ಚಾಮರಾಜನಗರ: ಮೈಸೂರಿನಲ್ಲಿ ಮಾದಕ ವಸ್ತುಗಳನ್ನು ತಯಾರಿಕೆ ಮಾಡುವ ಕಾರ್ಖಾನೆ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸರ್ಕಾರ ಡ್ರಗ್ಸ್ ಮಾಫಿಯಾವನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಎಬಿವಿಪಿ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಹಂಜಗಿ ಮಾತನಾಡಿ, ಈಚೆಗೆ ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ₹ 390 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ. ನಗರದ ರಿಂಗ್ ರಸ್ತೆಯ ಬಳಿಯೇ ಡ್ರಗ್ಸ್ ತಯಾರಿಕಾ ಕಾರ್ಖಾನೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆಗೆ ತಿಳಿಯದಿರುವುದು ಸೋಜಿಗದ ಸಂಗತಿ ಎಂದು ಟೀಕಿಸಿದರು.
‘ಮಾದಕ ವಸ್ತುಗಳ ತಯಾರಿಕೆ ಹಾಗೂ ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು ಗೃಹ ಸಚಿವರೇ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಇದರ ನಡುವೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಆಪ್ತನೊಬ್ಬನನ್ನು ಮಾದಕ ವಸ್ತುಗಳ ಸಾಗಾಣೆಯಲ್ಲಿ ಬಂಧನಕ್ಕೊಳಗಾಗಿರುವುದನ್ನು ಗಮನಿಸಿದರೆ ಡ್ರಗ್ಸ್ ತಯಾರಿಕೆ ಹಾಗೂ ಪೂರೈಕೆ ಜಾಲ ಸಕ್ರಿಯವಾಗಿರುವ ಬಗ್ಗೆ ಸಚಿವರಿಗೆ ಮಾಹಿತಿ ಇರುವ ಅನುಮಾನ ಮೂಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು, ಮಂಗಳೂರಿನಲ್ಲಿ ಹೆಚ್ಚು ಸಕ್ರಿಯವಾಗಿದ್ದ ಡ್ರಗ್ಸ್ ಮಾಫಿಯಾ ಸಾಂಸ್ಕೃತಿಕ ಪರಂಪರೆಯ ಮೈಸೂರಿನಲ್ಲೂ ಪತ್ತೆಯಾಗಿರುವುದು ಅಪಾಐಕಾರಿ. ಮಾದಕ ವಸ್ತುಗಳ ಪ್ರಭಾವಕ್ಕೊಳಗಾಗಿ ಯುವ ಸಮುದಾಯ ಹಾದಿತಪ್ಪುವ ಆಪಾಯ ಎದುರಾಗಿದೆ. ರಾಜ್ಯ ಸರ್ಕಾರ ಯುವಜನತೆಯ ಹಾಗೂ ಸಮಾಜದ ಹಿತದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ತಯಾರಿಕೆ ಮತ್ತು ಪೂರೈಕೆ ಜಾಲವನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ರವಿ ನರೇಗಲ, ಮಹಾದೇವ, ಶ್ರುತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.