ADVERTISEMENT

ಯಳಂದೂರು | ಹೂ ಕಟ್ಟುವ ಹಂತದಲ್ಲಿ ದ್ವಿ ಧಾನ್ಯ ಬೆಳೆ

ಜಾನುವಾರುಗಳಿಗೆ ಸಮೃದ್ಧ ಮೇವು, ಹಸಿರು ಗೊಬ್ಬರದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:23 IST
Last Updated 11 ಮೇ 2025, 14:23 IST
ಹೂಕಟ್ಟಿರುವ ಉದ್ದು
ಹೂಕಟ್ಟಿರುವ ಉದ್ದು    

ಯಳಂದೂರು: ತಾಲ್ಲೂಕಿನಲ್ಲಿ ದ್ವಿದಳ ಧಾನ್ಯ, ಭತ್ತ ಹಾಗೂ ರಾಗಿ ಮತ್ತಿತರ ಬೆಳೆಗಳ ಬಿತ್ತನೆಯಾಗಿದೆ. ಉದ್ದು, ಹೆಸರು, ಅಲಸಂದೆ ಕಾಳು ಕಟ್ಟುವ ಹಂತದಲ್ಲಿ ಇದ್ದರೆ, ಏಕ ದಳ ಸಸ್ಯಗಳು ಹಾಲ್ದುಂಬಿವೆ. ಇದೇ ವೇಳೆ ವಾತಾವರಣದಲ್ಲಿ ಹೆಚ್ಚಿನ ಉಷ್ಣಾಂಶ ಕಾಣಿಸಿಕೊಂಡಿದ್ದು, ಮಳೆ ಸುರಿದರೆ ಕೃಷಿ ಚಟುವಟಿಕೆ ಗರಿಗೆದರುವ ನಿರೀಕ್ಷೆಯಲ್ಲಿ ಇದ್ದಾರೆ ಕೃಷಿಕರು.

ಮುಂಗಾರು ಪೂರ್ವ ಹಂಗಾಮಿನಲ್ಲಿ ಮಳೆಯಾಶ್ರಿತ ಬೆಳೆಗಳನ್ನು ನಾಟಿ ಮಾಡಲಾಗಿದೆ. ಭತ್ತ ಹಾಗೂ ಮುಸುಕಿನಜೋಳ ಬೆಳೆಯಲು ಕಾಲುವೆ ಮತ್ತು ಕೊಳವೆಬಾವಿ ನೀರಾವರಿ ಬಳಸಿಕೊಂಡಿದ್ದರೆ, ಇತರ ಬೇಸಾಯಗಾರರು ಮಳೆ ನಂಬಿ ಉದ್ದು, ಹೆಸರು ಬಿತ್ತನೆ ಮಾಡಿದ್ದಾರೆ. ಕಳೆದ ವಾರ ಭರ್ಜರಿ ಮಳೆಯಾದ ಭಾಗಗಳಲ್ಲಿ ಉತ್ತಮ ಫಸಲು ಬಂದಿದೆ.

ಅಗರ ಮತ್ತು ಕೆಸ್ತೂರು ಹೋಬಳಿ ವ್ಯಾಪ್ತಿಗಳಲ್ಲಿ ಎಡರು ತಿಂಗಳ ಹಿಂದೆ ನಾಟಿ ಮಾಡಿದ ಕಾಳಿನ ಬೆಳೆಗಳು ಹೂ ಕಟ್ಟುವ ಹಂತದಲ್ಲಿ ಇದೆ. ರೋಗ ಪೀಡಿತ ಸಸ್ಯಗಳಿಗೆ ಔಷಧೋಪಚಾರ ಮಾಡಲಾಗಿದೆ. ಮಳೆ ಏರಿಳಿತದಿಂದ ಬೆಳವಣಿಗೆಯಲ್ಲೂ ವ್ಯತ್ಯಯವಾಗಿದೆ. ಕಾಳು ಕಟ್ಟುವ ಹಂತದಲ್ಲಿ ಮಳೆ ಹೆಚ್ಚಾದರೆ. ಇಳುವರಿ ಕುಸಿಯಲಿದೆ ಎನ್ನುತ್ತಾರೆ ಮಲ್ಲಿಗೆಹಳ್ಳಿ ಸಾಗುವಳಿದಾರ ಮಹೇಶ್.

ADVERTISEMENT

ಭೂಮಿಗೆ ಸಾರಜನಕ ಸ್ಥೀರೀಕರಣಕ್ಕೆ ದ್ವಿದಳ ಧಾನ್ಯಗಳು ಸಹಾಯ ಮಾಡುತ್ತವೆ. ಹಾಗಾಗಿ, ಕೃಷಿಕರು ತೊಗರಿ, ಹುರುಳಿ, ಕಡಲೆ ಮತ್ತು ಹೆಸರು ನಾಟಿಗೆ ಒತ್ತು ನೀಡಿದ್ದಾರೆ. ಈ ಫಸಲುಗಳಿಗೆ ಬರ ನಿರೋಧಕ ಗುಣ ಇರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಆಹಾರ ಧಾನ್ಯಗಳ ಬೆಳೆಗಿಂತ ದ್ವಿದಳ ಧಾನ್ಯ ಬೆಳೆ ಭೂಮಿಯ ಆಳಕ್ಕೆ ಇಳಿಯುವುದರಿಂದ ಕಟಾವಿನ ನಂತರ ಗಿಡಗಳನ್ನು ಮಣ್ಣಿಗೆ ಸೇರಿಸುತ್ತೇವೆ ಎಂದು ರೈತ ಹೊನ್ನೂರು ರಾಜಣ್ಣ ಹೇಳಿದರು.

ಜಾನುವಾರು ಮೇವು: ಕೆಲವರು ಮಿಶ್ರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆದಿದ್ದು, ಜಾನುವಾರು ಮೇವಿಗಾಗಿ ಬಳಕೆ ಮಾಡುತ್ತಾರೆ. ಮಳೆ ಏರಿಳಿತದಿಂದ ಬೆಳೆ ಕಳೆದುಕೊಂಡರು. ದನಕರುಗಳಿಗೆ ಇತರೆ ಪಶು ಆಹಾರದ ಜೊತೆ ಮಿಶ್ರಣ ಮಾಡಿ ತಿನ್ನಿಸಬಹುದು ಎನ್ನುತ್ತಾರೆ ಪಶು ಸಾಕಣೆದಾರರು.

ಮಳೆ ನಿರೀಕ್ಷೆ: ತಾಲ್ಲೂಕಿನಲ್ಲಿ ಹೆಸರು, ಉದ್ದು, ಮೆಕ್ಕೆಜೋಳ, ಭತ್ತ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಲ್ಪ ಪ್ರಮಾಣದಲ್ಲಿ ರಾಗಿ ನಾಟಿ ಮಾಡಲಾಗಿದೆ. ಆರಂಭದಲ್ಲಿ ಒಂದೆರಡು ಮಳೆಯಾಗಿದ್ದು, ಸಸ್ಯಗಳ ಬೆಳವಣಿಗೆಗೆ ಪೂರಕವಾಗಿತ್ತು. ನಂತರ ಮಳೆ ಪ್ರಮಾಣ ಕಡಿಮೆಯಾಯಿತು. ಈ ವಾರ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ. ಕಾಡಂಚಿನ ಪ್ರದೇಶ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆ ಕೊರತೆ ಬಾಧಿಸಿದೆ ಎನ್ನುತ್ತಾರೆ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ವೆಂಕಟರಂಗಶೆಟ್ಟಿ.

ಮಳೆ ಹೆಚ್ಚು ಸುರಿದರೆ ಬೆಳೆ ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹಾಗಾಗಿ, ಬೆಳೆಗಾರರು ಸಕಾಲದಲ್ಲಿ ಔಷಧೋಪಚಾರ ಮಾಡಬೇಕು. ಮೇವು ಕಟಾವು ಮಾಡಿದ ನಂತರ ನೀರಿಗೆ ಸೋಂಕದಂತೆ ಸುರಕ್ಷಿತವಾಗಿ ರಕ್ಷಿಸಬೇಕು ಎನ್ನುತ್ತಾರೆ ಇವರು.

ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಹೊರ ವಲಯದಲ್ಲಿ ಈಚೆಗೆ ಸುರಿದ ಮಳೆಗೆ ದ್ವಿದಳ ಧಾನ್ಯದ ಬೆಳೆ ಸಮೃದ್ಧವಾಗಿ ಬೆಳೆದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.