ADVERTISEMENT

ಹಂಗಳ: ಹೆಸರಿಗಷ್ಟೇ ಗಾಂಧಿಗ್ರಾಮ

ಸ್ವಚ್ಛತೆ ಮಾಯ, ಬಗೆಹರಿಯದ ಕುಡಿಯುವ ನೀರು, ಶೌಚಾಲಯ ಸಮಸ್ಯೆ

ಮಲ್ಲೇಶ ಎಂ.
Published 13 ಡಿಸೆಂಬರ್ 2019, 19:45 IST
Last Updated 13 ಡಿಸೆಂಬರ್ 2019, 19:45 IST
ಹಂಗಳದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಂಡು ಬರುವ ಕಸದ ರಾಶಿ
ಹಂಗಳದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಂಡು ಬರುವ ಕಸದ ರಾಶಿ   

ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮ ಪಂಚಾಯತಿಯು ಮೂರು ಬಾರಿ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆದರೆ, ಸಮಸ್ಯೆಗಳಿಗೇನೂ ಕೊರತೆ ಇಲ್ಲ. ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಕಾಣುತ್ತವೆ. ಹಾಗಿದ್ದರೂ ಯಾವ ಆಧಾರದಲ್ಲಿ ಪಂಚಾಯಿತಿಗೆ ಪ್ರಶಸ್ತಿ ಸಿಕ್ಕಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ.

ಗ್ರಾಮದಲ್ಲಿ ಕಸದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯದ ಸಮಸ್ಯೆಗಳಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನರು ಇದ್ದಾರೆ. ಎಲ್ಲ ಜನಾಂಗದವರೂ ಇಲ್ಲಿ ಇದ್ದಾರೆ. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಉಳಿದವರ ಸಂಖ್ಯೆ ಕಡಿಮೆ ಇದೆ.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರವೇಶಿಸುತ್ತಿದ್ದಂತೆಯೇ ಜನರನ್ನು ಕಸ ಸ್ವಾಗತಿಸುತ್ತದೆ.ರಸ್ತೆ ಬದಿಯಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದರೂ ಅದನ್ನು ಸ್ವಚ್ಛ ಮಾಡಿಸುವ ಗೋಜಿಗೆ ಗ್ರಾಮ ಪಂಚಾಯಿತಿ ಹೋಗಿಲ್ಲ.

ಪರಿಶಿಷ್ಟ ಜಾತಿ ಮತ್ತು ವರ್ಗದವರು ವಾಸಿಸುತ್ತಿರುವ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇತ್ತೀಚೆಗೆ ಬಡಾವಣೆಗಳ ಮಹಿಳೆಯರು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ನೀರು ಬಿಡಿಸಿಕೊಂಡಿದ್ದಾರೆ.

‘ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಕೆಲವೊಂದು ಬಡಾವಣೆಗಳಲ್ಲಿ ಮಾತ್ರ ಬಹುಗ್ರಾಮ ಕುಡಿಯುವ ಯೋಜನೆಯ ಸಂಪರ್ಕ ಇದೆ. ಬಡಾವಣೆಗಳ ಜನರಿಗೆ ಕೊಳವೆಬಾವಿಗಳಿಂದ ನೀರು ಬಿಡಲಾಗುತ್ತಿದೆ’ ಎಂದು ಸ್ಥಳೀಯ‌ ನಿವಾಸಿ ಸಿದ್ದರಾಜು ಆರೋಪಿಸಿದರು.

ಸರ್ಕಾರಿ ದಾಖಲೆ ಪ್ರಕಾರ ಹಂಗಳ ಬಯಲು ಶೌಚ ಮುಕ್ತ ಗ್ರಾಮ. ಆದರೆ,ಅನೇಕ ಕುಟುಂಬಗಳು ಇನ್ನೂ ಶೌಚಾಲಯ ಹೊಂದಿಲ್ಲ. ಹಾಗಾಗಿ ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿವೆ.

ಬೆಳಿಗ್ಗೆಯೇ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುತ್ತದೆ. ಮದ್ಯದಂಗಡಿಗಳ ವಿರುದ್ಧ ಮಹಿಳೆಯರು ಹೋರಾಟ ಮಾಡಿದ ನಿದರ್ಶನಗಳೂ ಇವೆ. ಹಾಗಿದ್ದರೂ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ.

‘ಅನೇಕರು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಪೊಲೀಸರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ಇಲ್ಲದಂತಾಗಿದೆ. ಸಂಜೆಯಾಗುತ್ತಿದ್ದಂತೆ ಸಿಬ್ಬಂದಿ ಮನೆಗೆ ತೆರಳುತ್ತಾರೆ. ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯೇ ಗತಿ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಗ್ರಾಮದಲ್ಲಿ ಮೂಲಸೌಕರ್ಯ ಇಲ್ಲ, ಬಸ್ ನಿಲ್ದಾಣ, ಪೊಲೀಸ್ ಠಾಣೆ ಸೇರಿದಂತೆ ಅವಶ್ಯವಾಗಿ ಬೇಕಾಗಿರುವ ಸೌ‌ಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ವಕೀಲ ರಾಜೇಶ್ ಒತ್ತಾಯಿಸುತ್ತಾರೆ.

ಸೂಚನೆ ನೀಡಲಾಗಿದೆ: ಶಾಸಕ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು, ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಈಗಾಗಲೇ ಜನಸಂಪರ್ಕ ಸಭೆ ನಡೆಸಿದ್ದೇನೆ. ನೀರಿನ ಸಮಸ್ಯೆ ತಕ್ಷಣ ಸರಿಪಡಿಸುವಂತೆ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.