ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿ ಗ್ರಾಮದ ಸರ್ವೇ ನಂ 516ರ ಪ್ರದೇಶದಲ್ಲಿ ಮೃತಪಟ್ಟಿರುವ ಹೆಣ್ಣಾನೆ
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿ ಗ್ರಾಮದ ಸರ್ವೇ ನಂ 516ರ ಪ್ರದೇಶದಲ್ಲಿ 30 ವರ್ಷದ ಹೆಣ್ಣಾನೆ ಮೃತದೇಹ ಪತ್ತೆಯಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಅರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮರಣೋತ್ತರ ಪರೀಕ್ಷೆಯನ್ನು ಇಲಾಖಾ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ನಡೆಸಿದ್ದು, ಆಂಥ್ರಾಕ್ಸ್ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಮೃತ ಆನೆಯ ಅಂಗಾಂಗಗಳ ಮಾದರಿ ಸಂಗ್ರಹಿಸಿ, ವಿಜ್ಞಾನ ಪ್ರಯೋಗ ಶಾಲೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆನೆಯ ಮೃತ ದೇಹ ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕುಂದುಕೆರೆ ಉಪ ವಲಯ ಅರಣ್ಯಾಧಿಕಾರಿ ಮನೋಹರ ಸೇರಿದಂತೆ ಯಲಚೆಟ್ಟಿ ಶಾಖೆ, ಕುಂದುಕೆರೆ ವಲಯ ಹಾಗೂ ಇಲಾಖಾ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.