ADVERTISEMENT

ಕಣ್ಮನ ತಣಿಸಿದ ಫಲಪುಷ್ಪ ಪ್ರದರ್ಶನ

ಸಚಿವ ಸುರೇಶ್ ಕುಮಾರ್‌ ಅವರಿಂದ ಚಾಲನೆ; ಸೆಲ್ಫಿಗೆ ಮುಂದಾದ ಜನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:00 IST
Last Updated 27 ಜನವರಿ 2020, 11:00 IST
ಹೂ ಅಲಂಕೃತ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮಂಟಪದ ಮುಂಭಾಗ ಚಿಣ್ಣರೊಂದಿಗೆ ಸೆಲ್ಫಿಗೆ ಮುಂದಾಗಿರುವುದು
ಹೂ ಅಲಂಕೃತ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮಂಟಪದ ಮುಂಭಾಗ ಚಿಣ್ಣರೊಂದಿಗೆ ಸೆಲ್ಫಿಗೆ ಮುಂದಾಗಿರುವುದು   

ಚಾಮರಾಜನಗರ: ಸೇವಂತಿ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ನಿರ್ಮಿಸಿದ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮಂಟಪ, ಕೆಳಗೆ ಶಿವಲಿಂಗ, ಎದುರಿಗೆ ನಂದಿಯನ್ನು ಕಂಡ ಜನ ಸೆಲ್ಫಿಗೆ ಮುಂದಾಗುತ್ತಿದ್ದರು.

ಸುಂದರ ಹೂವುಗಳಿಂದ ಅತ್ಯಾಕರ್ಷಕ ಆಕೃತಿಗಳನ್ನು ನಗರದ ಜಿಲ್ಲಾಡಳಿತ ಭವನದ ಮುಂಭಾಗ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಭಾನುವಾರ ಚಾಲನೆ ನೀಡಿದರು.

ಬಣ್ಣ ಬಣ್ಣದ ಹೂಗಳು ಹಾಗೂ ಫಲಗಳಿಂದ ಕಂಗೊಳಿಸುತ್ತಿದ್ದ ಫಲಪುಷ್ಪಪ್ರದರ್ಶನದ ಆರಂಭದಲ್ಲಿ ಸಾರ್ವಜನಿಕರಿಲ್ಲde ಬಿಕೋ ಎನ್ನುತ್ತಿತ್ತು. ಸಂಜೆ ವೇಳೆಗೆ ಜನರ ಆಗಮನ ಚುರುಕುಗೊಂಡಿತು.

ADVERTISEMENT

ಈಪ್ರದರ್ಶನದಲ್ಲಿ ಅತ್ಯಾಕರ್ಷಕವಾಗಿ ಹೂವಿನಿಂದ ತಯಾರಿಸಿದ ವಿವಿಧ ಮಾದರಿಗಳು, ಸಾವಯವ ಕೃಷಿ ಪದ್ಧತಿ ಅನುಸರಿಸಿ ಬೆಳೆದ ಬೆಳೆ, ಮರಳಿನಿಂದ ವಿನ್ಯಾಸಗೊಳಿಸಿದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರ, ಖಾದಿಯಿಂದ ತಯಾರಾದ ಬಟ್ಟೆಗಳು, ಮೀನುಗಾರಿಕೆ ಇಲಾಖೆಯಿಂದ ತಯಾರಿಸಿದ ಮೀನು ಹೊಂಡ ಗಮನ ಸೆಳೆದವು.

ಬಯೊಗ್ಯಾಸ್ ಮತ್ತು ಜೈವಿಕ ತಂತ್ರಜ್ಞಾನ, ಆರೋಗ್ಯ ವಸ್ತುಪ್ರದರ್ಶನ, ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಮಾಹಿತಿ, ಹನಿ ಹಾಗೂ ತುಂತುರು ನೀರಾವರಿ ಘಟಕ ಸೇರಿದಂತೆ 22ಕ್ಕೂ ಹೆಚ್ಚು ಮಳಿಗೆಗಳು ಸಾರ್ವಜನಿಕರಿಗೆ ಮಾಹಿತಿ ಒದಗಿಸಿದವು.

ರೈತರಿಗೆ ಅನುಕೂಲವಾಗುವಂತಹ ನೈಸರ್ಗಿಕ ಬೆಳೆಗಳ ಮಾಹಿತಿ, ಹಣ್ಣು ಮಾಗಿಸುವ ಘಟಕ, ಹಸಿರು ಮನೆ ಪರಿಣಾಮ, ಅನುಪಯುಕ್ತ ವಸ್ತುಗಳಿಂದ ಅಲಂಕಾರ, ಮನೆಯ ಕೈ ತೋಟ, ವರ್ಟಿಕಲ್‌ ಗಾರ್ಡನ್‌ ಎಲ್ಲರ ಮನ ಸೆಳೆದವು.

ಪೆಂಡಾಲ್‌ ಒಳಗೆ ಪೂರ್ಣ ಪ್ರಮಾಣದಲ್ಲಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳಿದ್ದವು. ಹೊರಾಂಗಣದಲ್ಲಿ ಆರೋಗ್ಯ, ರೇಷ್ಮೆ, ಕೈ ಮಗ್ಗ ಇಲಾಖೆ, ಮೀನುಗಾರಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಪಾಲನಾ ಇಲಾಖೆ ಸೇರಿದಂತೆ 22ಕ್ಕೂ ಹೆಚ್ಚು ಇಲಾಖೆಗಳು ಮಳಿಗೆ ತೆರೆದು ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿದವು.

ಮರಳು ಕಲಾಕೃತಿ: ಹೊರಗೆ ಸೆಲ್ಫಿ ಪಾಯಿಂಟ್‌ ಸಮೀಪವೇ ಮರಳಿನಿಂದ ರಚಿಸಲಾದ ಡಾ.ಬಿ.ಆರ್. ಅಂಬೇಡ್ಕರ್‌ ಭಾವಚಿತ್ರದ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮರಳಿನಿಂದಲೇ ಭಾವಚಿತ್ರ ರಚನೆ ಮಾಡಿದ್ದು ವಿಶೇಷವಾಗಿತ್ತು.

ಜವಳಿ ಮತ್ತು ಕೈಮಗ್ಗ ಇಲಾಖೆ ಸ್ವತಃ ತಯಾರಿಸಿದ ಕೈಮಗ್ಗದ ಬಟ್ಟೆಗಳ ಪ್ರದರ್ಶನ ಮಾರಾಟ ಹಾಗೂ ಕೈ ಮಗ್ಗ ಸಲಕರಣೆಯನ್ನು ಇರಿಸಿತ್ತು. ಸಮೀಪದಲ್ಲೇ ಬಯೋಫ್ಲಾಕ್‌ ಮೀನು ಸಾಕಾಣಿಕೆ ಪದ್ಧತಿಯ ಮಾದರಿ ಇಡಲಾಗಿತ್ತು.

ರಮ್ಯ ಹಾಗೂ ರಮೇಶ್‌ಎಂಬುವವರು ನಿರ್ಮಿಸಿದ್ದ ಹೂವುಗಳ ಅಲಂಕಾರ ಎಲ್ಲರಕಣ್ಣಿಗೆಆಹ್ಲಾದಕರ ಉಂಟು ಮಾಡಿತು. ಹಣ್ಣು ಹಾಗೂ ತರಕಾರಿಗಳಿಂದ ನಿರ್ಮಿಸಿದ ಪ್ರತಿಕೃತಿಗಳು ಮನಸ್ಸಿಗೆ ಮುದ ನೀಡಿದವು.

ಅತ್ಯಾಕರ್ಷಕ ಸೆಲ್ಫಿಪಾಯಿಂಟ್‌

ಯುವಜನರನ್ನು ಆಕರ್ಷಿಸಲು ಈ ಬಾರಿಯೂ ಹೂವುಗಳಿಂದ ನಿರ್ಮಿಸಿರುವ ಸೆಲ್ಪಿ ಪಾಯಿಂಟ್ ಪ್ರಮುಖ ಆಕರ್ಷಣೆಯಾಗಿತ್ತು. ಇಕೆಬಾನ ಹೂವಿನ ಅಲಂಕಾರ ಹಾಗೂ ನೀರಿನ ಕಾರಂಜಿಗಳನ್ನು ನಿರ್ಮಾಣ ಮಾಡಿರುವುದು ನೋಡುಗರ ಮನೋಲ್ಲಾಸಕ್ಕೆ ಕಾರಣವಾಯಿತು. ಇದರ ನಡುವೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಇನ್ನೆರಡು ದಿನ ಪ್ರದರ್ಶನ: ಸೋಮವಾರ ಮತ್ತು ಮಂಗಳವಾರ ಫಲಪುಷ್ಪ ಪ್ರದರ್ಶನ ಮುಂದುವರಿಯಲಿದೆ. ಭಾನುವಾರ ರಜೆಯಾದ್ದರಿಂದ ಸಾರ್ವಜನಿಕರು ವಿರಳ. ಸೋಮವಾರದಿಂದ ಹೆಚ್ಚು ಜನರು ಬರಲಿದ್ದಾರೆ.

ರೈತರಿಗೆ ಮಾಹಿತಿ ನೀಡಬೇಕು: ‘ತೋಟಗಾರಿಕೆ ಇಲಾಖೆ ರೈತರಿಗೆ ಈ ಬಗ್ಗೆ ಹೆಚ್ಚಿನಂಆಹಿತಿ ನೀಡಬೇಕು. ಪತ್ರಿಕಾ ಪ್ರಕಟಣೆಗಳನ್ನು ಅನೇಕ ರೈತರು ನೋಡುವುದಿಲ್ಲ. ಸಂಬಂಧಪಟ್ಟವರ ಮೂಲಕ ರೈತರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ಹೇಳಿದರು.

ತೋಟಗಾರಿಕೆ ಕೈಪಿಡಿ ಬಿಡುಗಡೆ

‘ರೇಷ್ಮೆ ಹುಳುವಿನ ಸಾಕಾಣಿಕೆಯ ಬಗ್ಗೆ ಜಿಲ್ಲೆಯ ಜನರಿಗೆ ವೈಜ್ಞಾನಿಕವಾಗಿ ಅರಿವು ಮೂಡಿಸಬೇಕು. ರೇಷ್ಮೆ ಉತ್ಪಾದನೆಯಲ್ಲಿ ಜಿಲ್ಲೆಯ ಕೊಡುಗೆ ಕೂಡಸಾಕಷ್ಟಿದೆ. ಹೀಗಾಗಿ, ರೇಷ್ಮೆ ಮೊಟ್ಟೆಯನ್ನು ರೈತರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವ ಕಾರ್ಯವಾಗಬೇಕು. ಅದರ ಪೋಷಣೆಯ ಬಗ್ಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಬೇಕು’ ಎಂದು ಫಲಪುಷ್ಪಪ್ರದರ್ಶನದಲ್ಲಿ ರೇಷ್ಮೆ ಇಲಾಖೆಯ ಹೊಸತಳಿ ಹಿಪ್ಪು ನೇರಳೆ ಬೆಳೆಯುವ ಘಟಕವನ್ನು ಸುರೇಶ್‌ ಕುಮಾರ್‌ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ವಾರ್ಷಿಕ ಯೋಜನೆಯ ಕೈಪಿಡಿಯನ್ನು ಗಣ್ಯರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.