ADVERTISEMENT

ಹಂಗಳ: ವರ್ಷದಿಂದ ವೈದ್ಯ ಹುದ್ದೆ ಖಾಲಿ

ನರ್ಸ್‌ಗಳ ಕೊರತೆ, ಆಂಬುಲೆನ್ಸ್‌ ಇಲ್ಲ, ಕೋವಿಡ್‌ ಲಸಿಕೆ ವಿತರಣೆ, ರೋಗಿಗಳಿಗೆ ಸಿಗದ ಚಿಕಿತ್ಸೆ

ಮಲ್ಲೇಶ ಎಂ.
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೋಟ
ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೋಟ   

ಗುಂಡ್ಲುಪೇಟೆ: ಹಂಗಳ ಗ್ರಾಮದ ಕೇಂದ್ರ ಸ್ಥಾನದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಾಗಿ ವರ್ಷ ಸಂದರೂ ಇನ್ನೂ ಭರ್ತಿಯಾಗಿಲ್ಲ.

ನರ್ಸ್‌ಗಳ ಕೊರತೆಯೂ ಕಾಡುತ್ತಿದೆ. ಆಂಬುಲೆನ್ಸ್‌ ಕೂಡ ಇಲ್ಲಿಲ್ಲ. ಇದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ.

ಈ ಆರೋಗ್ಯ ಕೇಂದ್ರ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಪಕ್ಕದಲ್ಲೇ ಇದೆ. ಹೆದ್ದಾರಿಯಲ್ಲಿ ಅಪಘಾತಗಳು ಆಗಾಗ ಸಂಭವಿಸುತ್ತಿರುತ್ತವೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇಲ್ಲದೆ ಪರದಾಟ ನಡೆಸಬೇಕಾಗಿದೆ.

ADVERTISEMENT

ಹಂಗಳ ಗ್ರಾಮವು ಹೋಬಳಿ ಕೇಂದ್ರ ಆಗಿದ್ದು, ಹೆಚ್ಚು ಜನಸಂಖ್ಯೆ ಹೊಂದಿದೆ. ಸುತ್ತಮುತ್ತಲಿನ ಕಾಡಂಚಿನ ಬುಡಕಟ್ಟು ಜನರು ಸಹ ಇಲ್ಲಿನ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಹೀಗಿದ್ದರೂ ವರ್ಷದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲ. ಜನರು ತುರ್ತು ಚಿಕಿತ್ಸೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕಾಗಿದೆ.

‘ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರಕುತ್ತಿಲ್ಲ. ಹೆರಿಗೆ ಸೇರಿದಂತೆ ಇನ್ನಿತರ ಪ್ರಕರಣಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಉಚಿತ 108 ಆಂಬುಲೆನ್ಸ್ ವ್ಯವಸ್ಥೆಯೂ ಇಲ್ಲವಾಗಿದೆ’ ಎಂದು ಸ್ಥಳೀಯರಾದ ನಾಗರಾಜು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಬೇರೆ ಆಸ್ಪತ್ರೆಯ ವೈದ್ಯರನ್ನು ವಾರದಲ್ಲಿ ಎರಡು ದಿನ ನಿಯೋಜನೆ ಮಾಡಿದ್ದರೂ ಅವರು ಸರಿಯಾದ ಸಮಯಕ್ಕೆ ಕೇಂದ್ರಕ್ಕೆ ಬರು‌ತ್ತಿಲ್ಲ. ವಾರದ ನಾಲ್ಕು ದಿನ ವೈದ್ಯರಿಲ್ಲದೆ ನರ್ಸ್‍ಗಳೇ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ ಲಸಿಕೆಯನ್ನೂ ಇಲ್ಲಿ ನೀಡುತ್ತಿರುವುದರಿಂದ ಹೊರ ರೋಗಿಗಳಿಗೆ ಚಿಕಿತ್ಸೆ ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ’ ಎಂದು ವಕೀಲ ರಾಜೇಶ್ ದೂರಿದರು.

‘ಕಾಯಂ ವೈದ್ಯರಿಲ್ಲದೆ ಇರುವುದರಿಂದ ರೋಗಿಗಳಿಗೆ ಹೆಚ್ಚಿನ ಸಮಸ್ಯೆ ಆಗಿದೆ. ತುರ್ತು ಚಿಕಿತ್ಸೆಗೆ ಪಟ್ಟಣದ ಆಸ್ಪತ್ರಯನ್ನೇ ಅವಲಂಬಿಸಬೇಕಾಗಿದೆ. ಶೀಘ್ರವಾಗಿ ಕಾಯಂ ವೈದ್ಯರ ನೇಮಕ ಮಾಡದಿದ್ದರೆ ಆಸ್ಪತ್ರೆ ಮುಂದೆ ಧರಣಿ ನಡೆಸುವುದು ಅನಿವಾರ್ಯವಾಗುತ್ತದೆ’ ಎಂದು ಅವರು ಹೇಳಿದರು.

ಶೀಘ್ರ ನೇಮಕ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್‌ ಅವರು, ‘‌ವೈದ್ಯರ ಕೊರತೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ನೀಡುತ್ತಿರುವುದರಿಂದ ವೈದ್ಯರು ಕೂಡ ಒಂದು ಕಡೆಯಿಂದ ಮತ್ತೊಂದೆಡೆಗೆ ಹೋಗುತ್ತಿಲ್ಲ. ಹಂಗಳಕ್ಕೆ ಕಾಯಂ ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.