ADVERTISEMENT

ಚಾಮರಾಜನಗರ: ಮೂರನೇ ದಿನಕ್ಕೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 15:56 IST
Last Updated 15 ಸೆಪ್ಟೆಂಬರ್ 2021, 15:56 IST
ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಎದುರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು
ಬಣ್ಣಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಎದುರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರೈತ ಸಂಘಟನೆಗಳು ಹಾಗೂ ರೈತ ಮುಖಂಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರನ್ನು ರಾಜ್ಯದಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಮುಂದೆ ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನವಾದ ಬುಧವಾರವೂಮುಂದುವರೆಯಿತು.

ವರ್ಗಾವಣೆ ಸಂಬಂಧ ಆಡಳಿತ ಮಂಡಳಿ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದರಿಂದ ಹಾಗೂ ಜಿಲ್ಲಾಡಳಿತದಿಂದಲೂ ಈ ಬಗ್ಗೆ ಯಾವುದೇ ಕ್ರಮ ಆಗದಿರುವುದರಿಂದ ರೈತ ಸಂಘಟನೆಗಳ ಮುಖಂಡರು ಪ್ರತಿಭಟನೆಯನ್ನು ಮುಂದುವರೆಸಿದರು.

ಬುಧವಾರ ಸಂಜೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕಿದರು.

ADVERTISEMENT

‘ಆಗಸ್ಟ್‌ 10ರಂದು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 15 ದಿನಗಳ ಒಳಗಾಗಿ ಶರವಣ ಅವರನ್ನು ವರ್ಗಾವಣೆ ಮಾಡುವುದಾಗಿ ಕಾರ್ಖಾನೆಯ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಅವರಿಗೆ ಲಿಖಿತ ಹೇಳಿಕೆ ನೀಡಿತ್ತು. ಆ ಕಾರಣಕ್ಕಾಗಿ ನಾವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ. ವರ್ಗಾವಣೆ ಆಗುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದುಕಬ್ಬು ಬೆಳಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಮಹದೇವಸ್ವಾಮಿ, ಯಡಿಯೂರು ಮಹೇಶ್ ಪಟೇಲ್, ಶಿವಮೂರ್ತಿ, ಕುರುಬೂರು ಸಿದ್ದೇಶ್, ಮಂಜು, ಶಂಭು ದೇವನಪುರ, ನಂಜುಂಡಸ್ವಾಮಿ, ಬನ್ನೂರು ಕೃಷ್ಣಪ್ಪ, ಶಿವಕುಮಾರ್, ಗುರುಪ್ರಸಾದ್, ಅಜಿತ್, ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.