ADVERTISEMENT

ಅಧಿಕಾರಿಗಳ ರಕ್ಷಣೆಗೆ ಮೈಸೂರಿನಲ್ಲಿ ಆಯೋಗದ ಕಚೇರಿ: ಆರೋಪ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 12:18 IST
Last Updated 11 ಜೂನ್ 2021, 12:18 IST
ಶ್ರೀನಿವಾಸ ನಾಯಕ
ಶ್ರೀನಿವಾಸ ನಾಯಕ   

ಚಾಮರಾಜನಗರ: ‘ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಮೇ 2ರಂದು ನಡೆದ ಆಮ್ಲಜನಕ ದುರಂತ ಪ್ರಕರಣ‌ಕ್ಕೆ ಕಾರಣರಾದ ಅಧಿಕಾರಿಗಳ ರಕ್ಷಣೆಗಾಗಿ ಸರ್ಕಾರ ತನಿಖಾ ಆಯೋಗದ ಕಚೇರಿಯನ್ನು ಮೈಸೂರಿನಲ್ಲಿ ತೆರೆದಿದೆ. ಇದು ಸರಿಯಲ್ಲ. ಚಾಮರಾಜನಗರದಲ್ಲೇ ತೆರೆಯಬೇಕು’ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ಶ್ರೀನಿವಾಸ ನಾಯಕ ಅವರು ಶುಕ್ರವಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗ ಲಾಕ್‌ಡೌನ್‌ ಜಾರಿಯಲ್ಲಿದೆ. ನಮ್ಮಲ್ಲಿ 21ರವರೆಗೂ ಮುಂದುವರಿದಿದೆ. ಅಂತರ ಜಿಲ್ಲಾ ಪ್ರವೇಶ ಇಲ್ಲ. ಸಾರಿಗೆ ಸೌಲಭ್ಯವೂ ಇಲ್ಲ. ಹೀಗಿರುವಾಗ ಸಂತ್ರಸ್ತರು ಮೈಸೂರಿಗೆ ಹೇಗೆ ಹೋಗುತ್ತಾರೆ? ಘಟನೆಗೆ ಸಂಬಂಧಿಸಿದವರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಲ್ಲೇ ಇದ್ದಾರೆ. ಹೀಗಿರುವಾಗ ಮೈಸೂರಿನಲ್ಲಿ ಕಚೇರಿ ತೆರೆದರೆ ಹೇಗೆ?’ ಎಂದು ಪ್ರಶ್ನಿಸಿದರು.

‘ಆಮ್ಲಜನಕ ಕೊರತೆಯಿಂದ ಮೃತಪಟ್ಟಿರುವವರು ಆ ಕುಟುಂಬಗಳ ಆಧಾರಸ್ತಂಭಗಳೇ ಆಗಿದ್ದರು. ಈಗ ಅವರನ್ನು ಕಳೆದುಕೊಂಡಿರುವ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಜಿಲ್ಲಾ ಕೇಂದ್ರದಲ್ಲಿ ಕಚೇರಿಯನ್ನು ತೆರೆದು, ಅನ್ಯಾಯವಾಗಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಇದಕ್ಕೆ ಆಗ್ರಹಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲು ನಾವು ತೀರ್ಮಾನಿಸಿದ್ದೆವು. ಆದರೆ ಪೊಲೀಸರು ಅನುಮತಿ ನೀಡಿಲ್ಲ. ಹಾಗಾಗಿ, ಸಾಮಾಜಿಕ ಚಳವಳಿ ನಡೆಸಲು ತೀರ್ಮಾನಿಸಿದ್ದೇವೆ. ಕಚೇರಿ ಸ್ಥಳಾಂತರಕ್ಕೆ ಪತ್ರ ಚಳವಳಿ ನಡೆಸುತ್ತೇವೆ. ಮುಖ್ಯಮಂತ್ರಿಯವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇವೆ. ಜಿಲ್ಲೆಯ ಎಲ್ಲರೂ ಇದರಲ್ಲಿ ಭಾಗವಹಿಸಬೇಕು’ ಎಂದು ಶ್ರೀನಿವಾಸ ನಾಯಕ ಅವರು ಮನವಿ ಮಾಡಿದರು.

ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರಿಗೆ ಕಾಳಜಿ ಇದ್ದರೆ, ನಗರದಲ್ಲಿ ಕಚೇರಿ ತೆಗೆಯುವಂತೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಜೆ ಮೇಲೆ ಕಳುಹಿಸಿ: ‘ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡಿರುವುದು ಸ್ವಾಗತಾರ್ಹ. ಆದರೆ, ಘಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಅದೇ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವುವಾಗ ತನಿಖೆ ನಡೆಯುವುದಾದರೂ ಹೇಗೆ? ಹಾಗಾಗಿ, ಘಟನೆ ನಡೆದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರನ್ನು ರಜೆಯ ಮೇಲೆ ಕಳುಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಮಹದೇವಶೆಟ್ಟಿ, ಸೋಮಶೇಖರ್, ಮಹೇಶ್,ಮಧು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.