ADVERTISEMENT

ಚಂಗಡಿ ಪುನರ್ವವಸತಿ: ಸಿ.ಎಂ ಬಳಿಗೆ ಶೀಘ್ರ ನಿಯೋಗ

ಅರಣ್ಯ ಸಚಿವ ಉಮೇಶ ಕತ್ತಿಗೆ ಮನವಿ. ಶೀಘ್ರ ಸಭೆ ದಿನಾಂಕ ನಿಗದಿ ಮಾಡುವ ಭರವಸೆ

ಬಿ.ಬಸವರಾಜು
Published 23 ಜುಲೈ 2022, 15:43 IST
Last Updated 23 ಜುಲೈ 2022, 15:43 IST
ಬಿಆರ್‌ಟಿಯ ಕೆ.ಗುಡಿಗೆ ಇತ್ತೀಚೆಗೆ ಅರಣ್ಯ ಸಚಿವ ಉಮೇಶ ಕತ್ತಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊನ್ನೂರು ಪ್ರಕಾಶ್‌ ಹಾಗೂ ಇತರರು ಶೀಘ್ರ ಗ್ರಾಮ ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಿದ್ದರು
ಬಿಆರ್‌ಟಿಯ ಕೆ.ಗುಡಿಗೆ ಇತ್ತೀಚೆಗೆ ಅರಣ್ಯ ಸಚಿವ ಉಮೇಶ ಕತ್ತಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೊನ್ನೂರು ಪ್ರಕಾಶ್‌ ಹಾಗೂ ಇತರರು ಶೀಘ್ರ ಗ್ರಾಮ ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಿದ್ದರು   

ಹನೂರು: ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿರುವ ಚಂಗಡಿ ಗ್ರಾಮ ಸ್ಥಳಾಂತರ ಪ್ರಕ್ರಿಯೆ ವಿಳಂಬವಾಗುತ್ತಿರುವುದರ ನಡುವೆಯೇ, ಶೀಘ್ರ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಲು ಚಂಗಡಿ ಗ್ರಾಮಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಮುಂದಾಗಿದೆ.

ಅರಣ್ಯ ಸಚಿವ ಉಮೇಶ‌ ಕತ್ತಿ ಅವರ ಮೂಲಕ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಗ್ರಾಮಸ್ಥರು ಬಯಸಿದ್ದು, ಸಭೆ ನಿಗದಿ ಮಾಡುವ ಭರವಸೆಯನ್ನು ಉಮೇಶ ಕತ್ತಿ ಅವರು ನೀಡಿದ್ದಾರೆ.

ಮೂಲಸೌಕರ್ಯ ಕೊರತೆಯಿಂದ ನಲುಗಿರುವ ಗ್ರಾಮದಿಂದ ಹೊರಗಡೆ ಹೋಗಲು ಚಂಗಡಿ ಗ್ರಾಮಸ್ಥರು ಒಪ್ಪಿಗೆ ನೀಡಿದ ಬಳಿಕ ಅರಣ್ಯ ಇಲಾಖೆ, ತಾಲ್ಲೂಕಿನ ವೈಶಂಪಾಳ್ಯ ಗ್ರಾಮದ ಬಳಿ ಇರುವ ಅರಣ್ಯ ಇಲಾಖೆಯ 448 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲು ಯೋಜನೆ ರೂಪಿಸಿದೆ. ಇದಕ್ಕೆ ₹34.50 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ADVERTISEMENT

ಈ ಸಂಬಂಧ ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಷವಾಗುತ್ತ ಬಂದರೂ ಇನ್ನೂ ಯಾವುದೇ ಪ್ರಗತಿಯಾಗಿಲ್ಲ. ಸರ್ಕಾರ ಅನುಮತಿಯೂ ನೀಡಿಲ್ಲ. ಹೀಗಾಗಿ ಸ್ಥಳಾಂತರಕ್ಕಾಗಿ ಏಳು ವರ್ಷಗಳಿಂದ ಹೋರಾಡುತ್ತಿರುವ ಗ್ರಾಮಸ್ಥರು ಸಂದಿಗ್ಧತೆಗೆ ಸಿಲುಕಿದ್ದಾರೆ.

‘ಗ್ರಾಮಸ್ಥರು ಒಪ್ಪಿಗೆ ನೀಡಿ, ಅರಣ್ಯ ಇಲಾಖೆ ಸರ್ವೆ ಕಾರ್ಯ ಮುಗಿಸಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಿದ್ದರೂ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಕೂಡಲೇ ಸಚಿವರು ಹಾಗೂ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಕೈಗೆತ್ತಿಕೊಂಡು ಚಂಗಡಿ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಿಕೊಡಲು ಮುಂದಾಗಬೇಕು’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.

ಇತ್ತೀಚೆಗೆ ಉಮೇಶ ಕತ್ತಿ ಅವರು ಖಾಸಗಿ ಭೇಟಿ ನಿಮಿತ್ತ ಬಿಳಿಗಿರಿರಂಗನಬೆಟ್ಟಕ್ಕೆ ಬಂದ ಸಂದರ್ಭದಲ್ಲಿ ಚಂಗಡಿ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಸಚಿವರ ಗಮನಕ್ಕೆ ಈ ವಿಚಾರ ತಂದಿದ್ದರು. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಆಯೋಜಿಸುವ ಹಾಗೂ ಶೀಘ್ರದಲ್ಲಿ ದಿನಾಂಕ ನಿಗದಿ ಮಾಡುವ ಭರವಸೆಯನ್ನೂ ನೀಡಿದ್ದಾರೆ.

‘ಸಚಿವರು ಮುಖ್ಯಂತ್ರಿಗಳ ಜತೆ ಚರ್ಚಿಸಲು ಶೀಘ್ರದಲ್ಲೇ ದಿನಾಂಕ ತಿಳಿಸುವುದಾಗಿ ಹೇಳಿದ್ದಾರೆ. ಗ್ರಾಮದ ಮುಖಂಡರು, ರೈತ ಸಂಘದ ಕಾರ್ಯಕರ್ತರು ಹಾಗೂ ಅರಣ್ಯಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪನರ್ವಸತಿ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡುವಂತೆ ಒತ್ತಾಯಿಸಲಿದ್ದೇವೆ’ ಎಂದು ಚಂಗಡಿ ಗ್ರಾಮದ ಕರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

-

ಪಿಸಿಸಿಎಫ್‌ ಆದೇಶದ ಮೇರೆಗೆ ಮುಖ್ಯಮಂತ್ರಿಗಳ ಭೇಟಿಗೆ ದಿನಾಂಕ ನಿಗದಿಯಾದರೆ, ಸಭೆಯಲ್ಲಿ ಭಾಗವಹಿಸಿ ಪನರ್ವಸತಿ ವರದಿ ಬಗ್ಗೆ ವಿವರಿಸಲಾಗುವುದು.
ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

--

ಮುಖ್ಯಮಂತ್ರಿಗಳ ಭೇಟಿಗೆ ಅರಣ್ಯ ಸಚಿವರು ದಿನಾಂಕ ನಿಗದಿಪಡಿಸುವುದಾಗಿ ಹೇಳಿದ್ದಾರೆ. ಶೀಘ್ರ ಚಂಗಡಿ ಸ್ಥಳಾಂತರ ಮಾಡುವಂತೆ ಒತ್ತಾಯಿಸಲಿದ್ದೇವೆ
ಹೊನ್ನೂರು ಪ್ರಕಾಶ್, ಜಿಲ್ಲಾಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.