ADVERTISEMENT

ಅತಿ ಹಿಂದುಳಿದ ಜಾತಿಗಳ ಮೀಸಲಾತಿ: ಶೇ 10ಕ್ಕೆ ಏರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 5:21 IST
Last Updated 29 ಡಿಸೆಂಬರ್ 2022, 5:21 IST
ಜಿ.ಎ‌ಂ.ಗಾಡ್ಕರ್‌
ಜಿ.ಎ‌ಂ.ಗಾಡ್ಕರ್‌   

ಚಾಮರಾಜನಗರ: ರಾಜ್ಯದಲ್ಲಿರುವ ಅತಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ 4ರಿಂದ ಶೇ 10ಕ್ಕೆ ಹೆಚ್ಚಳ ಮಾಡಬೇಕು ಎಂದು ಸಮಾಜವಾದಿ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಜಿ.ಎಂ.ಗಾಡ್ಕರ್ ಬುಧವಾರ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಹಿಂದುಳಿದ ಜಾತಿಗಳಿಗೆ ಶೇ 20, ಅಲ್ಪಸಂಖ್ಯಾತರಿಗೆ ಶೇ 10ರಷ್ಟು ಮೀಸಲಾತಿಯನ್ನು ಹೆಚ್ಚಿಸಬೇಕು. ರಾಜ್ಯದಲ್ಲಿರುವ ಇತರೆ ಹಿಂದುಳಿದ ಸಮುದಾಯದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಏರಿಸಬೇಕು’ ಎಂದು ಆಗ್ರಹಿಸಿದರು.

‘ನ್ಯಾ.ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ರಾಜ್ಯದಲ್ಲೂ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯಿದೆ. ಆಯೋಗವು 1990ರಲ್ಲಿ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ 52 ಜಾತಿ ಹಾಗೂ ಅವುಗಳ ಉಪಜಾತಿಗಳನ್ನು ಅತಿ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ ಶೇ 7ರಷ್ಟು ಮೀಸಲಾತಿಯನ್ನು ನೀಡುವಂತೆ ಶಿಫಾರಸು ಮಾಡಿತ್ತು. 1994ರಲ್ಲಿ ಸರ್ಕಾರ ಜಾರಿ ಮಾಡಿತು’ ಎಂದರು.

ADVERTISEMENT

‘ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಅತಿ ಹಿಂದುಳಿದ ಜಾತಿಗಳ ಅರ್ಹತೆ ಹೊಂದಿದ್ದ 243 ಜಾತಿಗಳು ಮತ್ತು ಅವುಗಳ ಉಪಜಾತಿಗಳನ್ನು ಹೆಚ್ಚುವರಿಯಾಗಿ ಸೇರಿಸಿತ್ತು. ಅತಿ ಹಿಂದುಳಿದ ಜಾತಿಗಳ ಸ್ಥಾನ ಪಡೆದ 95 ಜಾತಿಗಳು ಮತ್ತು ಅವುಗಳ ಉಪಜಾತಿಗಳು ಸೇರಿ ಒಟ್ಟು 285 ಜಾತಿಗಳಾಗಿದ್ದರಿಂದ ಜನಸಂಖ್ಯೆ ದ್ವಿಗುಣವಾಯಿತು. ಆಗ ಸರ್ಕಾರವು ಶೇ 50ರಷ್ಟು ಮೀಸಲು ಪ್ರಮಾಣ ಮೀರಬಾರದು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಮೀರಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಶೇ 73 ಮೀಸಲಾತಿ ನಿಗದಿ ಮಾಡಿತ್ತು’ ಎಂದು ಹೇಳಿದರು.

‘ಸರ್ಕಾರದ ಈ ನಿರ್ಧಾರವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿ ಮೀಸಲು ಪ್ರಮಾಣ ಶೇ 50 ಮೀರಬಾರದು ಎಂದು ಆದೇಶಿಸಿತ್ತು. ಈ ಸಂದರ್ಭದಲ್ಲಿ ಅತಿ ಹಿಂದುಳಿದ ಜಾತಿಗಳಿಗೆ ನೀಡಿದ್ದ ಶೇ 7ರಷ್ಟು ಮೀಸಲಾತಿಯನ್ನು ಶೇ 4ಕ್ಕೆ, ಒಬಿಸಿ 2ಎಗೆ ನಿಗದಿ ಮಾಡಿದ್ದ ಶೇ 20ರಷ್ಟು ಮೀಸಲಾತಿಯನ್ನು ಶೇ 15ಕ್ಕೆ ಮಾತ್ರ ಇಳಿಸಿತು. ಆ ಮೂಲಕ ಸರ್ಕಾರವು ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಿತು. ಇದನ್ನು ಸರಿಪಡಿಸಬೇಕು’ ಎಂದು ಗಾಡ್ಕರ್‌ ಆಗ್ರಹಿಸಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಂಗಾರಸ್ವಾಮಿ, ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಮುಖಂಡರಾದ ಚಂದ್ರಶೇಖರ್, ಚಾ.ಹ.ರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.