ADVERTISEMENT

ಎಲೆಮರೆ ಕಾಯಿಯಂತಿರುವ ಗೊರವರ ಕಲಾವಿದ

22 ವರ್ಷಗಳಿಂದ ಕಲೆಯಲ್ಲಿ ಪಳಗಿರುವ ಸಿದ್ದಯ್ಯನಪುರದ ಚಿಕ್ಕಮಲ್ಲೇಗೌಡ

ಅವಿನ್ ಪ್ರಕಾಶ್
Published 6 ಆಗಸ್ಟ್ 2019, 19:45 IST
Last Updated 6 ಆಗಸ್ಟ್ 2019, 19:45 IST
ಸಿದ್ದಯ್ಯನಪುರ ಗ್ರಾಮದ ಗೊರವರ ಕು‌ಣಿತ ಕಲಾವಿದ ಚಿಕ್ಕಮಲ್ಲೇಗೌಡ
ಸಿದ್ದಯ್ಯನಪುರ ಗ್ರಾಮದ ಗೊರವರ ಕು‌ಣಿತ ಕಲಾವಿದ ಚಿಕ್ಕಮಲ್ಲೇಗೌಡ   

ಕೊಳ್ಳೇಗಾಲ: ಜಿಲ್ಲೆಯ ಸಿರಿವಂತ ಜಾನಪದ ಕಲೆಗಳಲ್ಲಿ ಒಂದಾದ ಗೊರವರ ಕುಣಿತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಕಲಾವಿದರು ಹಲವರು ಇದ್ದಾರೆ. ಅವರಲ್ಲಿತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಚಿಕ್ಕಮಲ್ಲೇಗೌಡ ಕೂಡ ಒಬ್ಬರು.

56 ವರ್ಷದ ಚಿಕ್ಕಮಲ್ಲೇಗೌಡ ಅವರು 22 ವರ್ಷಗಳಿಂದ ಗೊರವರ ಕುಣಿತದಲ್ಲಿ ಪರಿಣತಿ ಸಾಧಿಸಿದ್ದಾರೆ. ವಂಶಪಾರಂಪರ್ಯವಾಗಿ ಅವರಿಗೆ ಈ ಕಲೆ ಒಲಿದಿದೆ.

ಸಿದ್ದಯ್ಯನಪುರ ಗ್ರಾಮದಲ್ಲಿ 14 ಗೊರವರ ಕಲಾವಿದರು ಸೇರಿ ತಂಡ ಕಟ್ಟಿಕೊಂಡಿದ್ದಾರೆ. ಚಿಕ್ಕಮಲ್ಲೇಗೌಡರೇ ಇದರ ನೇತೃತ್ವ ವಹಿಸಿದ್ದಾರೆ.

ADVERTISEMENT

‘ನಮ್ಮ ಸಮುದಾಯದ ಸಾಂಪ್ರದಾಯಿಕ ಕಲೆಯಾಗಿರುವ ಗೊರವರ ಕುಣಿತ ವಂಶಪಾರಂಪರ್ಯವಾಗಿ ನನಗೆ ಒಲಿದು ಬಂದಿದೆ. ತಂದೆ ದೊಡ್ಡಮಲ್ಲೇಗೌಡ ನನಗೆ ಈ ಕಲೆಯನ್ನು ಕಲಿಸಿದ್ದರು. ನಾನು ನನ್ನ ಮಗನಿಗೆ ಕಲಿಸುತ್ತಿದ್ದೇನೆ. ಕಷ್ಟವೋ, ನಷ್ಟವೋ ಈ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ಗೊರವರ ಕುಣಿತ ರಾಜ್ಯದ ವಿಶಿಷ್ಟ ಜನಪದ ಕಲೆಯಾಗಿರುವುದು ನಮಗೆ ಹೆಮ್ಮೆಯ ವಿಷಯ’ ಎಂದು ಚಿಕ್ಕಮಲ್ಲೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಲ್ಯದ ಆಸೆ: ‘ಗೊರವರ ಕುಣಿತದಲ್ಲಿ ಪಳಗುವುದು ನನ್ನ ಬಾಲ್ಯದ ಆಸೆ. ಅಪ್ಪನ ಮಾರ್ಗದರ್ಶನದಿಂದ ಅದು ಸಾಕಾರವಾಗಿದೆ.ನಮ್ಮ ಜಾತಿಯಲ್ಲಿ ಕೆಲ ಕುಟುಂಬದವರು ಮಾತ್ರ ಈ ಕುಣಿತವನ್ನು ಮಾಡುತ್ತಾರೆ. ವಂಶಪಾರಂಪರಿಕವಾಗಿ ಗೊರವರ ಮನೆತನದವರು ತಮ್ಮ ಮಕ್ಕಳಿಗೆ ಗೊರವರ ದೀಕ್ಷೆ ಕೊಡಿಸುತ್ತಾ ಬಂದಿದ್ದಾರೆ. ಅದರಂತೆ ನಾವು ಮೈಸೂರು, ತುಮಕೂರು, ರಾಮನಗರ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಹೋಗಿ ದೀಕ್ಷೆಗಳನ್ನು ನೀಡುತ್ತೇವೆ’ ಎಂದು ಅವರು ವಿವರಿಸಿದರು.

ಜಾತ್ರೆಗಳಲ್ಲಿ ತಂಡ: ಚಿಕ್ಕಮಲ್ಲೇಗೌಡ ಅವರ ತಂಡ ವಿಶೇಷ ದಿನಗಳಲ್ಲಿ, ಜಾತ್ರೆಗಳಲ್ಲಿ ಪ್ರದರ್ಶನ ನೀಡುತ್ತದೆ.

‘ತಾಲ್ಲೂಕಿನ ಸರಗೂರು, ಸತ್ತೇಗಾಲ, ಲಿಂಗಣಪುರ, ಮಧುವನಹಳ್ಳಿ, ಮುಡಿಗುಂಡ, ಕೊಳ್ಳೇಗಾಲ, ಉತ್ತಂಬಳ್ಳಿ, ಗೊಬ್ಬಳಿಪುರ, ಟಗರಪುರ, ಕುಂತೂರು ಸೇರಿದಂತೆ ವಿವಿಧ ಕಡೆಗಳಿಗೆ ಪ್ರತಿ ಸೋಮವಾರ ಮತ್ತು ಶುಕ್ರವಾರ ಹೋಗಿ ಪ್ರದರ್ಶನ ನೀಡಿ ಭಿಕ್ಷೆ ಬೇಡಿ‌ ಸಂಪ್ರದಾಯವನ್ನು ಪಾಲಿಸುತ್ತೇವೆ’ ಎಂದು ಅವರು ಹೇಳಿದರು.

ಮುಖ್ಯವಾಹಿನಿಯಿಂದ ದೂರ
ಈ ವಿಶಿಷ್ಟ ಕಲೆಯಲ್ಲಿ 22 ವರ್ಷಗಳ ಅನುಭವವಿದ್ದರೂ ಚಿಕ್ಕಮಲ್ಲೇಗೌಡ ಹಾಗೂ ಅವರ ಗ್ರಾಮದ ಇತರ ಕಲಾವಿದರು ಮುಖ್ಯವಾಹಿನಿಯಿಂದ ದೂರ ಇದ್ದಾರೆ.

ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ತಮಗೆ ಅವಕಾಶ ನೀಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪ‍ಡಿಸುತ್ತಾರೆ.

‘ಗ್ರಾಮೀಣ ದಸರಾ, ಜಿಲ್ಲಾ ದಸರಾ ಸೇರಿದಂತೆ ಜಿಲ್ಲಾಡಳಿತ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡುತ್ತಿಲ್ಲ. ಪ್ರೋತ್ಸಾಹವೇ ಇಲ್ಲದಂತಾಗಿದೆ’ ಎಂದು ಗ್ರಾಮದ ಮತ್ತೊಬ್ಬ ಕಲಾವಿದ ಬಾಲಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.