ADVERTISEMENT

ನಿಯಂತ್ರಣಕ್ಕೆ ಬಾರದ ಗಾಂಜಾ ಪ್ರಕರಣ

ಹನೂರು: ಗಾಂಜಾ ಬೆಳೆ, ಸಂಗ್ರಹ, ಮಾರಾಟದ ವ್ಯವಸ್ಥಿತ ಜಾಲ ಸಕ್ರಿಯ

ಬಿ.ಬಸವರಾಜು
Published 4 ಅಕ್ಟೋಬರ್ 2021, 15:59 IST
Last Updated 4 ಅಕ್ಟೋಬರ್ 2021, 15:59 IST
ಹನೂರು ತಾಲ್ಲೂಕಿನ ಚಿಕ್ಕಾಲತ್ತೂರು ಬಳಿ ಮೂರು ದಿನಗಳ ಹಿಂದೆ  10.8 ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದರು
ಹನೂರು ತಾಲ್ಲೂಕಿನ ಚಿಕ್ಕಾಲತ್ತೂರು ಬಳಿ ಮೂರು ದಿನಗಳ ಹಿಂದೆ  10.8 ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದರು   

ಹನೂರು: ತಾಲ್ಲೂಕಿನಲ್ಲಿ ಗಾಂಜಾ ಬೆಳೆಯುವವರು, ಸಂಗ್ರಹ ಮಾಡುವವರು ಹಾಗೂ ಮಾರಾಟ ಮಾಡುವವರ ಜಾಲ ಸಕ್ರಿಯವಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 14ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಪೊಲೀಸರು ಮಾತ್ರವಲ್ಲದೇ, ಅಬಕಾರಿ ಇಲಾಖೆಯ ಅಧಿಕಾರಿಗಳು ಕೂಡ ಕಾರ್ಯಾಚರಣೆ ನಡೆಸಿ, ಕೆಲವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ಖಚಿತ ಮಾಹಿತಿ ಅಥವಾ ಸುಳಿವು ದೊರೆತ ಪ್ರಕರಣಗಳನ್ನು ಮಾತ್ರ ಪೊಲೀಸರು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದು, ಎರಡೂ ಇಲಾಖೆಗಳ ಕಣ್ತಪ್ಪಿಸಿ ಗಾಂಜಾ ವಹಿವಾಟು ನಡೆಯುತ್ತಿರುವ ಬಗ್ಗೆಯೂ ಅನುಮಾನ ಹುಟ್ಟಿವೆ.

ADVERTISEMENT

ಹನೂರು ತಾಲ್ಲೂಕು ವ್ಯಾಪ್ತಿಯು ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು, ಜನ ವಸತಿ ಪ್ರದೇಶಗಳು ಕಡಿಮೆ ಇವೆ. ತೀರಾ ಒಳ ಪ್ರದೇಶಗಳಲ್ಲಿ ಜನರು, ಪೊಲೀಸರ ಕಣ್ತಪ್ಪಿಸಿ ಗಾಂಜಾ ಗಿಡಗಳನ್ನು ಎಗ್ಗಿಲ್ಲದೇ ಬೆಳೆಯಲಾಗುತ್ತಿದೆ.

ತಾಲ್ಲೂಕಿನ ವ್ಯಾಪ್ತಿಗೆ ಬರುವ ಹನೂರು, ರಾಮಾಪುರ ಹಾಗೂ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಗಾಂಜಾ ಪ್ರಕರಣಗಳು ದಾಖಲಾಗುತ್ತಲೇ ಇವೆ.

ಮೂರು ಠಾಣೆಗಳ ಪೈಕಿ ರಾಮಾಪುರ ಪೊಲೀಸ್ ಠಾಣೆಯೊಂದರಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಜಮೀನುಗಳಲ್ಲಿ ಫಸಲಿನ ಮಧ್ಯೆ ಗಾಂಜಾ ಬೆಳೆದು ಅದನ್ನು ಮೈಸೂರು, ಬೆಂಗಳೂರು, ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ನಿರಂತರವಾಗಿ ಸಾಗಿಸಲಾಗುತ್ತಿದೆ.

ರಾಮಾಪುರ ಠಾಣಾ ವ್ಯಾಪ್ತಿಯಲ್ಲಿ ಜನವರಿಂದ ಸೆಪ್ಟಂಬರ್‌ವರೆಗೆ 7 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ₹12 ಲಕ್ಷ ಮೌಲ್ಯದ 34 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಪ್ರಕರಣಗಳು ದಾಖಲಾಗಿವೆ. ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಅಬಕಾರಿ ಇಲಾಖೆಯು ನಾಲ್ಕು ಗಾಂಜಾ ಪ್ರಕರಣ ದಾಖಲಿಸಿದ್ದು, ಐವರನ್ನು ಬಂಧಿಸಿದೆ.

ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಳ್ಳಿ, ಭದ್ರಯ್ಯನಹಳ್ಳಿ, ಕುರಟ್ಟಿ ಹೊಸೂರು, ಚೆನ್ನೂರು, ಎಲ್.ಪಿಎಸ್ ಕ್ಯಾಂಪ್, ಚಿಕ್ಕಾಲತ್ತೂರು, ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪುಷ್ಪಾಪುರ, ವಿ.ಎಸ್ ದೊಡ್ಡಿ, ಅರ್ಧನಾರೀಪುರ, ಟಿಬೆಟಿಯನ್ ಕ್ಯಾಂಪ್, ತೋಮಿಯಾರ್ ಪಾಳ್ಯ, ಒಡೆಯರಪಾಳ್ಯ ಹಾಗೂ ಭೈರನತ್ತ ಮುಂತಾದ ಗ್ರಾಮಗಳಲ್ಲಿ ಗಾಂಜಾ ಬೆಳೆಯಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ಗಾಂಜಾ ಸಾಗಾಣೆ ಮಾಡುವಾಗ ಸಿಕ್ಕಿಬಿದ್ದಿರುವ ಆರೋಪಿಗಳಲ್ಲಿ ಬಹುತೇಕರು ಇದೇ ಗ್ರಾಮಗಳಿಗೆ ಸೇರಿದ್ದಾರೆ.

ಗಾಂಜಾ ದಂಧೆಯೇ ಉದ್ಯೋಗ

ಕೆಲವು ವ್ಯಕ್ತಿಗಳು ಗಂಜಾ ಸಂಗ್ರಹ, ಮಾರಾಟ ದಂಧೆಯನ್ನೇ ಉದ್ಯೋಗ ಮಾಡಿಕೊಂಡಿದ್ದು, ಪೊಲೀಸರಿಂದ ಬಂಧನಕ್ಕೆ ಒಳಗಾದರೂ, ಜಾಮೀನು ಪಡೆದ ನಂತರ ಇದೇ ದಂಧೆಯಲ್ಲಿ ತೊಡಗಿಸಿ
ಕೊಳ್ಳುತ್ತಿದ್ದಾರೆ. ಪೊಲೀಸರು ಕೂಡ ಇದನ್ನು ದೃಢಪಡಿಸಿದ್ದಾರೆ.

ಬೆಂಗಳೂರು, ಆಂಧ್ರದ ನಂಟು: ಕಳೆದ ವರ್ಷ ಬೆಂಗಳೂರಿನಲ್ಲಿ ಚಿತ್ರನಟಿಯರು ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಿದ್ದಂತೆ ಹನೂರು ಹಾಗೂ ರಾಮಾಪುರ ಪೊಲೀಸ್ ಠಾಣಾ ವ್ಯಾಪ್ತಿಯ 15 ಕ್ಕೂ ಹೆಚ್ಚು ಜನರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ಬೆಂಗಳೂರಿಗೆ ಗಾಂಜಾ ಸಾಗಣೆ ಮಾಡಿರುವ ಬಗ್ಗೆ ಅವರನ್ನು ವಿಚಾರಣೆ ಮಾಡಿ ಕಳುಹಿಸಿದ್ದರು.

ಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಗಾಂಜಾ ಸಾಗಾಟ ನಡೆಯುತ್ತದೆ. ಕಳೆದ ವರ್ಷ ಜಲ್ಲಿಪಾಳ್ಯದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು.

ತಾಲ್ಲೂಕಿನಲ್ಲಿ ಬೆಳೆದ ಗಾಂಜಾ ಪ್ರಾರಂಭದಲ್ಲಿ ಬೆಂಗಳೂರು, ಮೈಸೂರು ಹಾಗೂ ತಮಿಳುನಾಡಿಗೆ ಸಾಗಣೆಯಾಗುತ್ತಿತ್ತು. ಈಗ ಕಳ್ಳದಾರಿ ಮೂಲಕ ಆಂಧ್ರಕ್ಕೂ ರವಾನೆಯಾಗುತ್ತಿದೆ. ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ, ತಾಲ್ಲೂಕಿನ ಅಜ್ಜೀಪುರ ಗ್ರಾಮದ ವ್ಯಕ್ತಿಯೊಬ್ಬರು ಸಿಕ್ಕಿ ಬಿದ್ದಿದ್ದಾರೆ.

ಮುಸುಕಿನ ಜೋಳ ಮೂಟೆಗಳ ಮಧ್ಯೆ ಗಾಂಜಾ ಸಾಗಿಸಿ ಬಳಿಕ ಅದನ್ನು ನಗರದೊಳಗೆ ಮಾರಾಟ ಮಾಡುವ ಸಂದರ್ಭದಲ್ಲಿ ಆಂಧ್ರದ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ಅಜ್ಜೀಪುರ ಗ್ರಾಮದ ನಿವಾಸಿ ಎಂಬುದು ಗೊತ್ತಾಗಿದೆ.

–––

ಗಾಂಜಾ ಪ್ರಕರಣಗಳಲ್ಲಿ 2 ಬಾರಿ ಬಂಧಿತರಾದವರಿದ್ದಾರೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇವರ ಗಡಿಪಾರಿಗೆ ಕ್ರಮ ವಹಿಸಲಾಗುವುದು
ಸಂತೋಷ್ ಕಶ್ಯಪ್, ಹನೂರು ಠಾಣೆ ಇನ್‌ಸ್ಪೆಕ್ಟರ್‌

––

ಗಾಂಜಾ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿದ್ದೇವೆ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ದಂಧೆ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ
ನಂಜುಂಡಸ್ವಾಮಿ, ರಾಮಾಪುರ ಠಾಣೆ ಇನ್‌ಸ್ಪೆಕ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.