ADVERTISEMENT

ಚಾಮರಾಜನಗರ: ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಆಂದೋಲನ

ಚಾಮರಾಜನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 14:17 IST
Last Updated 3 ಆಗಸ್ಟ್ 2020, 14:17 IST
ರೈತಸಂಘದ ಪ್ರತಿನಿಧಿಗಳು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ರೈತಸಂಘದ ಪ್ರತಿನಿಧಿಗಳು ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ವಿವಿಧ ರೈತಸಂಘಗಳು ಒಟ್ಟಾಗಿ ಹಮ್ಮಿಕೊಂಡಿರುವ ‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ–ಉಳುವವರಿಗೇ ಭೂಮಿ, ಉಳ್ಳವರಿಗಲ್ಲ’ ಆಂದೋಲನದ ಭಾಗವಾಗಿ ರೈತ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ಸಂಘ ‌ಹಾಗೂ ಹಸಿರು ಸೇನೆ, ಮೈಸೂರು– ಚಾಮರಾಜನಗರ ಜಿಲ್ಲಾ ಸುಸ್ಥಿರಸಾವಯವ ಕೃಷಿಕರ ಒಕ್ಕೂಟಗಳು ಈ ಆಂದೋಲನದಲ್ಲಿ ಪಾಲ್ಗೊಂಡಿವೆ.

ಜಿಲ್ಲಾ ಕೇಂದ್ರ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹೋಬಳಿ ಕೇಂದ್ರಗಳಾದ ಸಂತೇಮರಹಳ್ಳಿ, ತೆರಕಣಾಂಬಿ, ಹಂಗಳ, ಬೇಗೂರು, ಅಗರ, ಪಣ್ಯದ ಹುಂಡಿ, ಉಡಿಗಾಲ ಸೇರಿದಂತೆ ಹಲವು ಕಡೆಗಳಲ್ಲಿ ತಿದ್ದುಪಡಿ ಕಾಯ್ದೆ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕ, ಬ್ಯಾನರ್‌ಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸಿದರು.

ADVERTISEMENT

ನಗರದಲ್ಲಿ ಭುವನೇಶ್ವರಿ ವೃತ್ತದ ಬಳಿ ರೈತ ಸಂಘದ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

ರೈತ ವಿರೋಧಿ ತಿದ್ದುಪಡಿ ಕಾಯ್ದೆಯನ್ನು ವಾಪಸ್‌ ಪಡೆಯುವಂತೆ ಹಲವು ಹೋರಾಟಗಳನ್ನು ಮಾಡಿದರೂ ಸರ್ಕಾರ ಬೇಡಿಕೆಗೆ ಸಮ್ಮತಿಸಿಲ್ಲ. ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.

ತಿದ್ದುಪಡಿ ಮಾಡಿರುವುದನ್ನು ತಕ್ಷಣವೇ ರದ್ದುಪಡಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಇದೇ 8ರಂದು ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಚಳವಳಿ ನಡೆಸಲಾಗುವುದು. 15ರಂದು ಸ್ವಾತಂತ್ರ್ಯದಿನದಂದು ಕಪ್ಪು‍ಪಟ್ಟಿ ಕಟ್ಟಿಕೊಂಡು ಕರಾಳ ದಿನವನ್ನಾಗಿ ಆಚರಿಸಲಾಗುವುದು. ಇದಕ್ಕೂ ಸರ್ಕಾರ ಬಗ್ಗದಿದ್ದರೆ, ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ರೈತಮುಖಂಡರು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌, ತಾಲ್ಲೂಕು ಅಧ್ಯಕ್ಷ ಮಹದೇವಸ್ವಾಮಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಳ್ಳಿಕೆರೆಹುಂಡಿ ಭಾಗ್ಯರಾಜನ್‌, ಮುಖಂಡರಾದ ಮಾಡ್ರಹಳ್ಳಿ ಮಹದೇವಪ್ಪ, ಕಡಬೂರು ಮಂಜುನಮಾಥ್‌, ಸಂಪತ್ತು, ಮಹದೇವಸ್ವಾಮಿ, ಪೃಥ್ವಿ, ಕುಮಾರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.