ADVERTISEMENT

ಚಾಮರಾಜನಗರ: ಡಾ.ರಾಜ್‌ ಸಹೋದರಿ ನಾಗಮ್ಮ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 18:16 IST
Last Updated 2 ಆಗಸ್ಟ್ 2025, 18:16 IST
ತಾಳವಾಡಿಯ ದೊಡ್ಡಗಾಜನೂರು ಗ್ರಾಮದಲ್ಲಿ ಶನಿವಾರ ನಡೆದ ನಾಗಮ್ಮ ಅವರ ಅಂತ್ಯಕ್ರಿಯೆಯಲ್ಲಿ ನಟ ಶಿವರಾಜ್‌ಕುಮಾರ್‌–ಗೀತಾ ಶಿವರಾಜ್‌ಕುಮಾರ್‌ ದಂಪತಿ ಪಾಲ್ಗೊಂಡರು.
ತಾಳವಾಡಿಯ ದೊಡ್ಡಗಾಜನೂರು ಗ್ರಾಮದಲ್ಲಿ ಶನಿವಾರ ನಡೆದ ನಾಗಮ್ಮ ಅವರ ಅಂತ್ಯಕ್ರಿಯೆಯಲ್ಲಿ ನಟ ಶಿವರಾಜ್‌ಕುಮಾರ್‌–ಗೀತಾ ಶಿವರಾಜ್‌ಕುಮಾರ್‌ ದಂಪತಿ ಪಾಲ್ಗೊಂಡರು.   

ಚಾಮರಾಜನಗರ: ವರನಟ ಡಾ.ರಾಜಕುಮಾರ್ ಅವರ ಸಹೋದರಿ ನಾಗಮ್ಮ ಅವರ ಅಂತ್ಯಕ್ರಿಯೆ ಶನಿವಾರ ‌ತಮಿಳುನಾಡಿನ ತಾಳವಾಡಿ ತಾಲ್ಲೂಕಿನಲ್ಲಿರುವ ದೊಡ್ಡ ಗಾಜನೂರು ಗ್ರಾಮದಲ್ಲಿರುವ ತೋಟದಲ್ಲಿ ನಡೆಯಿತು.

ಶುಕ್ರವಾರ ಚಿತ್ರೀಕರಣ ನಿಮಿತ್ತ ಗೋವಾಗೆ ತೆರಳಿದ್ದ ನಟ ಶಿವರಾಜ್‌ಕುಮಾರ್, ಸೋದರತ್ತೆಯ ನಿಧನದ ಸುದ್ದಿ ತಿಳಿದ ಕೂಡಲೇ ಪತ್ನಿ ಗೀತಾ ಹಾಗೂ ಪುತ್ರಿ ನಿವೇದಿತಾ ಜೊತೆಗೆ ಬಂದರು. ರಾಘವೇಂದ್ರ ರಾಜಕುಮಾರ್‌, ಅಶ್ವಿನಿ ಪುನೀತ್‌ ರಾಜಕುಮಾರ್‌, ಪುತ್ರಿ ವಂದಿತಾ, ಯುವ ನಟರಾದ ವಿನಯ್‌ ಹಾಗೂ ಯುವ ರಾಜಕುಮಾರ್, ನಿರ್ಮಾಪಕ ಎಸ್‌.ಎ.ಚಿನ್ನೇಗೌಡ ಸೇರಿದಂತೆ ಡಾ.ರಾಜ್‌ ಕುಟುಂಬದ ಸದಸ್ಯರು ಭಾಗವಹಿಸಿದ್ದರು. 

ನಾಗಮ್ಮನವರ ‘ಮುತ್ತು ವರದ’ ನಿವಾಸದ ಆವರಣದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರಕ್ಕೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ADVERTISEMENT

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಅವರ ಕುಟುಂಬದವರು ಯಳಂದೂರು ತಾಲ್ಲೂಕಿನ ಯರಗಂಬಳ್ಳಿಯ ಗುಡ್ಡೆಮಠದಲ್ಲಿ ದೀಕ್ಷೆ ಪಡೆದಿರುವುದರಿಂದ ಗುಡ್ಡೆಮಠದ ಪಟ್ಟದ ರಾಘವೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಯಿತು. ಬಾಳೆಯ ತೋಟದಲ್ಲಿ ಪತಿಯ ಸಮಾಧಿ ಪಕ್ಕದಲ್ಲೇ ನಾಗಮ್ಮನವರ ಪಾರ್ಥಿವ ಶರೀರಕ್ಕೆ ಖಾವಿಯ ಬಟ್ಟೆ ತೊಡಿಸಿ ‌ಧ್ಯಾನಸ್ಥ ಸ್ಥಿತಿಯಲ್ಲಿ ಕೂರಿಸಿ ಉಪ್ಪು ಹಾಗೂ ವಿಭೂತಿಯಿಂದ ಮುಚ್ಚಲಾಯಿತು. 

ದೊಡ್ಡಗಾಜನೂರು ತಮಿಳುನಾಡಿಗೆ ಸೇರಿದ್ದರೂ ನಾಗಮ್ಮ ಅವರ ನಿಧನಕ್ಕೆ ಗ್ರಾಮದ ಜನ ಕಂಬನಿ ಮಿಡಿದರು. ‌ತಾಳವಾಡಿಯ ಪ್ರಮುಖ ಸ್ಥಳಗಳಲ್ಲಿ ನಾಗಮ್ಮ ಅವರ ಭಾವಚಿತ್ರದ ಫ್ಲೆಕ್ಸ್‌ಗಳನ್ನು ಹಾಕಿ ಹೂವಿನ ಅಲಂಕಾರ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ತಮಿಳುನಾಡಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ನಾಗತ್ತೆ ಯಾವಾಗಲೂ ಅಪ್ಪಾಜಿ ಜೊತೆಗೇ ಇರುತ್ತಿದ್ದರು. ಅಪ್ಪಾಜಿಯನ್ನು ಕಂಡರೆ ಅವರಿಗೆ ತುಂಬಾ ಪ್ರೀತಿ. ಅಪ್ಪಾಜಿ ಸಮಕಾಲೀನರಲ್ಲಿ ಕೊನೆಯ ಕೊಂಡಿ ಇವರು. ಅಪ್ಪು ನಿಧನ ಸ್ವಂತ ಮಗ ಭರತ್ ನಿಧನ ಸುದ್ದಿಯೂ ಗೊತ್ತಿರಲಿಲ್ಲ
–ಶಿವರಾಜ್‌ಕುಮಾರ್‌ ನಟ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.