ಗುಂಡ್ಲುಪೇಟೆ: ‘ಜಾನುವಾರು ಕಾಲುಬಾಯಿ ಮತ್ತು ಚರ್ಮಗಂಟು ರೋಗ ಮುಕ್ತ ಮಾಡಲು ರೈತರು ಸಹಕರಿಸಬೇಕು’ ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 7ನೇ ಸುತ್ತಿನ ಕಾಲುಬಾಯಿ ಮತ್ತು ಚರ್ಮಗಂಟು ರೋಗ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ವಿದ್ಯುಕ್ತವಾಗಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜೂ.9ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ರೈತರಿಗೆ ಆರ್ಥಿಕ ಸಂಕಷ್ಟ ಉಂಟು ಮಾಡುವ ಕಾಲುಬಾಯಿ ರೋಗದಿಂದ ರಾಜ್ಯವನ್ನು ಮುಕ್ತ ಮಾಡುವ ಉದ್ದೇಶದಿಂದ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮಗಳಿಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ. ಇವರಿಗೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ಅಂಟು ರೋಗವಾಗಿದೆ. ಇದನ್ನು ನಿಯಂತ್ರಿಸಲು ಲಸಿಕೆ ಹಾಕುವುದೇ ಏಕೈಕ ಮಾರ್ಗ. ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವುದರಿಂದ ರೋಗ ತಡೆಗಟ್ಟಬಹುದು. ಹಾಗಾಗಿ ರೈತರು ತಪ್ಪದೇ ಅಭಿಯಾನದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್ ಮಾತನಾಡಿ, ‘ಜಾನುವಾರುಗಳ ಕಾಲುಬಾಯಿ ಮತ್ತು ಚರ್ಮ ರೋಗದಿಂದ ರಕ್ಷಣೆ ಮಾಡುವ ದೃಷ್ಟಿಯಿಂದ ತಾಲ್ಲುಕು ಪಶುವೈದ್ಯಕೀಯ ಇಲಾಖೆ 16 ತಂಡಗಳನ್ನು ರಚನೆ ಮಾಡಿದ್ದು, ಇದರಲ್ಲಿ ಪಶು ವೈದ್ಯ, ಪಶುಸಖಿಗಳು ಸೇರಿದಂತೆ ಇಲಾಖೆ ಸಿಬ್ಬಂದಿಗಳು ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುತ್ತಾರೆ. ಕಾಲುಬಾಯಿ ಮತ್ತು ಚರ್ಮಗಂಟು ರೋಗಕ್ಕೆ ಪ್ರಾಯೋಗಿಕವಾಗಿ ಎರಡು ಲಸಿಕೆ ನೀಡುವುದು ಇಲಾಖೆ ತೀರ್ಮಾನವಾಗಿದೆ. ಅದರಂತೆ ಕಾರ್ಯಕ್ರಮ ನಿಗದಿಪಡಿಸಿಕೊಂಡು ಲಸಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಶಾಸಕ ಎಚ್.ಎಂ.ಗಣೇಶಪ್ರಸಾದ್ ಕಾಲುಬಾಯಿ ಮತ್ತು ಚರ್ಮಗಂಟು ರೋಗ ನಿಯಂತ್ರಣ ಪೋಸ್ಟರ್ ಬಿಡುಗಡೆಗೊಳಿಸಿದರು.
ಪುರಸಭಾ ಅಧ್ಯಕ್ಷ ಮಧುಸೂದನ್, ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಮುಖಂಡರಾದ ನೀಲಕಂಠಪ್ಪ, ಹೊಸೂರು ಬಸವರಾಜು, ಡಾ.ನಾಗೇಂದ್ರಪ್ರಸಾದ್, ಚಂದ್ರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.