ADVERTISEMENT

ಅರಕಲವಾಡಿ ಕೆರೆ: ಸುತ್ತೂರು ಶ್ರೀಗಳಿಂದ ಗಂಗಾ ಪೂಜೆ

ಆಲಂಬೂರು ನಾಲ್ಕನೇ ಹಂತದ ಯೋಜನೆಯಲ್ಲಿ ಕೆರೆಗೆ ಹರಿದ ನೀರು

​ಪ್ರಜಾವಾಣಿ ವಾರ್ತೆ
Published 9 ಮೇ 2022, 16:10 IST
Last Updated 9 ಮೇ 2022, 16:10 IST
ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಅವರು ಅರಕಲವಾಡಿಕೆರೆಗೆ ಸೋಮವಾರ ಬಾಗಿನ ಅರ್ಪಿಸಿದರು. ಸೋಮಹಳ್ಳಿ ಮಠದ ಶ್ರೀಗಳು, ಕಾಳನಹುಂಡಿ ಗುರುಸ್ವಾಮಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ನಾಗಶ್ರೀ ಪ್ರತಾಪ್‌ ಇತರರು ಇದ್ದರು
ಸುತ್ತೂರು ಮಠದ ಶಿವರಾತ್ರಿದೇಶೀಕೇಂದ್ರ ಸ್ವಾಮೀಜಿ ಅವರು ಅರಕಲವಾಡಿಕೆರೆಗೆ ಸೋಮವಾರ ಬಾಗಿನ ಅರ್ಪಿಸಿದರು. ಸೋಮಹಳ್ಳಿ ಮಠದ ಶ್ರೀಗಳು, ಕಾಳನಹುಂಡಿ ಗುರುಸ್ವಾಮಿ, ಶಾಸಕ ಸಿ.ಪುಟ್ಟರಂಗಶೆಟ್ಟಿ, ನಾಗಶ್ರೀ ಪ್ರತಾಪ್‌ ಇತರರು ಇದ್ದರು   

ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಕೆರೆಗೆ ಕಬಿನಿ 4ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿಯಲ್ಲಿ ನಂಜನಗೂಡಿನ ಆಲಂಬೂರಿನಿಂದ ನೀರು ಹರಿದು ಬರುತ್ತಿದ್ದು, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಕೆರೆಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮ ನೆರವೇರಿತು.

ಅರಕಲವಾಡಿ, ಯಾನಗಳ್ಳಿಯ ಸುವರ್ಣ ನಗರ ಕೆರೆ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಒಂಬತ್ತು ಸೇರಿದಂತೆ 11 ಕೆರೆಗಳಿಗೆ ಆಲಂಬೂರು ಏತ ನೀರಾವರಿ ಯೋಜನೆಯ 4ನೇ ಹಂತದಲ್ಲಿ ನೀರು ಹರಿಸಲಾಗುತ್ತಿದೆ. ಗುಂಡ್ಲುಪೇಟೆಯ ಕೆರೆಗಳಿಗೆ ಈಗಾಗಲೇ ನೀರು ಹರಿದಿದ್ದು, ಅರಕಲವಾಡಿ ಹಾಗೂ ಸುವರ್ಣನಗರ ಕೆರೆಗಳಿಗೆ ನೀರು ಬರುವುದು ವಿಳಂಬವಾಗಿತ್ತು.

ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿ ಮಾತನಾಡಿದ ಸುತ್ತೂರು ಶ್ರೀಗಳು, ‘ಕೆರೆಗೆ ನೀರು ತುಂಬಿಸಿರುವುದರಿಂದ ಅರಕಲವಾಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಕುಡಿಯುವ ನೀರಿನ ಉದ್ದೇಶದಿಂದ ಈ ಭಾಗದ ಮೂರು ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈ ಭಾಗದ ರೈತ ಮುಖಂಡರು ಅಧಿಕಾರಕ್ಕೆ ಬಂದ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಾಲೇ ಬಂದಿದ್ದರು. ಈಗ 4ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಈ ಕಾರ್ಯ ಈಡೇರಿದೆ. ಮಳೆಯಾಶ್ರಿತ ಪ್ರದೇಶವಾಗಿರುವ ಈ ಭಾಗದಲ್ಲಿ ರೈತರು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ದೊರೆಯಲಿದೆ’ ಎಂದರು.

ADVERTISEMENT

ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ‘ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬಹಳ ಉಪಯುಕ್ತವಾಗಿದೆ. ಈಗಾಗಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಠಾನ ಮಾಡಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದೆ. ನಮ್ಮ ಕ್ಷೇತ್ರದ ವ್ಯಾಪ್ತಿಯ ಬಹಳಷ್ಟು ಕೆರೆಗಳು ಇದರಲ್ಲಿ ಸೇರ್ಪಡೆಯಾಗಲಿವೆ. ಕೋಡಿಮೋಳೆ ಕೆರೆಗೆ ನೀರು ತುಂಬಿಸಿ. ಅಲ್ಲಿಂದ ಇತರೆ ಕೆರೆಗಳಿಗೆ ಹರಿಸಿದರೆ, ಚಂದಕವಾಡಿ ಭಾಗದ ಸಾಕಷ್ಟು ಪ್ರದೇಶಗಳು ಅಭಿವೃದ್ದಿಯಾಗುತ್ತವೆ’ ಎಂದರು.

ಸೋಮಹಳ್ಳಿ ಮಠದ ಸಿದ್ದಮಲ್ಲಪ್ಪ ಸ್ವಾಮೀಜಿ, ಅರಕಲವಾಡಿ ಮಠದ ಬಸವಣ್ಣ ಸ್ವಾಮೀಜಿ, ಕೆರೆ ನೀರು ತುಂಬಿಸುವ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾಗಶ್ರೀ ಪ್ರತಾಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಎಪಿಎಂಸಿ ಸದಸ್ಯ ರವಿಕುಮಾರ್, ಅರಕಲವಾಡಿ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ, ಯರಗನಹಳ್ಳಿ ಶಂಭಪ್ಪ, ವಡ್ಡರಹಳ್ಳಿ ರಾಜಶೇಖರ್ ಸೇರಿದಂತೆ ಅರಕಲವಾಡಿ, ಯಾನಹಳ್ಳಿ, ಲಿಂಗನಪುರ, ವಡ್ಡಗಲ್ಪುರ, ಹೊನ್ನಹಳ್ಳಿ , ಹೊಸಹಳ್ಳಿ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.