ಯಳಂದೂರು: ಸೇವೆ ಕಾಯಂಗಾಗಿ ಒತ್ತಾಯಿಸಿ ಗುತ್ತಿಗೆ ಕಾರ್ಮಿಕ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಕಾರಣ, ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಕಾಡಿದೆ. ಇದರಿಂದ ಎಲ್ಲೆಡೆ ಕಸದ ತ್ಯಾಜ್ಯ ಸಂಗ್ರಹಗೊಂಡಿದ್ದು, ರೋಗ ರುಜಿನ ಆವರಿಸುವ ಭೀತಿ ಮೂಡಿಸಿದೆ.
ಪಟ್ಟಣದ ಬಡಾವಣೆ, ರಸ್ತೆ, ಸಂತೆ ಹಾಗೂ ಹೊಳೆ ಸುತ್ತಮುತ್ತ ಕಸ ಸಂಗ್ರಹವಾಗುತ್ತಿದೆ. ಆಸ್ಪತ್ರೆ ಮತ್ತು ಹೋಟೆಲ್ ಸಮೀಪ ತ್ಯಾಜ್ಯವನ್ನು ಪೇರಿಸಲಾಗಿದೆ. ಮನೆ ಕಸ ಸಾಗಣೆಗೂ ಹಿನ್ನಡೆಯಾಗಿದ್ದು, ಬೀದಿಗೆ ಬಿದ್ದ ತ್ಯಾಜ್ಯ ಮಳೆಗೆ ಸಿಲುಕಿ ದುರ್ವಾಸನೆಗೆ ಕಾರಣವಾಗಿದೆ. ಕೆಲವೆಡೆ ನಾಯಿಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಚಲ್ಲಿದ ಪರಿಣಾಮ ದುರ್ನಾತ ಬೀರುತ್ತಿದೆ.
ಜನದಟ್ಟಣೆ ಸ್ಥಳದಲ್ಲೂ ಕಸ ರಾಶಿ ಬಿದ್ದಿದೆ. ಹಸಿ ಮತ್ತು ಒಣ ಕಸವನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ಬಿಸಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಮುಂಭಾಗ ಚೀಲಗಳಲ್ಲಿ ತುಂಬಿಸಿ ತ್ಯಾಜ್ಯವನ್ನು ಸುರಿಯಲಾಗಿದೆ. ಇದರಿಂದ ಬಡಾವಣೆಗಳಲ್ಲಿ ಕ್ರಿಮಿ, ಕೀಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ. ಮನೆಗಳ ಮುಂದೆಯೂ ಕಸದ ರಾಶಿ ಏರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ ಎಂದು ಪಟ್ಟಣದ ರಂಗಸ್ವಾಮಿ ದೂರಿದರು.
ದಿನ 2 ಟನ್ ಕಸ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರ ರಾಜ್ಯ ಸಂಘ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ ಮೇ 27ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಎಲ್ಲ ನೌಕರರು ಪಾಲ್ಗೊಂಡಿದ್ದು, ಪಟ್ಟಣದ ಸ್ವಚ್ಛತೆ ಸೇರಿದಂತೆ ಯಾವುದೇ ಕೆಲಸಗಳು ನಡೆದಿರುವುದಿಲ್ಲ. ಪಟ್ಟಣದಲ್ಲಿ ಪ್ರತಿ ದಿನ 2 ಟನ್ ಕಸ ಸಂಗ್ರಹವಾಗುತ್ತದೆ. ಮುಷ್ಕರದಲ್ಲಿ ನೌಕರರು ಭಾಗವಹಿಸಿದ್ದ ಪರಿಣಾಮ, ಕಸ ನಿರ್ವಹಣೆ ಸಮಸ್ಯೆ ಕಾಡಿದೆ. ಮುಷ್ಕರ ಬೇಗ ಕೊನೆಗೊಳ್ಳವ ನಿರೀಕ್ಷೆ ಇದ್ದು, ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.