೊಸ ಸಿಆರ್‌‍ಪಿ, ಬಿಆರ್‌ಪಿಗಳ ನೇಮಕಾತಿಗಾಗಿ ಡಿಸೆಂಬರ್‌ 22ರಂದು ಪರೀಕ್ಷೆ ನಡೆಯಲಿದೆ. ಆ ಬಳಿಕ ಎರಡೂ ಹುದ್ದೆಗಳಿಗೂ ಹೊಸಬರನ್ನು ನೇಮಿಸಲಾಗುವುದು’ ಎಂದು ಅವರು ಹೇಳಿದರು.

‘ತಾತ್ಕಾಲಿಕವಾಗಿ ನೇಮಕಕ್ಕೆ ಅವಕಾಶ ಇದೆ’

ಈ ಬಗ್ಗೆ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷ‌ಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ ಅವರು,
‘ಯಾವುದೇ ಶಿಕ್ಷಕ ಈಗಾಗಲೇ ನಡೆದಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ನಿರೀಕ್ಷಣಾ ಪಟ್ಟಿಯಲ್ಲಿ ಅವರ ಹೆಸರಿದ್ದರೆ ತಾತ್ಕಾಲಿಕವಾಗಿ ಅವರನ್ನು ಸಿಆರ್‌ಪಿಯಾಗಿ ನೇಮಕಾತಿ ಮಾಡಲು ಬಿಇಒಗಳಿಗೆ ಅವಕಾಶ ಇದೆ. ಹನೂರು ವಲಯದಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಿ ಪ‍್ರತಿಕ್ರಿಯಿಸುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.