ADVERTISEMENT

‘ಕಾಡು ಹೂ ರಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ’

ಪರಿಸರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗೆ ಸಂದ ಗೌರವ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:24 IST
Last Updated 31 ಅಕ್ಟೋಬರ್ 2025, 7:24 IST
ರಾಮೇಗೌಡ
ರಾಮೇಗೌಡ   

ಚಾಮರಾಜನಗರ: ನಶಿಸುವ ಹಂತದಲ್ಲಿರುವ ಅಪರೂಪದ ಸಸ್ಯಪ್ರಬೇಧಗಳನ್ನು ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಬಿಳಿಗಿರಿ ರಂಗನಬೆಟ್ಟದ ಬಂಗ್ಲೆಪೋಡಿನ ರಾಮೇಗೌಡರಿಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಪರಿಸರ ಕ್ಷೇತ್ರದ ಸಾಧನೆಗಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ರಾಮೇಗೌಡರ ವಿಶೇಷ: ಅರಣ್ಯದೊಳಗೆ ಬೆಳೆಯುವ ಅಪರೂಪದ ಔಷಧೀಯ ಗುಣಗಳುಳ್ಳ ಸಸ್ಯಗಳು, ಗೆಡ್ಡೆ, ಬೇರು, ಬಳ್ಳಿಗಳನ್ನು ಕರಾರುವಕ್ಕಾಗಿ ಗುರುತಿಸಿ ಅವುಗಳ ವಿಶೇಷತೆ ಹಾಗೂ ಪ್ರಯೋಜನಗಳನ್ನು ಹೇಳುವಷ್ಟು ನಿಷ್ಣಾತರಾಗಿರುವ ರಾಮೇಗೌಡರು ಕಳೆದ ಎರಡೂವರೆ ದಶಕಗಳಲ್ಲಿ 3 ಲಕ್ಷಕ್ಕೂ ಹೆಚ್ಚಿನ ಕಾಡುಜಾತಿಯ ಗಿಡಗಳನ್ನು ಬೆಳೆಸಿ ಸಮಾಜಕ್ಕೆ ಹಂಚಿದ್ದಾರೆ. 

ಕಾಡಿನೊಳಗೆ ಅಲೆಯುತ್ತಾ, ಆದಿವಾಸಿಗಳ ಜ್ಞಾನ ಪರಂಪರೆ, ಪದ್ಧತಿ, ನಂಬಿಕೆಗಳಿಂದ ದಕ್ಕಿಸಿಕೊಂಡ ಪರಿಸರ ಜ್ಞಾನವನ್ನು ಬಳಸಿಕೊಂಡು ವಿನಾಶದ ಅಂಚಿನಲ್ಲಿರುವ ಸಸ್ಯಪ್ರಬೇಧಗಳನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಬಿಆರ್‌ ಹಿಲ್ಸ್‌ನಲ್ಲಿ ಒಂದೂವರೆ ಎಕರೆ ಕಂದಾಯ ಭೂಮಿಯಲ್ಲಿ ಜಡೆ ರುದ್ರಸ್ವಾಮಿ ನರ್ಸರಿ ನಿರ್ಮಿಸಿಕೊಂಡಿರುವ ರಾಮೇಗೌಡರು 350ಕ್ಕೂ ಹೆಚ್ಚು ಕಾಡುಜಾತಿಯ ಗಿಡಗಳನ್ನು ಬೆಳೆಸಿದ್ದು ಅವುಗಳು ನಶಿಸಿಹೋಗದಂತೆ ಜತನದಿಂದ ಕಾಪಾಡಿಕೊಳ್ಳುತ್ತಿದ್ದಾರೆ.

ನಿತ್ಯ ಕಾಡು–ಮೇಡು ಅಲೆದು ಅಗತ್ಯಕ್ಕೆ ತಕ್ಕಷ್ಟು ಬೀಜಗಳನ್ನು ಸಂಗ್ರಹಿಸಿ ಮೊಳೆಸಿ ನಾಡಿನ ಹಲವು ಸಂಘ ಸಂಸ್ಥೆಗಳಿಗೆ, ಪರಿಸರ ಪ್ರೇಮಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಯಾವ ಕಾಲದಲ್ಲಿ ಗಿಡಗಳನ್ನು ನೆಡಬೇಕು, ಬೆಳೆಸುವ ಕ್ರಮ ಹೇಗೆ, ಅವುಗಳಲ್ಲಿರುವ ಔಷಧೀಯ ಗುಣಗಳು ಯಾವುವು ಎಂಬ ತಿಳಿವಳಿಕೆಯನ್ನೂ ನೀಡುತ್ತಿದ್ದಾರೆ.

ಓದಿದ್ದು 7ನೇ ತರಗತಿಯಾದರೂ ಕಾಡಿನ ಸಸ್ಯಪ್ರಬೇಧಗಳ ಬಗ್ಗೆ ಅಪಾರ ಜ್ಞಾನ ಹೊಂದಿ ಕಾಡಿನಕೋಶ ಎಂದೇ ಕರೆಸಿಕೊಳ್ಳುವ ಮಾದೇಗೌಡರು ಪತ್ನಿ ಕೇತಮ್ಮ, ನಾಲ್ವರು ಪುತ್ರಿಯರ ಜೊತೆ ವಾಸವಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ದೊರೆತ ಜ್ಞಾನವನ್ನು ಮಕ್ಕಳಿಗೆ ದಾಟಿಸುತ್ತಿರುವ ಅವರು ಇಡೀ ಕುಟುಂಬವನ್ನೇ ಪರಿಸರದ ಕಾಯಕಕ್ಕೆ ಸಮರ್ಪಿಸಿಕೊಂಡಿದ್ದಾರೆ.

ಬಾಲ್ಯದಲ್ಲಿ ತಾಯಿಯ ಜೊತೆ ಕಾಡಿನೊಳಗೆ ಹೆಜ್ಜೆ ಹಾಕುವಾಗ ದಕ್ಕಿಸಿಕೊಂಡ ಜ್ಞಾನ ಮಾಸದಂತೆ ಕಾಪಾಡಿಕೊಂಡಿರುವ ಅವರು ಕಾಡಿನೊಳಗಿನ ಯಾವುದೇ ಸಸ್ಯಗಳ ಹೆಸರನ್ನು ನಿಖರವಾಗಿ ಹೇಳಬಲ್ಲರು, ಅವುಗಳ ಉಪಯೋಗವನ್ನು ತಿಳಿಸಬಲ್ಲರು.

ಅಳಿವಿನಂಚಿಗೆ ಸರಿದಿರುವ ಬಿಕ್ಕಿಲು, ಏಕಮುಖ ರುದ್ರಾಕ್ಷಿ, ಕಾನು ದೂಪ, ಜಾಲಾರಿ, ಮಾಗಳಿ ಬಳ್ಳಿ ಬೇರು, ಕಾಡು ನೆಲ್ಲಿ, ಅಳಲೆಕಾಯಿ, ಕಾಡು ಮಾವು ಸಹಿತ ಹಲವು ಜಾತಿಯ ಕಾಡಿನ ಹಣ್ಣುಗಳು, ಗಿಡಮೂಲಿಕೆಗಳ ಸಸ್ಯಗಳನ್ನು ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಅವರ ಪರಿಸರ ಕಾಯಕಕ್ಕೆ ಧೀನಬಂಧು ಟ್ರಸ್ಟ್‌ನ ಕಾರ್ಯದರ್ಶಿ ಜಿ.ಎಸ್‌.ಜಯದೇವ್ ಪ್ರೋತ್ಸಾಹ ನೀಡುತ್ತಿದ್ದಾರೆ.

ರಾಮೇಗೌಡ ಪರಿಸರ ಪ್ರೇಮಿ

ಸಂತಸವಾಗಿದೆ’

ಸುಮಾರು 20ನೇ ವಯಸ್ಸಿಗೆ ಆರಂಭವಾದ ಪರಿಸರ ಪ್ರೀತಿ ಇಂದಿಗೂ ಹಚ್ಚಹಸಿರಾಗಿದೆ. ಅಪರೂಪದ ಸಸ್ಯಪ್ರಬೇಧಗಳು ಉಳಿಸಬೇಕು ಎಂಬ ಆಶಯಕ್ಕೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಪರಿಸರದ ಕೆಲಸ ಮಾಡಲು ಮತ್ತಷ್ಟು ಸ್ಫೂರ್ತಿ ಪ್ರೇರಣೆ ದೊರೆತಿದೆ ಎನ್ನುತ್ತಾರೆ ರಾಮೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.