ADVERTISEMENT

ಎಲ್ಲ ವಾಹನಗಳಿಗೂ ಪೆಟ್ರೋಲ್‌, ಡೀಸೆಲ್‌: ಆದೇಶ

ತುರ್ತು, ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಇಂಧನ: ಅಧಿಕಾರದ ವ್ಯಾಪ್ತಿ ಮೀರಿದರೇ ಪೋಲೀಸರು?

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:02 IST
Last Updated 31 ಮಾರ್ಚ್ 2020, 15:02 IST
ಚಾಮರಾಜನಗರದ ಪೆಟ್ರೋಲ್‌ ಪಂಪ್‌ವೊಂದರಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ ದ್ವಿಚಕ್ರವಾಹನಗಳು
ಚಾಮರಾಜನಗರದ ಪೆಟ್ರೋಲ್‌ ಪಂಪ್‌ವೊಂದರಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ ದ್ವಿಚಕ್ರವಾಹನಗಳು   

ಚಾಮರಾಜನಗರ: ದಿಗ್ಬಂಧನದ ಸಂದರ್ಭದಲ್ಲಿ ಅನಗತ್ಯವಾಗಿ ಜನರು ವಾಹನಗಳಲ್ಲಿ ಓಡಾಡುವುದನ್ನು ತಪ್ಪಿಸುವ ಉದ್ದೇಶದಿಂದ, ತುರ್ತು, ಅಗತ್ಯ ಸೇವೆಗಳ ಹಾಗೂ ಸರಕು ವಾಹನಗಳಿಗೆ ಮಾತ್ರ ಪೆಟ್ರೋಲ್‌, ಡೀಸೆಲ್‌ ಪೂರೈಸಬೇಕು ಎಂದು ಪೊಲೀಸರು ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಸೂಚನೆ ನೀಡಿದ ಬೆನ್ನಲ್ಲೇ, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಮಂಗಳವಾರ ಹೊಸ ಆದೇಶ ಹೊರಡಿಸಿದ್ದು, ಎಲ್ಲ ವಾಹನಗಳಿಗೂ ಪೂರೈಸಬೇಕು ಎಂದು ಸೂಚಿಸಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ–1995ರ ಅಡಿಯಲ್ಲಿ ಬರುತ್ತಿದ್ದು, ಅದರ ಅಭಾವ ಉಂಟಾಗದಂತೆ ಜನರಿಗೆ ಪೂರೈಸಬೇಕಾದ ಅಗತ್ಯವಿದೆ. ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಡೀಸೆಲ್‌ ಮತ್ತು ಪೆಟ್ರೋಲ್‌ ಅನ್ನು ಎಲ್ಲ ವಾಹನಗಳಿಗೆ ನೀಡಬೇಕು. ಇದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್‌ ಬಂಕ್‌ ಮಾಲೀಕರು ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಉಂಟು ಮಾಡಿದಲ್ಲಿ ನಿಯಮಗಳ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಅವರು‌ಎಚ್ಚರಿಸಿದ್ದಾರೆ.

ADVERTISEMENT

ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೆಟ್ರೋಲ್‌ ಬಂಕ್‌ಗಳನ್ನು ಬೆಳಿಗ್ಗೆಯಿಂದ ರಾತ್ರಿವರೆಗೂ ತೆರೆದಿರಬೇಕು ಎಂದುಅವರು ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೈತರು ಈ ವಿಚಾರವನ್ನು ಅವರ ಗಮನಕ್ಕೆ ತಂದಿದ್ದರು. ಪೆಟ್ರೋಲ್‌ ಸಿಗದಿದ್ದರೆ ತೊಂದರೆಯಾಗುತ್ತದೆ ಎಂದೂ ಅಳಲು ತೋಡಿಕೊಂಡಿದ್ದರು.

ಪೊಲೀಸರು ಆದೇಶ ಹೊರಡಿಸುವಂತಿಲ್ಲ

ಇಂಧನವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಪೆಟ್ರೋಲ್‌ ಬಂಕ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುತ್ತಿದ್ದರೂ ಜಿಲ್ಲಾಧಿಕಾರಿಯವರೇ ಮಾಡಬೇಕು. ಪೊಲೀಸರು ಸೇರಿದಂತೆ ಯಾರೂ ಈ ಬಗ್ಗೆ ಆದೇಶ ಹೊರಡಿಸಲು ಅಧಿಕಾರ ಇಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಜನರು ಅನಗತ್ಯವಾಗಿ ವಾಹನಗಳನ್ನು ಬಳಸುವುದಕ್ಕೆ ನಿಯಂತ್ರಣ ಹೇರುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ತಮ್ಮ ಠಾಣಾ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳ ಮಾಲೀಕರಿಗೆ, ಅಗತ್ಯ ಸೇವೆ ತುರ್ತು ಹಾಗೂ ಸರಕು ಸಾಗಣೆಯ ವಾಹನಗಳಿಗೆ ಮಾತ್ರ ಇಂಧನ ತುಂಬಿಸಬೇಕು. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ ನೀಡಿದ್ದರು.

ಅದರಂತೆ, ಸೋಮವಾರದಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಎಲ್ಲರಿಗೂ ಇಂಧನ ಸಿಗುತ್ತಿರಲಿಲ್ಲ. ಮಂಗಳವಾರವೂ ಬೆಳಿಗ್ಗೆ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.