ADVERTISEMENT

‘ಚಾಮರಾಜನಗರ ಜನಪದ ಕಲೆಗಳ ತವರು’

‘ಹಾಡಿರೇ ರಾಗಗಳ, ತೂಗಿರೇ ದೀಪಗಳ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪುಟ್ಟರಂಗಶೆಟ್ಟಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 3:59 IST
Last Updated 26 ನವೆಂಬರ್ 2025, 3:59 IST
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು
ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಹಾಡಿರೇ ರಾಗಗಳ-ತೂಗಿರೇ ದೀಪಗಳ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು   

ಚಾಮರಾಜನಗರ: ಅತಿ ಹೆಚ್ಚು ಜಾನಪದ ಕಲಾವಿದರನ್ನು ಹೊಂದಿರುವ ಚಾಮರಾಜನಗರ ಶ್ರೇಷ್ಠ ಜನಪದ ಕಲೆಗಳ ತವರೂರು ಎಂಬ ಪ್ರಸಿದ್ಧಿ ಪಡೆದಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಹಾಡಿರೇ ರಾಗಗಳ, ತೂಗಿರೇ ದೀಪಗಳ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಜಿಲ್ಲೆಯ ನೆಲದಲ್ಲಿ ಪವಾಡ ಪುರುಷರು ಎಂದು ಕರೆಸಿಕೊಳ್ಳುವ ಮಲೆ ಮಹದೇಶ್ವರ, ಸಿದ್ದಪ್ಪಾಜಿ, ಮಂಟೇಸ್ವಾಮಿ, ಬಿಳಿಗಿರಿರಂಗನಾಥನ ಜಾನಪದ ಕಾವ್ಯಗಳು ಹುಟ್ಟಿಕೊಂಡಿವೆ ಎಂದರು.

ಜಗತ್ತಿನಲ್ಲಿಯೇ ಶ್ರೇಷ್ಠ ಜನಪದ ಸಾಹಿತ್ಯ ಹೊಂದಿರುವ ಹೆಗ್ಗಳಿಕೆ ಜಿಲ್ಲೆಗೆ ಸಂದಿದೆ. ಸಾವಿರಾರು ಜನಪದ ಕಾವ್ಯಗಳು ಹುಟ್ಟು ಮತ್ತು ಬೆಳವಣಿಗೆಗೆ ಜಿಲ್ಲೆಯು ಸಾಕ್ಷಿಯಾಗಿದ್ದು. ರಾಜ್ಯದಲ್ಲಿ ಅತಿ ಹೆಚ್ಚು ಜನಪದ ಕಲಾವಿದರನ್ನು ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿನ ಜನಪದ ಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲೂ ಖ್ಯಾತಿ ಪಡೆದಿದ್ದಾರೆ. ರಾಜ್ಯ ಸರ್ಕಾರ ಜನಪದ ಕಲೆಯನ್ನು ಉಳಿಸಿ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ADVERTISEMENT

‘ಹಿಂದೆ ಪೂರ್ವಜರು ಆಯಾಸ ಕಳೆಯಲು ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ನಾಟಿ ಮಾಡುವ ಸಂದರ್ಭದಲ್ಲಿ ಜಾನಪದ ಹಾಡನ್ನು ಕಟ್ಟಿ ಹಾಡುತ್ತಿದ್ದರು. ಸಾಹಿತಿಗಳ ಸಹಾಯವಿಲ್ಲದ ಜನಸಾಮಾನ್ಯರ ಬಾಯಿಂದ ಬಾಯಿಗೆ ಬೆಳೆಯುತ್ತಾ ಜನಪದ ಸಾಹಿತ್ಯ ಶ್ರೀಮಂತವಾಯಿತು. ತಲೆಮಾರಿನಿಂದ ತಲೆಮಾರಿಗೆ ತಲುಪಿ ಸಮೃದ್ಧವಾಗಿರುವ ಜನಪದ ಸಂಸ್ಕೃತಿ ಹಾಗೂ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ’ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ವಿ.ಚಂದ್ರು ಮಾತನಾಡಿ ‘ಜಿಲ್ಲೆಯಲ್ಲಿ ನಾನಾ ಪ್ರಕಾರಗಳ ಜನಪದ ಕಲೆಗಳು ಜನ್ಮತಾಳಿದ್ದು ಕಲಾವಿದರ ಭಾಗವಹಿಸುವಿಕೆಯಿಂದ ಸಮೃದ್ಧವಾಗಿ ಬೆಳೆದಿದೆ. ಪಾಶ್ಚಿಮಾತ್ಯ ಸಂಗೀತಗಳ ಅಬ್ಬರದ ನಡುವೆ ಜನಪದ ಕಲೆಗೆ ಮತ್ತಷ್ಟು ಉತ್ತೇಜನ ದೊರೆಯಬೇಕಿದೆ ಎಂದು ಹೇಳಿದರು.

ಜನಪದ ಕಲೆಗಳಿಂದಲೇ ಬದುಕು ಕಟ್ಟಿಕೊಂಡಿರುವ ಸಾವಿರಾರು ಕಲಾವಿದರು ಜಿಲ್ಲೆಯಲ್ಲಿದ್ದಾರೆ. ವೇದಿಕೆಗಳಲ್ಲಿ ಜನಪದ ಹಾಡು ಹಾಗೂ ಕಥೆಗಳ ಪ್ರದರ್ಶನ ಮೂಲಕ ಜೀವನ ಸಾಗಿಸುತ್ತಿದ್ದು, ಜಿಲ್ಲೆಯ ಹೆಸರನ್ನು ಎಲ್ಲೆಡೆ ಪ್ರಸಿದ್ಧಿಗೊಳಿಸುತ್ತಿದ್ದಾರೆ ಎಂದು ತಿಳಿಸಿದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿ, ಜಿಲ್ಲೆಯ ಜಾನಪದ ಕಲಾವಿದರು ನಿರಂತರವಾಗಿ ಜಾನಪದ ಕಲೆಗಳನ್ನು ಪ್ರದರ್ಶಿಸುತ್ತ ಜನಪದ ಕಲೆಯ ಶ್ರೀಮಂತಿಕೆಯ ವೈಭವವನ್ನು ನಾಡಿನುದ್ದಕ್ಕೂ ಪಸರಿಸುತ್ತಿದ್ದಾರೆ ಎಂದರು.

ಕಲಾವಿದ ಹರದನಹಳ್ಳಿಯ ಸುರೇಶ್ ನಾಗ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಜಾನಪದ ಮಹೇಶ್ ಅವರು ಕಲಾತಂಡಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ರಾಜು  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.