ADVERTISEMENT

ಚಾಮರಾಜನಗರ: ಪ್ರತ್ಯೇಕ ವಿ.ವಿ ಕನಸಿಗೆ ರೆಕ್ಕೆ‌ಪುಕ್ಕ

ಮೈಸೂರು ವಿವಿ ಕುಲಪತಿ‌ ನೇತೃತ್ವದಲ್ಲಿ ತಜ್ಞರ ಸಮಿತಿ, ನಾಳೆ ಸಮಿತಿಯ ಮೊದಲ ಸಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 16:13 IST
Last Updated 29 ಜೂನ್ 2021, 16:13 IST
ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನೋಟ
ಡಾ.ಬಿ.ಆರ್‌.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ನೋಟ   

ಚಾಮರಾಜನಗರ: ಜಿಲ್ಲೆಯಲ್ಲಿ ಹೊಸ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ‌ ರಚಿಸಿದ್ದು, ಪ್ರತ್ಯೇಕ ವಿವಿಯ ಕನಸಿಗೆ ರೆಕ್ಕೆಪುಕ್ಕಗಳು ಬಂದಂತಾಗಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಇನ್ನು‌15 ದಿನಗಳಲ್ಲಿ ಸರ್ಕಾರಕ್ಕೆ ವರದಿ ನೀಡುವ ಸಾಧ್ಯತೆ ಇದೆ.ಸಮಿತಿ ಸದಸ್ಯರು ಗುರುವಾರ ಮೊದಲ ಬಾರಿಗೆ ಸಭೆ ಸೇರಿ ಈ ವಿಚಾರವಾಗಿ ಚರ್ಚಿಸಲಿದ್ದಾರೆ.

ಈಗಾಗಲೇ‌ ನಗರದ ಹೊರವಲಯದ ಬೇಡರಪುರದಲ್ಲಿ ಮೈಸೂರು ವಿವಿ ಅಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 2010-11 ರಲ್ಲಿ ಸ್ಥಾಪನೆಯಾದ ಈ ಕೇಂದ್ರದಲ್ಲಿ 10 ಸ್ನಾತಕೋತ್ತರ ಕೋರ್ಸ್ಗಳು ಲಭ್ಯವಿವೆ. ಈ ವರ್ಷದಿಂದ ಎಂಬಿಎ ಕೋರ್ಸ್ ಆರಂಭವಾಗಲಿದೆ. ಇಂಗ್ಲಿಷ್ ಕೋರ್ಸ್ ಆರಂಭಿಸುವ ಪ್ರಯತ್ನಗಳೂ ನಡೆಯುತ್ತಿವೆ.

ADVERTISEMENT

55 ಎಕರೆ ಪ್ರದೇಶವನ್ನು ಹೊಂದಿರುವ ಸ್ನಾತಕೋತ್ತರ ಕೇಂದ್ರದ ಆವರಣವನ್ನೇ ಕೇಂದ್ರವಾಗಿಟ್ಟುಕೊಂಡು, ಹೊಸ ವಿವಿ ಸ್ಥಾಪನೆ ಕಾರ್ಯಸಾಧುವೇ ಎಂಬುದರ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸಲಿದೆ.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಷಿ ಅವರು ತಜ್ಞರ ಸಮಿತಿಯ ಸಂಚಾಲಕರಾಗಿದ್ದಾರೆ. ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ವಿ.ಜಿ.ತಳವಾರ್, ಬೆಂಗಳೂರು ಉತ್ತರ ವಿವಿ ಕುಲಪತಿ ಕೆಂಪರಾಜು ಸದಸ್ಯರಾಗಿದ್ದಾರೆ.

ಈ ಬಗ್ಗೆ‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ ಕುಲಪತಿ ಹಾಗೂ ತಜ್ಞರ ಸಮಿತಿ ಅಧ್ಯಕ್ಷ ಪ್ರೊ.ಹೇಮಂತ್‌ ಕುಮಾರ್ ಅವರು, 'ಈ ಹಿಂದೆಯೇ ಸರ್ಕಾರ ಸಮಿತಿ‌ ರಚನೆ ಮಾಡಿ‌ ಆದೇಶ ಹೊರಡಿಸಿತ್ತು. ಕೋವಿಡ್ ಕಾರಣಕ್ಕೆ ‌ಸಮಿತಿ‌ ಸಭೆ ನಡೆದಿರಲಿಲ್ಲ' ಎಂದರು.

'ಪ್ರತಿ ಜಿಲ್ಲೆಯಲ್ಲೂ ವಿವಿಗಳ ಸ್ಥಾಪನೆಯಾಗಬೇಕು ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇಳುತ್ತದೆ.‌ ಚಾಮರಾಜನಗರದಲ್ಲಿ ಪ್ರತ್ಯೇಕ ವಿವಿ ಸ್ಥಾಪನೆಯ ಬಗ್ಗೆ ಬೇಡಿಕೆಗಳು ಇದ್ದವು. ನಾವು ಸರ್ಕಾರದ ಗಮನಕ್ಕೂ ತಂದಿದ್ದೆವು. ವರದಿಗೂ‌ ಮೊದಲು ಸಮಿತಿ‌ಯ ಎರಡು ಮೂರು ಸಭೆಗಳನ್ನು ನಡೆಸಬೇಕಾಗಿದೆ. ಜುಲೈ 1ರಂದು ಮೊದಲ ಸಭೆ ನಡೆಸುತ್ತೇವೆ. 15 ದಿನಗಳಲ್ಲಿ ವರದಿ ಸಲ್ಲಿಸಲು ಯೋಚಿಸುತ್ತಿದ್ದೇವೆ' ಎಂದು ಅವರು ಮಾಹಿತಿ‌ ನೀಡಿದರು.

ಜಿಲ್ಲೆಯ ಹಳೆಯ‌ ಕೂಗು
ಜನಪದೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ, ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು ಎಂಬ ಕೂಗು ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದಾಗಿನಿಂದಲೂ‌ ಕೇಳಿ ಬರುತ್ತಿದೆ.

'ಪ್ರತ್ಯೇಕ ವಿವಿ ಸ್ಥಾಪನೆ ಅಧ್ಯಯನಕ್ಕಾಗಿ ತಜ್ಞರ ಸಮಿತಿಯನ್ನು‌ ಸರ್ಕಾರ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ. ಹಲವರಿಗೆ‌ ಉದ್ಯೋಗವೂ ಸಿಗುತ್ತದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗಲಿದೆ' ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.