ADVERTISEMENT

ಸೂರ್ಯಕಾಂತಿ: ಗುರಿ ಮೀರಿದ ಬಿತ್ತನೆ

ಬೆಳೆಗೆ ಸದ್ಯ ಪೂರಕ ವಾತಾವರಣ, ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು

ಸೂರ್ಯನಾರಾಯಣ ವಿ
Published 1 ಜೂನ್ 2023, 1:03 IST
Last Updated 1 ಜೂನ್ 2023, 1:03 IST
ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಸೂರ್ಯಕಾಂತಿ ಹೂವು ಅರಳಿದೆ
ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಸೂರ್ಯಕಾಂತಿ ಹೂವು ಅರಳಿದೆ   

ಚಾಮರಾಜನಗರ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ ಮೀರಿ ಸಾಧನೆಯಾಗಿದೆ, ಸದ್ಯ, ಗಿಡಗಳು ಚೆನ್ನಾಗಿ ಬಂದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. 

ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಹನೂರು ತಾಲ್ಲೂಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ.  

ಈ ವರ್ಷ ಜಿಲ್ಲೆಯಲ್ಲಿ 13,025 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿತ್ತು. ಆದರೆ, ಇಲ್ಲಿಯವರೆಗೆ 13,823 ಹೆಕ್ಟೇರ್‌ ವ್ಯಾಪ್ತಿಯಲ್ಲಿ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 12,465 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ 1,333 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ. ಹನೂರು ತಾಲ್ಲೂಕಿನಲ್ಲಿ 220 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದರೂ 25 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ. 

ADVERTISEMENT

ಗುಂಡ್ಲುಪೇಟೆ ಭಾಗದಲ್ಲಿ ಬೇಗ ಬಿತ್ತನೆ ಮಾಡಿದ ಕಡೆಗಳಲ್ಲಿ ಈಗಾಗಲೇ ಸೂರ್ಯಕಾಂತಿ ಹೂವು ಅರಳಿದೆ. ಉಳಿದ ಕಡೆಗಳಲ್ಲಿ ಅದರಲ್ಲೂ ಕಪ್ಪು ಮಣ್ಣು ಇರುವ ಕಡೆಗಳಲ್ಲಿ ಗಿಡಗಳು ಹುಲುಸಾಗಿ ಬೆಳೆದಿವೆ. ಸರಿಯಾದ ಸಮಯಕ್ಕೆ ಮಳೆ ಬಂದರೆ, ಈ ಬಾರಿ ಉತ್ತಮ ಇಳುವರಿ ಖಚಿತ ಎಂದು ರೈತರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. 

‘ಏಳು ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದೇನೆ. ಗಿಡಗಳು ಚೆನ್ನಾಗಿ ಬಂದಿವೆ. ಕೃಷಿ ಅಧಿಕಾರಿಗಳು ಕೂಡ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಒಂದೆರಡು ಮಳೆ ಚೆನ್ನಾಗಿ ಬಂದರೆ, ನಮ್ಮ ಬೆಳೆಗೆ ಅನುಕೂಲವಾಗುತ್ತದೆ. ಉತ್ತಮ ಇಳುವರಿಯನ್ನೂ ನಿರೀಕ್ಷಿಸಬಹುದು’ ಎಂದು ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ರೈತ ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ರಸ ಹೀರುವ ಹುಳುವಿನ ಕಾಟ: ಈ ಮಧ್ಯೆ, ಒಂದು ತಿಂಗಳ ಗಿಡಗಳಿಗೆ ರಸ ಹೀರುವ ಕೀಟಗಳ ಬಾಧೆ ಅಲ್ಲಲ್ಲಿ ಕಂಡು ಬಂದಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಕೃಷಿ  ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕೀಟಗಳು ಗಿಡಗಳ ರಸ ಹೀರುವುದರಿಂದ ಎಲೆಯಲ್ಲಿ ಹಳದಿ ಬಣ್ಣದ ಚುಕ್ಕೆ ಕಾಣಿಸಿಕೊಳ್ಳುತ್ತವೆ ದಿನ ಕಳೆದಂತೆ ಎಲೆಗಳು ಸುಟ್ಟಂತೆ ಕಾಣಿಸಿಕೊಳ್ಳುತ್ತವೆ. 

‘ಅಲ್ಲಲ್ಲಿ ಕೀಟ ಬಾಧೆ ಬಂದಿರುವುದು ಗಮನಕ್ಕೆ ಬಂದಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಇವುಗಳ ನಿಯಂತ್ರಣಕ್ಕೆ ಇಮಿಡಾಕ್ಲೋರೈಡ್‌ 178 ಎಸ್‌.ಎಲ್‌ ಅನ್ನು ಪ್ರತಿ ಲೀಟರ್‌ ನೀರಿಗೆ 0.5 ಮಿ.ಮೀ ಲೀಟರ್‌ನಂತೆ ಬೆರೆಸಿ ಗಿಡಗಳಿಗೆ ಸಿಂಪಡಣೆ ಮಾಡಬೇಕು. ಇದಕ್ಕಾಗಿ ಪ್ರತಿ ಎಕರೆಗೆ 125 ಮಿ.ಮೀ ದ್ರಾವಣದ ಅಗತ್ಯವಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂದನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜಿಲ್ಲೆಯಲ್ಲಿ ಈ ಬಾರಿ ಸೂರ್ಯಕಾಂತಿ ಬಿತ್ತನೆ ಗುರಿ ಮೀರಿ ಸಾಧನೆಯಾಗಿದೆ. ಗಿಡಗಳು ಚೆನ್ನಾಗಿ ಬಂದಿವೆ. ಈವರೆಗೆ ಬೆಳೆಗೆ ಬೇಕಾದಷ್ಟು ಮಳೆಯಾಗಿದೆ. ಬಹುತೇಕ ಕಡೆಗಳಲ್ಲಿ ಬಿತ್ತನೆ ಮಾಡಿ 30ರಿಂದ 40 ದಿನಗಳಾಗಿವೆ. ಇನ್ನೂ ನೀರಿನ ಅಗತ್ಯವಿದೆ. ಸಮಯಕ್ಕೆ ಸರಿಯಾಗಿ ಮಳೆ ಬಂದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು. 

ಬೆಲೆ ಕಡಿಮೆ:

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಬೆಲೆ ಕಡಿಮೆಯಾಗಿದೆ. ಹೋದ ವರ್ಷ ಕ್ವಿಂಟಲ್‌ಗೆ ₹6,500ದಿಂದ ₹8000ದವರೆಗೆ ಇತ್ತು. ಈ ಬಾರಿ ₹6000ದಿಂದ ₹6,500 ವರೆಗೆ ಇದೆ. ಫಸಲು ಕೈ ಸೇರುವ ಸಮಯದಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ರೈತರು. 

ಚಾಮರಾಜನಗರ ತಾಲ್ಲೂಕಿನ ದೊಡ್ಡರಾಯಪೇಟೆ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಗಿಡಗಳು ಹುಲುಸಾಗಿ ಬೆಳೆದಿವೆ

‘ಕಳೆದ ವರ್ಷ ಸೂರ್ಯಕಾಂತಿ ಎಣ್ಣೆಯ ಬೆಲೆ ಹೆಚ್ಚಾಗಿತ್ತು. ಹಾಗಾಗಿ, ಸೂರ್ಯಕಾಂತಿ ಬೀಜಕ್ಕೂ ಬೆಲೆ ಜಾಸ್ತಿಯಾಗಿತ್ತು. ಈಗ ಎಣ್ಣೆಯ ಬೆಲೆ ಇಳಿಕೆಯಾಗಿರುವುದರಿಂದ, ಸೂರ್ಯಕಾಂತಿ ಬೆಲೆಯೂ ಕಡಿಮೆಯಾಗಿದೆ. ಈಗಿನ ಬೆಲೆಯೇ ಮುಂದುವರಿದರೆ ಮತ್ತು ಉತ್ತಮ ಇಳುವರಿ ಸಿಕ್ಕಿದರೆ ರೈತರಿಗೆ ನಷ್ಟವಾಗದು’ ಎಂದು ಹೇಳುತ್ತಾರೆ ಅಧಿಕಾರಿಗಳು. 

ಗುಂಡ್ಲುಪೇಟೆಯಲ್ಲಿ ಹೆಚ್ಚು ಬಿತ್ತನೆ ಅಲ್ಲಲ್ಲಿ ಕಂಡು ಬಂದ ಕೀಟ ಬಾಧೆ ಒಂದೆರಡು ಮಳೆಯಾದರೆ ಬೆಳೆಗೆ ಒಳ್ಳೆದು

ಅಂತರ ಬೆಳೆ ಬಿತ್ತನೆಗೆ ಸಲಹೆ

ಕೆಲವೇ ದಿನಗಳಲ್ಲಿ ರೈತರು ಎಣ್ಣೆಕಾಳುಗಳ ಬಿತ್ತನೆ ಆರಂಭಿಸಲಿದ್ದಾರೆ. ನೆಲ ಕಡಲೆ ಕೃಷಿಯನ್ನೂ ಶುರುಮಾಡಲಿದ್ದಾರೆ. ಉತ್ತಮ ಇಳುವರಿ ಪಡೆಯುವುದಕ್ಕಾಗಿ ಅಧಿಕಾರಿಗಳು ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.   ‘ಎಣ್ಣೆಕಾಳುಗಳಿಗೆ ಗಂಧಕದ ಪೋಷಕಾಂಶಗಳ ಅವಶ್ಯಕತೆ ಇದೆ. ಎಣ್ಣೆಕಾಳು ಬೆಳೆಯುವ ರೈತರು ಪ್ರತಿ ಎಕರೆಗೆ 2 ಕೆಜಿ ಜಿಪ್ಸಮ್‌ 5 ಕೆಜಿ ಜಿಂಕ್‌ ಸಲ್ಫೇಟ್‌ ಮತ್ತು 2 ಕೆಜಿ ಬೊರಾಕ್ಸ್‌ ಬಳಸಿದರೆ ಉತ್ತಮ ಇಳುವರಿ ಪಡೆಯಬಹುದು’  ಎಂದು ಜಂಟಿ ನಿರ್ದೇಶಕ ಮಧುಸೂದನ್‌ ಹೇಳಿದರು.  ‘ನೆಲಗಡಲೆ ಅಥವಾ ಮುಸುಕಿನ ಜೋಳ ಬಿತ್ತನೆ ಮಾಡುವಾಗ ರೈತರು ಮಿಶ್ರ ಬೆಳೆ ಅಥವಾ ಅಂತರ ಬೆಳೆಗಳನ್ನು ಬೆಳೆಯಬಹುದು. 6:2 8:2ರ ಅನುಪಾತದಂತೆ ತೊಗರಿ ಬಿತ್ತನೆ ಮಾಡಬಹುದು. ಅಥವಾ ಅಂತರ ಬೆಳೆಯಾಗಿ ಅವರೆ ಅ ಅಲಸಂದೆ ಮೇವಿನಜೋಳಗಳನ್ನೂ ಬೆಳೆಯಬಹುದು’ ಎಂದು ಸಲಹೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.