ADVERTISEMENT

ಬಿಳಿಗಿರಿರಂಗನಬೆಟ್ಟ: ಮತ್ತೆ 12 ಜನರಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:32 IST
Last Updated 7 ಏಪ್ರಿಲ್ 2021, 16:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 42 ಮಂದಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ. ನಾಲ್ವರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 142ಕ್ಕೆ ಏರಿದೆ.

ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸೇರಿದಂತೆ 12 ಮಂದಿ ಸಿಬ್ಬಂದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಮಂಗಳವಾರ ಒಬ್ಬ ಅರ್ಚ‌ಕ ಹಾಗೂ ಅವರ ಕುಟುಂಬದ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಪ್ರಧಾನ ಅರ್ಚಕರಿಗೇ ಕೋವಿಡ್‌ ಆಗಿರುವುದರಿಂದ ಗುರುವಾರದಿಂದ ರಂಗನಾಥಸ್ವಾಮಿಯ ಪೂಜೆ ಮಾಡುವುದು ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಇನ್ನೂ ಐವತ್ತು ಜನರ ಕೋವಿಡ್‌ ಪರೀಕ್ಷಾ ವರದಿ ಬರಲು ಬಾಕಿ ಇದ್ದು, ಇನ್ನಷ್ಟು ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಪ್ರಕರಣಗಳ ಸಂಖ್ಯೆ 7,194ಕ್ಕೆ ಹೆಚ್ಚಾಗಿದೆ. 6,920 ಮಂದಿ ಗುಣಮುಖರಾಗಿದ್ದಾರೆ. 142 ಸಕ್ರಿಯ ಪ್ರಕರಣಗಳ ಪೈಕಿ 81 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಐವರು ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಬುಧವಾರ 1194 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 1,147 ಮಂದಿಯ ವರದಿ ನೆಗಟಿವ್‌ ಬಂದಿವೆ. ಜಿಲ್ಲೆಯಲ್ಲಿ 37 ಮಂದಿಗೆ ಸೋಂಕು ಖಚಿತವಾದರೆ, ಉಳಿದ ಐದು ಪ್ರಕರಣಗಳು ಮೈಸೂರಿನಲ್ಲಿ ದೃಢಪಟ್ಟಿವೆ.

ಸೋಂಕಿತರ ಪೈಕಿ ಚಾಮರಾಜನಗರ ತಾಲ್ಲೂಕಿನ 21 ಮಂದಿ ಇದ್ದಾರೆ. ಕೊಳ್ಳೇಗಾಲ ತಾಲ್ಲೂಕಿನ ಏಳು, ಹನೂರು ಮತ್ತು ಯಳಂದೂರಿನ ತಲಾ ಐವರು ಹಾಗೂ ಗುಂಡ್ಲುಪೇಟೆಯ ನಾಲ್ವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.