ADVERTISEMENT

ಚಾಮರಾಜನಗರ: ಗೊರವರ ಶಿವಮಲ್ಲೇಗೌಡರಿಗೆ ಅಕಾಡೆಮಿ ಗರಿ

2021ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ

ಸೂರ್ಯನಾರಾಯಣ ವಿ
Published 21 ಜನವರಿ 2022, 19:30 IST
Last Updated 21 ಜನವರಿ 2022, 19:30 IST
ಆರ್‌.ಎಂ.ಶಿವಮಲ್ಲೇಗೌಡ
ಆರ್‌.ಎಂ.ಶಿವಮಲ್ಲೇಗೌಡ   

ಚಾಮರಾಜನಗರ: ಗೊರವರ ಕುಣಿತದ ಕಲಾವಿದ, ಸಮೀಪದ ರಾಮಸಮುದ್ರದ ನಿವಾಸಿ ಆರ್‌.ಎಂ.ಶಿವಮಲ್ಲೇಗೌಡ ಅವರು 2021ನೇ ಸಾಲಿನ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಪ್ರಸಿದ್ಧ ಜಾನಪದ ಕಲಾ ಪ್ರಕಾರಗಳಲ್ಲಿ ಒಂದಾಗಿರುವ ಗೊರವರ ಕುಣಿತದ ಮೇರು ಕಲಾವಿದರಾಗಿದ್ದ ಪುಟ್ಟಮಲ್ಲೇಗೌಡರ ಶಿಷ್ಯರಾಗಿರುವ ಶಿವಮಲ್ಲೇಗೌಡ ಅವರಿಗೆ ಈಗ 65ರ ಹರೆಯ.

ಪರಂಪರೆಯಿಂದ ಬಂದ ಕಲೆಯನ್ನು ಬಿಡದ ಶಿವಮಲ್ಲೇಗೌಡ ಅವರು ಸಣ್ಣವಯಸ್ಸಿಗೇ ಗೊರವರ ವೇಷ ಹಾಕಿ ಹೆಜ್ಜೆ ಹಾಕಿದವರು. ಅಜ್ಜ ಗಿರಿಮಲ್ಲೇಗೌಡ, ತಂದೆ ಮಲ್ಲೇಗೌಡರಿಂದ ಬಳುವಳಿಯಾಗಿ ಬಂದಿರುವ ಕಲೆಯನ್ನು 50 ವರ್ಷಗಳಿಂದ ಪ್ರದರ್ಶಿಸುತ್ತಾ ಬಂದಿರುವ ಶಿವಮಲ್ಲೇಗೌಡರು ಮಗ ಮಂಜು ಅವರಿಗೂ ಗೊರವರ ಕುಣಿತದ ಜ್ಞಾನವನ್ನು ಧಾರೆ ಎರೆದಿದ್ದಾರೆ.

ADVERTISEMENT

ಬಾಲ್ಯದಿಂದಲೇ ಆಸಕ್ತಿ: ಅಜ್ಜ, ತಂದೆ ಎಲ್ಲರೂ ಕಲೆಯಲ್ಲಿ ತೊಡಗಿದ್ದರಿಂದ ಗೊರವರ ಕುಣಿತದ ಕಡೆಗೆ ಮಲ್ಲೇಗೌಡರಿಗೆ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆದಿತ್ತು. ಗೊರವರ ಕುಣಿತದ ಗಾರುಡಿಗ ಪುಟ್ಟಮಲ್ಲೇಗೌಡರು ಆಸಕ್ತಿಗೆ ನೀರೆರೆದು ಶಿವಮಲ್ಲೇಗೌಡರನ್ನು ಉತ್ತಮ ಕಲಾವಿದರನ್ನಾಗಿ ಮಾಡಿದರು.

’ಪುಟ್ಟಮಲ್ಲೇಗೌಡರು ನನ್ನ ಗುರು. ಅವರ ಮಾರ್ಗದರ್ಶನದಲ್ಲಿ ಪಳಗಿ ಗೊರವರ ಕುಣಿತದ ಕಲಾವಿದನಾಗಿ ರೂಪುಗೊಂಡಿದ್ದೇನೆ‘ ಎಂದು ಹೆಮ್ಮೆಯಿಂದ ಹೇಳುತ್ತಾರೆ ಶಿವಮಲ್ಲೇಗೌಡರು.

ಸ್ವಂತ ತಂಡ: ತಾವು ಕಲಿತ ವಿದ್ಯೆಯನ್ನು ಹಲವರಿಗೆ ಹೇಳಿಕೊಟ್ಟಿರುವ ಅವರು ತಮ್ಮದೇ ತಂಡವೊಂದನ್ನು ಕಟ್ಟಿಕೊಂಡಿದ್ದಾರೆ. ಶ್ರೀ ಭಕ್ತ ಕನಕದಾಸ ಗೊರವರ ಕುಣಿತ ಕಲಾ ಸಂಘದ ಅಧ್ಯಕ್ಷರಾಗಿ ತಮ್ಮ ತಂಡದ ಮೂಲಕ ವಿವಿಧ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.

’ನನ್ನ ತಂಡದಲ್ಲಿ 15 ಜನರಿದ್ದಾರೆ. ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡುತ್ತಾ ಕಲಾ ಸೇವೆಯನ್ನು ಮಾಡುತ್ತಾ ಇದ್ದೇನೆ‘ ಎಂದು ಶಿವಮಲ್ಲೇಗೌಡ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ರಾಜ್ಯ ಮಾತ್ರವಲ್ಲದೇ ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಅಂಡಮಾನ್‌– ನಿಕೋಬಾರ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆಯನ್ನೂ ಗಳಿಸಿದ್ದಾರೆ.

ಜಾನಪದ ಕಲಾ ಲೋಕ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿವೆ.

’ಗುರುತಿಸಿರುವುದಕ್ಕೆ ಖುಷಿಯಾಗಿದೆ‘

ಕಲಾ ಸೇವೆಯ ಹಾದಿಯಲ್ಲಿಪತ್ನಿ ಚಿಕ್ಕತಾಯಮ್ಮ, ಮಗ ಮಂಜು ಹಾಗೂ ಮಗಳು ಭಾಗ್ಯಲಕ್ಷ್ಮಿ ಅವರ ಸಹಕಾರವನ್ನು ನೆನೆಯುವ ಶಿವಮಲ್ಲೇಗೌಡರು ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

’ಐದು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಕಲಾ ಸೇವೆ ಮಾಡುತ್ತಿದ್ದೇನೆ. ಸರ್ಕಾರ ನನ್ನನ್ನು ಗುರುತಿಸಿರುವುದಕ್ಕೆ ಖುಷಿಯಾಗಿದೆ. ಜಿಲ್ಲೆಯವರೇ ಆದ, ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಅವರು ನನಗೆ ಸದಾ ಬೆಂಬಲ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ನೆನೆಸಿಕೊಳ್ಳಬೇಕು‘ ಎಂದು ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

’ಗೊರವರ ಕುಣಿತದಲ್ಲಿ ಆಸಕ್ತಿ ಇರುವವರಿಗೆ ಹೇಳಿಕೊಡಲು ಉತ್ಸುಕನಾಗಿದ್ದೇನೆ. ನಮ್ಮ ಮಗನಿಗೆ ತರಬೇತಿ ನೀಡಿದ್ದೇನೆ. ಅವನು ಕಲಾವಿದನಾಗಿ ರೂಪುಗೊಂಡಿದ್ದಾನೆ. ನಮ್ಮ ಜಿಲ್ಲೆಯ ಗುರುತಾದ ಗೊರವರ ಕುಣಿತ ಇನ್ನಷ್ಟು ಬೆಳೆಯಬೇಕು, ಬೆಳಗಬೇಕು‘ ಎಂದು ಅವರು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.