ADVERTISEMENT

ವಿಶೇಷ ವರ್ಗದವರಿಗೆ ಕೋವಿಡ್‌ ಪರೀಕ್ಷೆ

ಚಳಿಗಾಲದಲ್ಲಿ ಕೋವಿಡ್‌ ನಿಯಂತ್ರಣ: ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 15:20 IST
Last Updated 11 ನವೆಂಬರ್ 2020, 15:20 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೋವಿಡ್‌ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೋವಿಡ್‌ ನಿಯಂತ್ರಣ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಚಳಿಗಾಲದಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚಾಗದಂತೆ ಮಾಡಲು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಕೋವಿಡ್-19 ಹರಡುವಿಕೆ ತಡೆಯುವ ಸಂಬಂಧ ಆರೋಗ್ಯ ಇಲಾಖೆ ಹಾಗೂ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಬೇಸಿಗೆ ಹಾಗೂ ಮಳೆಗಾಲ ಅವಧಿಯಲ್ಲಿ ಯಶಸ್ವಿಯಾಗಿ ನಿಭಾಯಿಸಲಾಗಿದೆ. ಸದ್ಯ ನಿಯಂತ್ರಣದಲ್ಲಿದೆ. ಚಳಿಗಾಲ ಆರಂಭವಾಗಿದ್ದು, ಈ ಅವಧಿಯಲ್ಲಿ ಸೋಂಕು ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ಕೋವಿಡ್ ತಡೆಗೆ ರೂಪಿಸಲಾಗಿರುವ ರೂಪುರೇಷೆಗಳನ್ನು ಪರಿಣಾಮಕಾರಿ ಅನುಷ್ಠಾನ ಗೊಳಿಸಬೇಕು’ ಎಂದು ಹೇಳಿದರು.

‘ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ ಎಂಬ ಅತಿ ಆತ್ಮವಿಶ್ವಾಸದಿಂದ ನಿರ್ಲಕ್ಷ್ಯ ವಹಿಸಬಾರದು. ನಿಗಾ ಹಾಗೂ ನಿಯಂತ್ರಣ ವ್ಯವಸ್ಥೆ ನಿರಂತರವಾಗಿ ಮುಂದುವರೆಸಬೇಕು. ಚಳಿಗಾಲದಲ್ಲಿ ಕಾಣಿಸಿಕೊಳ್ಳಬಹುದಾದ ಅನಾರೋಗ್ಯ ತೊಂದರೆಗಳನ್ನು ಪರಿಹರಿಸಲು ಸನ್ನದ್ಧರಾಗಿರಬೇಕು’ ಎಂದರು.

ADVERTISEMENT

ವಿಶೇಷ ವರ್ಗಕ್ಕೆ ಪರೀಕ್ಷೆ: ‘ಜಿಲ್ಲೆಯಲ್ಲಿ ಆರೋಗ್ಯ ಕಾಳಜಿಗಾಗಿ ವಯೋವೃದ್ದರು, ಮಧುಮೇಹ, ರಕ್ತದೊತ್ತಡ, ಅಸ್ತಮಾ, ಕ್ಯಾನ್ಸರ್, ಎಚ್ಐವಿ ಸೋಂಕಿತರು ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ 30 ಸಾವಿರಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಈ ಪೈಕಿ ಬಹುತೇಕ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಬಾಕಿ ಉಳಿದಿರುವವರಿಗೂ ಕೋವಿಡ್ ಪರೀಕ್ಷೆ ನಡೆಸಬೇಕು’ ಎಂದರು.

ಪರೀಕ್ಷೆ ಗುರಿ 1,500:ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಗುರಿಯನ್ನು ಈಗ ಪರಿಷ್ಕರಿಸಲಾಗಿದ್ದು ಪ್ರತಿ ದಿನಕ್ಕೆ 1,500 ನೀಡಲಾಗಿದೆ. ರಜಾ ದಿನಗಳಲ್ಲಿಯೂ ಕಡ್ಡಾಯವಾಗಿ ಗುರಿ ಅನುಸಾರ ಪರೀಕ್ಷೆ ನಡೆಸಬೇಕು. ಎಲ್ಲ ಬಗೆಯ ಆಸ್ಪತ್ರೆಯ ಹೊರರೋಗಿ ವಿಭಾಗಗಳಲ್ಲಿಯೂ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಎಂ.ಆರ್.ರವಿ ಅವರು ಹೇಳಿದರು.

ಕೋವಿಡ್ ಪರೀಕ್ಷೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ರೇಷ್ಮೆಗೂಡಿನ ಮಾರುಕಟ್ಟೆ, ನಗರ ಪಟ್ಟಣಗಳ ಮಾರುಕಟ್ಟೆಯಂತಹ ಹೆಚ್ಚು ಜನ ಸಂದಣಿ ಸ್ಥಳಗಳಲ್ಲಿಯೂ ಕೈಗೊಳ್ಳಲು ಸಂಚಾರಿ ಅಥವಾ ಇತರೆ ಯೂನಿಟ್ ಅನ್ನು ಬಳಸಿಕೊಳ್ಳಬೇಕು. ವರ್ತಕರು, ವ್ಯಾಪಾರಿಗಳ ಸಹಕಾರ ಪಡೆಯಬೇಕು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ, ಡಿಎಚ್‌ಒ ಡಾ.ಎಂ.ಸಿ.ರವಿ, ಜಿಲ್ಲಾ ಸರ್ವೆಲನ್ಸ್ ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಸರ್ಜನ್ ಡಾ.ಮುರಳೀಕೃಷ್ಣ, ವೈದ್ಯಕೀಯ ತಜ್ಞರಾದ ಡಾ. ರಮೇಶ್, ಡಾ. ಮಹೇಶ್, ಡಾ. ಕಾಂತರಾಜು, ಲಸಿಕಾ ಅಧಿಕಾರಿ ಡಾ.ವಿಶ್ವೇಶ್ವರಯ್ಯ ಇತರರು ಇದ್ದರು.

9 ಹೊಸ ಪ್ರಕರಣ, 12 ಮಂದಿ ಗುಣಮುಖ

ಈ ಮಧ್ಯೆ, ಜಿಲ್ಲೆಯಲ್ಲಿ ಬುಧವಾರ ಒಂಬತ್ತು ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. 12 ಮಂದಿ ಗುಣಮುಖರಾಗಿದ್ದಾರೆ. ಸಾವು ಸಂಭವಿಸಿಲ್ಲ.

ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 6,150ಕ್ಕೆ ಏರಿದೆ. 5,879 ಮಂದಿ ಗುಣಮುಖರಾಗಿದ್ದಾರೆ. 145 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 92 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 26 ಮಂದಿ ಐಸಿಯುನಲ್ಲಿದ್ದಾರೆ.

ಕೋವಿಡ್‌ನಿಂದಾಗಿ 107 ಮಂದಿ, ಕೋವಿಡ್‌ಯೇತರ ಕಾರಣದಿಂದ 19 ಮಂದಿ ಮೃತಪಟ್ಟಿದ್ದಾರೆ. ಬುಧವಾರ 823 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದೆ. ಈ ಪೈಕಿ 814 ಮಂದಿಯ ವರದಿ ನೆಗೆಟಿವ್‌ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.