ADVERTISEMENT

ಕಣ್ಣೀರಿಗೂ ಸಾಂತ್ವನದ ಗಾನ ಹೊಮ್ಮಿಸುವ ‘ಮಹದೇವಮ್ಮ’

70ರ ಹರೆಯದಲ್ಲೂ ಬತ್ತದ ಜೀವನೋತ್ಸಾಹ: ತಂಡ ಕಟ್ಟಿ ಈಗಲೂ ಹಾಡುಗಾರಿಕೆ

ನಾ.ಮಂಜುನಾಥ ಸ್ವಾಮಿ
Published 16 ಜುಲೈ 2019, 20:00 IST
Last Updated 16 ಜುಲೈ 2019, 20:00 IST
ಮಹದೇವಮ್ಮ
ಮಹದೇವಮ್ಮ   

ಯಳಂದೂರು: ಲಗ್ನ, ಧಾರೆ, ಆರತಿ ಮತ್ತು ನೀರು ಹಾಕುವ ಶಾಸ್ತ್ರ ಎಲ್ಲೇ ನಡೆದರೂ ಸೋಬಾನೆ ಸೊಲ್ಲುಮೆಲುವಾಗಿ ಕೇಳಿಬರಬೇಕು. ಬೀದಿ ಬದಿಯಿರಲಿ, ಮಂಟಪದ ಜನಜಂಗುಳಿ ಇರಲಿ, ಇವರು ಬಾಯಿ ತೆರೆದರೆ, ಅದಕ್ಕೆ ನಾಲ್ಕಾರು ಧ್ವನಿ ಸೇರಿದರೆ ವಿವಾಹ ಸಂಭ್ರಮಕಳೆಗಟ್ಟುತ್ತದೆ. ಅಷ್ಟರಮಟ್ಟಿಗೆ ಹೆಸರು ಮಾಡಿರುವ ಮಹದೇವಮ್ಮ ಅವರಿಗೆ ಇಳಿವಯಸ್ಸಿನಲ್ಲೂಹಾಡುವುದು ಇವರಿಗೆ ಕರಗತವಾಗಿದೆ.

ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಮಹದೇವಮ್ಮ ಅವರಿಗೆ ವಯಸ್ಸು ಎಪ್ಪತ್ತು ದಾಟಿದೆ.ಆದರೆ, ಸದಾ ಬತ್ತದ ಜೀವನೋತ್ಸಾಹ ಮತ್ತು ಗ್ರಾಮೀಣ ಬದುಕಿನ ಕ್ಷಣಗಳನ್ನು ಗಾಯನದಮೂಲಕವೇ ಕಟ್ಟಿಕೊಡುವ ಕಲೆಯಲ್ಲಿ ಇವರು ನಿಷ್ಣಾತರು. ಕಥೆ, ಗಾದೆ, ಒಗಟು ಮತ್ತು ಮಹದೇಶ್ವರ, ರಂಗಪ್ಪ ಮತ್ತು ಮಂಟೇಸ್ವಾಮಿ ಕಥನ ಕಾವ್ಯಗಳ ಒಂದೊಂದೇ ಮಾಯಾಲೋಕವನ್ನು ಸಹಜಸ್ಫೂರ್ತಿಯಿಂದ ಹಾಡಬಲ್ಲರು.

‘ಐವತ್ತು ವರ್ಷಗಳ ಹಿಂದೆ ಗಂಡನ ಮನೆಗೆ ಬಂದಾಗ ಸುತ್ತಮುತ್ತ ಹಿರಿಯರು ರಾಗಿ ಬೀಸುವಾಗ,ಕಳೆ ಕೀಳುವಾಗ ಸೊಗಸಾಗಿ ಹೇಳುತ್ತಿದ್ದರು. ನಮ್ಮ ಯಜಮಾನರು ಊರಿಂದ ಊರಿಗೆ ಹೋಗಿ ದೇವರವೀರತನ ಮತ್ತು ಸಾಹಸಗಳನ್ನು ತಿಳಿಸುತ್ತಿದ್ದರು. ಹತ್ತಾರು ಮಂದಿ ನೆರೆದು ತಾಳ ಹಾಕುತ್ತಿದ್ದರು. ರಾತ್ರಿಪೂರ ಹಾಡುವಷ್ಟು ಶಬ್ದ ಬಂಢಾರ ಅವರ ಬಳಿ ಇರುತ್ತಿತ್ತು’ ಎಂದುಬಾಲ್ಯದಲ್ಲಿ ಜನರ ಪದಗಳು ಪರಿಣಾಮ ಬೀರಿದ್ದರ ಬಗ್ಗೆ ಹೇಳುತ್ತಾರೆ ಮಹದೇವಮ್ಮ.

ADVERTISEMENT

‘ಬೆಂಗಳೂರು ಆಕಾಶವಾಣಿಯಲ್ಲಿ ಗಂಡನ ಪದಗಳ ಹಾಡು ಕೇಳಿದರೆ ನಾವು ಅನುಕರಿಸುತ್ತಿದ್ದೆವು.ಚಪ್ಪರದ ಹಟ್ಟಿ, ಮಾರಿಹಬ್ಬ ಮತ್ತು ಗಂಡು–ಹೆಣ್ಣಿನ ಒಲುಮೆಯ ಹೊಳಹುಗಳನ್ನು ಜಾನಪದಕ್ಕೆಒಗ್ಗಿಸುವ ಕಲೆ ಸಿದ್ಧಿಸಿತು’ ಎಂದು ವಿವರಿಸುತ್ತಾರೆ ಅವರು.

‘ಜಾಜಿಯ ಮೊಗ್ಗಿನ ಕಟ್ಟ ಒಗೆದಾಗ, ಜಾಣ ರಂಭೆಗೆ ಪಿಡಿದಾವೂ... ಎಂದು ಧಾರೆಶಾಸ್ತ್ರದಕ್ಷಣಗಳನ್ನು, ಸಂಬಂಧಗಳ ಹೆಣಿಗೆಯನ್ನು ಹೂ ಮತ್ತು ನಗುವಿನ ರೂಪಕಗಳನ್ನು ಕಟ್ಟಿಕೊಡುವಧಾರೆ ಎರೆಯುವಾಗಿನ ಹಾಡು ಇವರ ಬಾಯಿಂದ ಕೇಳುವುದೇ ಚಂದ’ ಎನ್ನುತ್ತಾರೆ ಇವರ ಓರಗೆಯದೇವಮ್ಮ.

ಮದುವೆ ಸಂಭ್ರಮ ಮುಗಿದ ನಂತರ ಮಗಳನ್ನು ಗಂಡನ ಮನೆಗೆ ಕಳಿಸುವಾಗ ನಾಲ್ಕಾರು ಕಣ್ಣೀರುಸುರಿಸಬೇಕು. ಇದರಿಂದ ಹೆಣ್ಣು ಹೆತ್ತವರ ಆತ್ಮೀಯ ಬಂಧನ ನೀರಾಗಿ ಕರಗಿ ತವರಿನನೆನಪನ್ನು ಮಗಳಿಗೆ ಕಟ್ಟಿಕೊಡುತ್ತದೆ. ಇದನ್ನು ಎಣ್ಣೆ ಎರಿಯುವ ಶಾಸ್ತ್ರದಲ್ಲಿ ಹಾಡುವ ಮಹದೇವಮ್ಮ ಕೇಳುಗರಿಗೆ ಸರಳವಾಗಿ ಮುಟ್ಟಿಸುತ್ತಾರೆ.

ಸೀಗೆ ಹೊತ್ತವರು, ಚನ್ನಾಗಿ ಹೊತ್ತೆಮ್ಮಚಿನ್ನದ ಕಡುಗ ನಿಮಗೆಂದು. ಮುತ್ತೈದೆಯರೆ, ಚನ್ನಾಗಿ ಬರಲಿ ಹೂಗಾರ ಹೆಣ್ಣು..

ಎನ್ನುತ್ತಲೇ ನೆರದ ಮಂದಿಗೆ ಮತ್ತು ಹೆಣ್ಣಿನ ಅಲಂಕಾರಕ್ಕೆ ಬಳಸುವ ಸೀಗೆಪುಡಿ, ಚಿನ್ನದಕಡಗ ಮತ್ತು ತಲೆಗೆ ಎಣ್ಣೆ ಸುರಿದು ತಂಪು ತುಂಬುವ ಗ್ರಾಮೀಣ ಜನರ ಒಡನಾಟ ಮತ್ತುಲಗುಬಗೆಯನ್ನು ಹಾಡಿನ ಮೂಲಕ ದಾಟಿಸುತ್ತಾರೆ ಮಹದೇವಮ್ಮ.

‘ಕಲೆ ಉಳಿಸಲು ಕಾಳಜಿ ವಹಿಸಲಿ’
‘ನಾಲ್ಕಾರು ಮಂದಿ ಈಗಲೂ ಹಾಡುತ್ತೇವೆ. ಒಬ್ಬರ ಬಾಯಿಂದ ಪದಗಳು ಹೊಮ್ಮಿದರೆ ಉಳಿದವರದನಿಯೂ ಸೇರಿ ಹೊಸ ಅರ್ಥ ಮೂಡಿಸುತ್ತದೆ. ವಿವಾಹ ಮಂಟಪ ಮತ್ತು ದೂರದ ಪಟ್ಟಣಗಳಲ್ಲಿನಡೆಯುವ ಮದುವೆ ಮತ್ತು ಶುಭ ಸಮಾಚಾರಗಳಿಗೆ ನಮ್ಮನ್ನು ಕರೆದೊಯ್ಯುತ್ತಾರೆ. ಕೆಲವರುಗಾಯನಕ್ಕೆ ಮನಸೋತು ಹಣವನ್ನು ನೀಡುತ್ತಾರೆ’ ಎಂದು ಮಹದೇವಮ್ಮ ಹೇಳುತ್ತಾರೆ.

‘ಇಂದಿನ ಜನ ಸಮುದಾಯ ಹತ್ತಾರು ಗೊಡವೆಗಳ ನಡುವೆಯೂ ನಮ್ಮನ್ನು ಗುರುತಿಸಿ ಕರೆಸುತ್ತಾರೆ.ಜಾನಪದ ಕಲೆಯನ್ನು ಉಳಿಸುವಲ್ಲಿ ಇಂದಿನ ತಲೆಮಾರು ಹೊಸಹೊಸ ರೀತಿಯಲ್ಲಿ ಹಾಡುತ್ತಾರೆ.ಆದರೆ, ನಮ್ಮ ನಾಡು–ನುಡಿಯ ಜನಪದ ಜೀವಂತವಾಗಿ ಇರಿಸುವಲ್ಲಿ ಇಂದಿನ ಪೀಳಿಗೆ ಕಾಳಜಿವಹಿಸಲಿ’ ಎನ್ನುವ ಕಳಕಳಿ ಮಹದೇವಮ್ಮ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.