ADVERTISEMENT

ನಕ್ಷತ್ರ ಆಮೆ ಮಾರಾಟಕ್ಕ ಯತ್ನ: ಐವರು ಪೊಲೀಸ್‌ ಬಲೆಗೆ

ಬಂಧಿತರು ಶಿವಮೊಗ್ಗ, ಕೊಡಗು ಹಾಗೂ ಬೆಂಗಳೂರಿನವರು, ಪ್ರಮುಖ ಆರೋಪಿ ಭೂಗತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 15:35 IST
Last Updated 27 ಆಗಸ್ಟ್ 2020, 15:35 IST
ಐವರು ಆರೋಪಿಗಳನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವುದು
ಐವರು ಆರೋಪಿಗಳನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿರುವುದು   

ಚಾಮರಾಜನಗರ: ನಕ್ಷತ್ರ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾರೆ.

ಶಿವಮೊಗ್ಗದ ಪೊಲೀಸರು, ಖರೀದಿದಾರರ ಸೋಗಿನಲ್ಲಿ ಆರೋಪಿಗಳನ್ನು ಚಾಮರಾಜನಗರಕ್ಕೆ ಬರುವಂತೆ ಮಾಡಿ ಸ್ಥಳೀಯ ಪೊಲೀಸರು ಹಾಗೂ ಪೊಲೀಸ್‌ ಇಲಾಖೆಯ ಅರಣ್ಯ ರಕ್ಷಣಾ ದಳದ ನೆರವಿನಿಂದ ಕಾರ್ಯಾಚರಣೆ ನಡೆಸಿ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದ ಸಮೀಪ ಐವರನ್ನು ಮಾಲು ಸಮೇತ ಬಂಧಿಸಲು ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಒಂದು ನಕ್ಷತ್ರ ಆಮೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಈ ಪ್ರಕರಣ ನಡೆದಿದೆ. ಬಂಧನದ ನಂತರ ಕೋವಿಡ್‌ ಪರೀಕ್ಷೆ ಮಾಡಿಸಿ, ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಲ್ಲಿ ಶಿವಮೊಗ್ಗ, ಕೊಡಗು ಜಿಲ್ಲೆ ಹಾಗೂ ಬೆಂಗಳೂರಿನವರು ಇದ್ದಾರೆ.

ADVERTISEMENT

ಬೆಂಗಳೂರು ಮಾಗಡಿಯ ರಾಜು ಎಂ. (35), ಕೊಡಗು ಜಿಲ್ಲೆಯ ಭಾಗಮಂಡಲದ ಪ್ರವೀಣ ಎನ್‌.ಬಿ (34), ಕುಶಾಲನಗರದ ವಿಶ್ವನಾಥ ಡಿ.ಪಿ (37), ಶಿವಮೊಗ್ಗ ಜೆ.ಸಿನಗರದ ಪ್ರಸನ್ನ ಕುಮಾರ ಪಿ. (29), ಶಿವಮೊಗ್ಗದ ಚಾಲುಕ್ಯನಗರದ ಲಜ್ಜಿ ಕುರಿಯನ್‌ (42) ಬಂಧಿತರು.

‘ಶಿವಮೊಗ್ಗದ ಚಾಲುಕ್ಯನಗರದ ಥಾಮಸ್‌ (35) ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ’ ಎಂದು ಬಿಆರ್‌ಟಿಯ ಚಾಮರಾಜನಗರ ವಲಯದ ವಲಯ ಅರಣ್ಯ ಅಧಿಕಾರಿ ಅಭಿಲಾಷ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿಗಳು ನಕ್ಷತ್ರ ಆಮೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಿವಮೊಗ್ಗ ಪೊಲೀಸರು, ಖರೀದಿದಾರರ ಸೋಗಿನಲ್ಲಿ ಆರೋಪಿಗಳಿಗೆ ಕರೆ ಮಾಡಿ ಚಾಮರಾಜನಗರಕ್ಕೆ ಬರುವುದಕ್ಕೆ ಹೇಳಿದ್ದರು. ಆರೋಪಿಗಳು ಬರುವುದಕ್ಕೆ ಮೊದಲೇ ಚಾಮರಾಜನಗರ ತಲುಪಿದ್ದ ಪೊಲೀಸರ ತಂಡ, ಸ್ಥಳೀಯ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರ ನೆರವು ಕೇಳಿದ್ದರು. ಅದರಂತೆ, ಬುಧವಾರ ಬೆಳಿಗ್ಗೆ ನಗರಕ್ಕೆ ಕಾರಿನಲ್ಲಿ ಬಂದಿದ್ದ ಆರೋಪಿಗಳು ನಕ್ಷತ್ರ ಆಮೆ ಸಹಿತ ಸಿಕ್ಕಿ ಬಿದ್ದರು’ ಎಂದು ಅವರು ಹೇಳಿದರು.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಬ್‌ನ್‌ಸ್ಪೆಕ್ಟರ್‌ ಪ್ರಸಾದ್‌ ಪಿ.ಎಂ., ಕಾನ್‌ಸ್ಟೆಬಲ್‌ಗಳಾದ ನಂದಕುಮಾರ್‌, ಚಿಕ್ಕಶಂಕರನಾಯಕ, ಬಂಗಾರು, ರಾಜಶೇಖರ್‌, ಮಲ್ಲೇಶನಾಯಕ, ರಾಜು, ಅರಣ್ಯ ಇಲಾಖೆಯ ಗಾರ್ಡ್‌ ಹೇಮಂತ್‌, ಉಪ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್‌ ಇತರರು ಕಾರ್ಯಾಚರಣೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.