ADVERTISEMENT

ಏಕಮುಖಿ ಸಂಸ್ಕೃತಿಯನ್ನು ಬಲವಂತವಾಗಿ ಹೇರುವ ಹುನ್ನಾರ: ಕೆ.ವಿ.ನಾಗರಾಜ ಮೂರ್ತಿ ಆತಂಕ

ಜನಪದ ಮೌಖಿಕ ಮಹಾಕಾವ್ಯಗಳು, ಕನ್ನಡ ರಂಗಭೂಮಿ ವಿಚಾರ ಸಂಕಿರಣದಲ್ಲಿ ನಾಗರಾಜ ಮೂರ್ತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 4:25 IST
Last Updated 17 ಜುಲೈ 2025, 4:25 IST
ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್‌ಎಸ್‌ ಮಹಿಳಾ ಕಾಲೇಜು, ರಂಗವಾಹಿನಿ ಸಂಸ್ಥೆ  ಬುಧವಾರ ಹಮ್ಮಿಕೊಂಡಿದ್ದ ‘ಜನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ ’ ವಿಚಾರ ಸಂಕಿರಣವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಉದ್ಘಾಟಿಸಿದರು 
ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್‌ಎಸ್‌ ಮಹಿಳಾ ಕಾಲೇಜು, ರಂಗವಾಹಿನಿ ಸಂಸ್ಥೆ  ಬುಧವಾರ ಹಮ್ಮಿಕೊಂಡಿದ್ದ ‘ಜನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ ’ ವಿಚಾರ ಸಂಕಿರಣವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಉದ್ಘಾಟಿಸಿದರು    

ಚಾಮರಾಜನಗರ: ‘ದೇಶದಲ್ಲಿ ಧರ್ಮ ಹಾಗೂ ಜಾತಿಗಳ ನಡುವೆ ಬೆಂಕಿಹಚ್ಚಿ ಏಕಮುಖಿ ಸಂಸ್ಕೃತಿಯನ್ನು ಬಲವಂತವಾಗಿ ಹೇರುವಂತಹ ಹುನ್ನಾರಗಳು ನಡೆಯುತ್ತಿವೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಜೆಎಸ್‌ಎಸ್‌ ಮಹಿಳಾ ಕಾಲೇಜು, ರಂಗವಾಹಿನಿ ಸಂಸ್ಥೆ ಬುಧವಾರ ಹಮ್ಮಿಕೊಂಡಿದ್ದ ‘ಜನಪದ ಮೌಖಿಕ ಮಹಾಕಾವ್ಯಗಳು ಮತ್ತು ಕನ್ನಡ ರಂಗಭೂಮಿ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಭಾರತೀಯ ಸಂಸ್ಕೃತಿಯ ಸೋಗಿನಲ್ಲಿ ವೈದಿಕ ಸಂಸ್ಕೃತಿಯನ್ನು ಮುಂದಿಡಲಾಗುತ್ತಿದೆ. ಇದರ ವಿರುದ್ಧ ಜನ ಸಂಸ್ಕೃತಿಯನ್ನು ಕಟ್ಟುವ ಶಕ್ತಿ ಹೊಂದಿರುವ ಜನಪದ ಮೌಖಿಕ ಮಹಾಕಾವ್ಯಗಳು ಇಂದಿನ ಅಗತ್ಯ’ ಎಂದರು. 

ADVERTISEMENT

‘ಏಕಮುಖಿ ಸಂಸ್ಕೃತಿ ತೊರೆದು ಬಹುಮುಖಿ ಸಂಸ್ಕೃತಿಯಲ್ಲಿ ನಂಬಿಕೆ ಇರಿಸಿ ಕುವೆಂಪು ಅವರ ಆಶಯದಂತೆ ಮನುಜ ಮತ ವಿಶ್ವಪಥದತ್ತ ಹೆಜ್ಜೆ ಹಾಕಬೇಕಿದೆ. ಆದಿವಾಸಿಗಳು, ಗುಡ್ಡಗಾಡು, ಹಳ್ಳಿಗಾಡಿನ ಜನರು ಪಾಲಿಸುವ ಬಹುಮುಖಿ ಸಂಸ್ಕೃತಿ ಹಾಗೂ ಮೌಖಿಕ ಮಹಾಕಾವ್ಯಗಳು ಪ್ರತಿಪಾದಿಸುವ ಜನ ಸಂಸ್ಕೃತಿಯಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ’ ಎಂದರು.

‘ಸಮಾಜದಲ್ಲಿ ಉಳ್ಳವರು ಹಾಗೂ ಇಲ್ಲದವರ ಮಧ್ಯೆ ಅಂತರ ಹೆಚ್ಚುತ್ತಲೇ ಇದೆ. ಯುವಜನ  ಮಾದಕ ವಸ್ತು ವ್ಯಸನಿಗಳಾಗುತ್ತಿದ್ದಾರೆ. ಸಂಸಾರ, ಸಂಬಂಧಗಳ ನಡುವಿನ ನಂಬಿಕೆ ಶಿಥಿಲಗೊಂಡಿದೆ.ದ್ವೇಷ, ಪ್ರತೀಕಾರಕ್ಕೆ ಹತ್ಯೆಗಳು ನಡೆಯುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪದ ಮಹಾಕಾವ್ಯಗಳು ಸಮಾಜಕ್ಕೆ ಮಾನಸಿಕ ಸ್ಥೈರ್ಯ ತುಂಬಬಲ್ಲವು, ಆತ್ಮಪ್ರಜ್ಞೆಯ ಅರಿವು ಮೂಡಿಸಬಲ್ಲವು’ ಎಂದರು.

ಜನಪದರಿಂದ ಮೂಡಿರುವ ಮಹಾಕಾವ್ಯಗಳು ಜನರ ಜೀವನವನ್ನು ಸುಧಾರಿಸುವ ಔಷಧಗಳಾಗಿವೆ. ಸಮಾಜ ಹೇಗೆ ಬದುಕಬೇಕು, ಎತ್ತ ಸಾಗಬೇಕು ಎಂಬ ಸ್ಪಷ್ಟ ದಿಕ್ಕು ತೋರಿಸುತ್ತವೆ, ಸಾಮಾಜಿಕ ಪ್ರಜ್ಞೆಯೂ ವಿಕಾಸವಾಗುತ್ತದೆ ಎಂದು ಕೆ.ವಿ.ನಾಗರಾಜ ಮೂರ್ತಿ ಹೇಳಿದರು.

'ಎಚ್‌.ಎಸ್‌.ಶಿವಪ್ರಕಾಶರ ನಾಟಕಗಳಲ್ಲಿ ಜಾನಪದ ಮೌಖಿಕ ಪರಂಪರೆಯ ಅನಾವರಣ’  ಕುರಿತು ಜಗದೀಶ್‌ ಸಿ.ಜಾಲ ಮಾತನಾಡಿದರು. ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎನ್‌.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ಪಿಆರ್‌ಒ ಆರ್‌.ಎಂ.ಸ್ವಾಮಿ, ರಂಗವಾಹಿನಿ ಅಧ್ಯಕ್ಷ ಸಿಎಂ. ನರಸಿಂಹಮೂರ್ತಿ ಉಪಸ್ಥಿತರಿದ್ದರು. 

‘ನೆಲದ ಕಾವ್ಯಗಳಲ್ಲಿ ಮಹಾಶಕ್ತಿ’

ಅನುಭಾವದ ನೆಲೆಯಲ್ಲಿ ಮೂಡಿಬಂದಿರುವ ಈ ನೆಲದ ಮಂಟೇಸ್ವಾಮಿ ಮಹದೇಶ್ವರ ಜುಂಜಪ್ಪ ಮೈಲಾರಲಿಂಗನ ಜಾನಪದ ಮಹಾಕಾವ್ಯಗಳು ಅತ್ಯಂತ ಸಂಪತ್ಭರಿತವಾಗಿವೆ. ಶೋಷಿತರ ಬಡವರ ನೋವುಗಳನ್ನು ಕಥಾನಕವಾಗಿ ರೂಪಿಸಿ ಸಮಾಜದ ಎದುರು ತೆರೆದಿಟ್ಟಿವೆ. ಸತ್ವಭರಿತ ಜಾನಪದವನ್ನು ಉಳಿಸಿ ಬೆಳೆಸಬೇಕಿದೆ ಎಂದು ಕೆ.ವಿ.ನಾಗರಾಜ ಮೂರ್ತಿ ಹೇಳಿದರು.

‘ಜಾನಪದವೇ ಮುಖ್ಯ ಆಕರ’

ಜನಪದ ಮೌಖಿಕ ಮಹಾಕಾವ್ಯ ಹಾಗೂ ರಂಗಪ್ರಯೋಗದಲ್ಲಿನ ಹೊಸ ಸಾಧ್ಯತೆಗಳ ಕುರಿತು ಮಾತನಾಡಿದ ರಂಗತಜ್ಞ ಶಶಿಧರ್ ಭಾರಿಘಾಟ್ ‘ಜಾನಪದ ಮಹಾಕಾವ್ಯಗಳಷ್ಟೇ ಜನಪದ ರಂಗಭೂಮಿಯೂ ಮಹತ್ವ ಪಡೆದುಕೊಂಡಿದ್ದು ಜನಪದರ ಬದುಕಿನ ಅನುಭಾವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಪಡಿಸುವ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಎಲ್ಲ ಕಲೆಗಳಿಗೂ ಜಾನಪದವೇ ಮುಖ್ಯ ಆಕರವಾಗಿದೆ‘ ಎಂದರು. ದಶಕಗಳ ಹಿಂದೆ ಶ್ರಮಿಕ ವರ್ಗದವರ ಪಾಲಿಗೆ ಬಹುಮುಖ್ಯ ಮನರಂಜನಾ ಮಾಧ್ಯಮವಾಗಿದ್ದ ಜನಪದ ರಂಗಭೂಮಿ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸಿವೆ. ಜನಮಾನಸದಲ್ಲಿ ಸಾಂಸ್ಕೃತಿಕ ನಾಯಕರನ್ನು ಹುಟ್ಟುಹಾಕಿವೆ. ವರ್ತಮಾನದ ಸಮಸ್ಯೆಗಳಿಗೂ ಜಾನಪದಲ್ಲಿ ಪರಿಹಾರ ದೊರೆಯಬಲ್ಲದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.