ಚಾಮರಾಜನಗರ: ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಗುರುವಾರ ಕರೆ ನೀಡಿದ್ದ ರೈಲು ತಡೆ ಚಳವಳಿ ಅಂಗವಾಗಿ ನಗರದಲ್ಲೂ ರೈತ ಸಂಘದ ಪದಾಧಿಕಾರಿಗಳು ರೈಲು ತಡೆಗೆ ಯತ್ನಿಸಿದರು.
ನಗರದ ರೈಲು ನಿಲ್ದಾಣದಲ್ಲಿ ಸೇರಿದ ರೈತ ಮುಖಂಡರು, ಕೇಂದ್ರ ಸರ್ಕಾರ, ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ರೈತರಿಗೆ ಮರಣಶಾಸನವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.
ನಂತರ ರೈಲು ನಿಲ್ದಾಣದಒಳಕ್ಕೆ ನುಗ್ಗಲು ಯತ್ನಿಸಿದರು. ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ಪ್ರವೇಶ ದ್ವಾರವನ್ನು ಮುಚ್ಚಿ ಒಳಗೆ ಹೋಗುವುದನ್ನು ತಡೆದರು.
ಪ್ರತಿಭಟನಕಾರರು ಬಲವಂತವಾಗಿ ಬಾಗಿಲನ್ನು ತೆರೆಯಲು ಯತ್ನಿಸಿದಾಗ, ಪೊಲೀಸರು ಅವರನ್ನು ವಶಕ್ಕೆ ಪಡೆದು, ಎತ್ತಿಕೊಂಡು ಹೊರಗೆ ಕರೆದೊಯ್ದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್, ಹೊನ್ನೂರು ಬಸವಣ್ಣ,ಹೆಗ್ಗೋಠಾರ ವಿಜಿ, ಗೂಳಿಪುರ ದೀಪು, ಹೆಗ್ಗವಾಡಿಪುರ ಮಹದೇವಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.