ADVERTISEMENT

ರೈತ ಆತ್ಮಹತ್ಯೆ, ಸಾಲ ಬಾಧೆ ಕಾರಣ?

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 15:19 IST
Last Updated 9 ಜನವರಿ 2021, 15:19 IST
ಪುಟ್ಟಣ್ಣ
ಪುಟ್ಟಣ್ಣ   

ಚಾಮರಾಜನಗರ: ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ರೈತರೊಬ್ಬರು ಶನಿವಾರ ಸಂಜೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಲಬಾಧೆ ಕಾರಣ ಎನ್ನಲಾಗಿದೆ.

ಗ್ರಾಮದ ಪುಟ್ಟಣ್ಣ (40) ಆತ್ಮಹತ್ಯೆ ಮಾಡಿಕೊಂಡವರು. ತಮ್ಮ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಬ್ಯಾಂಕು ಹಾಗೂ ಖಾಸಗಿಯವರಿಗೆ ಐದರಿಂದ ಆರು ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

‘ಪುಟ್ಟಣ್ಣ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಭತ್ತದ ಬೆಲೆ ಕಡಿಮೆಯಾಗಿದ್ದರಿಂದ ಈ ವರ್ಷವೂ ಸಾಲ ತೀರಿಸಲು ಆಗುವುದಿಲ್ಲ ಎಂದು ನೊಂದಿದ್ದರು’ ಎಂದು ಅದೇ ಊರಿನವರಾದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ಮಾಹಿತಿ ನೀಡಿದರು.

ADVERTISEMENT

ಶನಿವಾರ ಮಧ್ಯಾಹ್ನದ ಮೇಲೆ ಜಮೀನಿಗೆ ತೆರಳಿದ್ದ ಪುಟ್ಟಣ್ಣ ಅವರು ಅಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಮಗಳು ಇದ್ದಾರೆ.

ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದ್ದು, ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಈಗಷ್ಟೇ ಸ್ಥಳಕ್ಕೆ ಬಂದಿದ್ದೇವೆ. ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ’ ಎಂದು ರವಿಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಇನ್ನೂ ಭತ್ತ ಖರೀದಿ ಆರಂಭವಾಗಿಲ್ಲ. ರೈತರು ಕಟಾವು ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದರವೂ ಇಲ್ಲ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಮೃತ ರೈತನ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಜ್ಯೋತಿಗೌಡನಪುರ ಸಿದ್ದರಾಜು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.