ಕೊಳ್ಳೇಗಾಲ: ‘ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ 21 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಂದಾಯವಾದ ಹಣ ದುರುಪಯೋಗವಾಗಿದ್ದು, ತಪ್ಪಿತಸ್ಥ 14 ಅಧಿಕಾರಿ ಮತ್ತು ನೌಕರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿ ನಗರಸಭೆ ಪೌರಾಯುಕ್ತ ಎ.ರಮೇಶ್ ಅವರು ಶುಕ್ರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ‘ಕೋಟ್ಯಂತರ ಹಣ ದುರುಪಯೋಗವಾಗಿದೆ’ ಎಂದು ದೂರಿನಲ್ಲಿದ್ದು, ನಿರ್ದಿಷ್ಟ ಮೊತ್ತವನ್ನು ಉಲ್ಲೇಖಿಸಿಲ್ಲ.
ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ಗಮಿತ ಯೋಜನಾ ನಿರ್ದೇಶಕ ಕೆ.ಸುರೇಶ್, ನಗರಸಭೆಯ ನಿವೃತ್ತ ಪೌರಾಯುಕ್ತ ನಾಗಶೆಟ್ಟಿ, ಹಿಂದಿನ ಪೌರಾಯುಕ್ತರಾದ ಡಿ.ಕೆ.ಲಿಂಗರಾಜು, ವಿಜಯ, ಹಿಂದಿನ ಎಇಇ ಅಲ್ತಾಫ್ ಅಹ್ಮದ್, ಹಾಲಿ ಲೆಕ್ಕಾಧೀಕ್ಷಕ ಹನುಮಂತರಾಜು, ಕಚೇರಿ ವ್ಯವಸ್ಥಾಪಕ ಲಿಂಗರಾಜು, ಹಿಂದಿನ ಸಹಾಯಕ ಎಂಜಿನಿಯರ್ ಸಿ.ಎಂ.ನಟರಾಜು, ಕಿರಿಯ ಎಂಜಿನಿಯರ್ ಸಿದ್ದಪ್ಪ, ಎಸ್‌ಡಿಎ ಜಯಚಿತ್ರ, ವಾಟರ್‌ಮನ್‌ಗಳಾದ ಮಲ್ಲಪ್ಪ, ಚಿಕ್ಕಸಿದ್ದಯ್ಯ, ನಾಗರಾಜು, ಸಾಗರ್ ಅವರ ವಿರುದ್ಧ ದೂರು ನೀಡಲಾಗಿದೆ.
ಶುದ್ಧ ಕುಡಿಯುವ ನೀರು ಘಟಕಗಳಿಂದ ನೀರು ಪಡೆದ ಬಳಿಕ ಗ್ರಾಹಕರು ಪಾವತಿಸಿದ ಹಣದ ದುರ್ಬಳಕೆ ಸಂಬಂಧ ನಗರಸಭೆ ಸದಸ್ಯೆ ಜಯಮರಿ ಅವರು ಪೌರಾಡಳಿತ ನಿರ್ದೇಶನಾಲಯ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದರು.
ಪ್ರಕರಣ ಸಂಬಂಧ, ಹಿಂದಿನ ಉಪ ವಿಭಾಗಾಧಿಕಾರಿ ಗೀತಾ ಹುಡೇದ (ಹಾಲಿ ಹೆಚ್ಚುವರಿ ಜಿಲ್ಲಾಧಿಕಾರಿ) ತನಿಖೆ ನಡೆಸಿ ಸೂಕ್ತ ಕ್ರಮಕ್ಕಾಗಿ 2022 ಡಿ.13 ರಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು, ನಗರಸಭೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ, ಸಿಬ್ಬಂದಿ ಸೇರಿ 14 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು. ಇಲಾಖಾ ತನಿಖೆ ಬಳಿಕ ಈಗ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.